Advertisement

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

03:59 AM Oct 24, 2024 | Team Udayavani |

ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ, 2025ರ ಜ.15ರೊಳಗೆ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಗುತ್ತಿಗೆದಾರರಿಂದ ಸಂಚಾರ ಪೊಲೀಸ್‌ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಒಂದೊಮ್ಮೆ ಈ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಠಾಣೆಯಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.

Advertisement

ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಪ್ರದೇಶಕ್ಕೆ ಬುಧವಾರ ಬೆಳಗ್ಗೆ ಶಾಸಕ ಯಶ್‌ಪಾಲ್‌ ಸುವರ್ಣ ಜತೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, 2018ರಲ್ಲಿ ಈ ಕಾಮಗಾರಿ ಆರಂಭವಾಗಿದ್ದು, ರೈಲ್ವೆ ಇಲಾಖೆ ವಿಳಂಬದಿಂದ ವೇಗ ಪಡೆದುಕೊಂಡಿಲ್ಲ. 138 ಟನ್‌ ತೂಕದ ಗರ್ಡರ್‌ ಅಳವಡಿಸುವ ಯೋಜನೆ ಇದಾಗಿದ್ದು, ಸೇತುವೆಯ ಉದ್ದವನ್ನು 38 ಮೀಟರ್‌ ನಿಂದ 58 ಮೀಟರ್‌ಗೆ ಹೆಚ್ಚಿಸಲಾಗಿದೆ. ಹೀಗಾಗಿ ಗರ್ಡರ್‌ಗಳಿಗೆ ಅಳವಡಿಸುವ ಸ್ಟೀಲ್‌ 420 ಟನ್‌ಗೆ ಏರಿಕೆಯಾಗಿದೆ. 12.50 ಮೀಟರ್‌ ಅಗಲ ಬರಲಿದ್ದು, ಇದರಲ್ಲಿ ಎರಡು ಕಡೆ 1.50 ಮೀಟರ್‌ ಪಾದಚಾರಿ ಮಾರ್ಗ ಇರಲಿದೆ ಎಂದರು.

ಜ.15ರೊಳಗೆ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗುವುದು. ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಎಫ್‌ಐಆರ್‌ ದಾಖಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ರಾಫಿಕ್‌ ಜಾಮ್‌ ಹೆಚ್ಚಾಗುತ್ತಿದೆ ಮತ್ತು ಅಪಘಾತಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದೇವೆ ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಮೇಲ್ಸೇತುವೆಯನ್ನು ಆದಷ್ಟು ಬೇಗ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎರಡು ಇಲಾಖೆಗಳು ಸಮನ್ವಯದಿಂದ ಆದಷ್ಟು ಬೇಗ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.

ರಾ.ಹೆ.169ಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ನಾಯಕ್‌, ನಗರಸಭೆ ಸದಸ್ಯರಾದ ಅಶೋಕ್‌ ನಾಯ್ಕ, ಗಿರೀಶ್‌ ಅಂಚನ್‌, ಭಾರತಿ ಪ್ರಶಾಂತ್‌ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advertisement

ರಾಜ್ಯ ಸರಕಾರದ ವಿರುದ್ಧ ಸಂಸದ ಕೋಟ ಆಕ್ರೋಶ
ಉಡುಪಿ: ರಾಜ್ಯದಲ್ಲಿ ಪಡಿತರ ವ್ಯವಸ್ಥೆ ಅತ್ಯಂತ ಗೊಂದಲದಲ್ಲಿದೆ. ಬಡವರಿಗೆ ರೇಷನ್‌ ವಿತರಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಸರ್ವರ್‌ ಡೌನ್‌ ನೆಪವೊಡ್ಡಿ ಕೇವಲ 5-6 ಶೇ. ಕಾರ್ಡ್‌ದಾರರಿಗೆ ಮಾತ್ರ ಪಡಿತರ ನೀಡಲಾಗಿದೆ. ಕಾರ್ಡ್‌ ರದ್ದತಿಯನ್ನು ನಿಲ್ಲಿಸದಿದ್ದರೆ ಬಿಜೆಪಿ ವತಿಯಿಂದ ವಿಧಾನಸೌಧ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿಯಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ಸರ್ವರ್‌ ಡೌನ್‌ ಎಂದು ಹೇಳಿ ಜನ ಕಾಯುವ ಪರಿಸ್ಥಿತಿ ಉಂಟಾಗಿದೆ. ಹೊಸ ಸರ್ವರ್‌ ಮಾಡುವ ಯೋಚನೆ ಇದ್ದರೆ, ಒಂದು ತಿಂಗಳು ಮ್ಯಾನ್‌ವಲ್‌ ವ್ಯವಸ್ಥೆಯಡಿ ಪಡಿತರ ವಿತರಣೆ ಮಾಡಬೇಕು. ಮ್ಯಾನುವಲ್‌ ಆಗಿಯೂ ನೀಡುತ್ತಿಲ್ಲ, ಬಯೋಮೆಟ್ರಿಕ್‌ ಆಗುತ್ತಿಲ್ಲ. ನೂರು ಜನ ನಿಂತರೆ 25 ಜನರಿಗೆ ರೇಷನ್‌ ಸಿಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next