ಉಡುಪಿ: ಮಣಿಪಾಲದ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿ ಮುರುಳಿ ಎನ್.ಡಿ. ಎಂಬಾತನನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಡ್ಡೇರಿಯಲ್ಲಿ ಮಣಿಪಾಲಪೊಲೀಸರು ಬಂಧಿಸಿದ್ದಾರೆ. ಆರೋಪಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣದ ಹಳೆಯ ಆರೋಪಿಯಾಗಿದ್ದಾನೆ.
ಜ. 28ರಂದು ಮಣಿಪಾಲದ ವಿದ್ಯಾರತ್ನ ನಗರದಲ್ಲಿರುವ ಅಪಾರ್ಟ್ ಮೆಂಟ್‌ನ 2ನೇ ಮಹಡಿಯಲ್ಲಿರುವ ಎರಡು ಕೊಠಡಿಗಳಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಲ್ಯಾಪ್‌ಟಾಪ್, ಕೆಮರಾ, ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಪರ್ಸ್, 3 ಮೊಬೈಲ್‌ಗಳನ್ನು ಕಳವು ಮಾಡಿದ್ದರು. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,23,500 ರೂ. ಆಗಿತ್ತು.
ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ತಂಡದ ಸದಸ್ಯರಾದ ಉಡುಪಿ ಡಿವೈಎಸ್‌ಪಿ ದಿನಕರ ಕೆಪಿ, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿವಿ, ಪಿಎಸ್‌ಐಗಳಾದ ನವೀನ್ ನಾಯ್ಕ, ರುಕ್ಮ ನಾಯ್ಕ, ಸಿಬಂದಿಗಳಾದ ಥಾಮ್ಸನ್, ಅಬ್ದುಲ್ ರಜಾಕ್, ಅರುಣ್ ಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.