ಉಡುಪಿ: ಅಂಬಲಪಾಡಿಯ ಶ್ಯಾಮಿಲಿ ಸಭಾಭವನದ ಹಿಂಬದಿ ಸಿಪಿಸಿ ಲೇಔಟ್ ಎಂಬಲ್ಲಿನ ನಾಗಬನದಲ್ಲಿದ್ದ ಶ್ರೀಗಂಧ ಮರ ಕಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಉಡುಪಿ ಅರಣ್ಯ ಇಲಾಖೆಯವರು ಜ.25ರಂದು ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಮೂಡುಬೆಳ್ಳೆ ನಿವಾಸಿ ಅಶೋಕ ಬಂಧಿತ ಆರೋಪಿ. ನಾಗಬನದಲ್ಲಿ ಶ್ರೀಗಂಧದ ಮರ ಕಡಿಯುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಉಡುಪಿ ವಲಯದ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ಕೇಶವ ಪೂಜಾರಿ ಎಂ.ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕರಾದ ಎಚ್.ದೇವರಾಜ ಪಾಣ, ಅಭಿಲಾಷ್ ಎಸ್.ಬಿ.ಮತ್ತು ವಿತೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯಿಂದ ಸುಮಾರು 43 ಕೆ.ಜಿ.ಹಸಿ ಶ್ರೀಗಂಧವನ್ನು ದಸ್ತಗಿರಿ ಮಾಡಲಾಗಿದೆ. ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ.ನಾಯಕ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಮಾರ್ಗದರ್ಶನದಂತೆ ಉಡುಪಿ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆಯ್ಲಿ ಉಡುಪಿ ಘಟಕದ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ, ಪಡುಬಿದ್ರಿ ಘಟಕದ ಉಪ ವಲಯ ಅರಣ್ಯಾಧಿಕಾರಿ ಜೀವನದಾಸ ಶೆಟ್ಟಿ, ಗಸ್ತು ಅರಣ್ಯ ಪಾಲಕರಾದ ಮಂಜುನಾಥ ಬಿ.ನಾಯ್ಕ, ವಾಹನ ಚಾಲಕ ಜೋಯಿ ಪಾಲ್ಗೊಂಡಿದ್ದರು.
Related Articles
ಇದನ್ನೂ ಓದಿ: ಕೊಡಗು ಜಿಲ್ಲಾಡಳಿತದ ಪ್ರಯತ್ನಕ್ಕೆ ಸಂದ ಜಯ: ಕುವೈತ್ ನಲ್ಲಿ ಸಿಲುಕಿದ್ದ ಮಹಿಳೆ ಸುರಕ್ಷಿತವಾಗಿ ತಾಯ್ನಾಡಿಗೆ