Advertisement

ನೀರಿನ ಸಮಸ್ಯೆಗೆ ಉಡುಪಿ ನಗರವೇ ತತ್ತರ

11:13 PM May 07, 2019 | sudhir |

ಉಡುಪಿ: ಉಡುಪಿ ನಗರದಲ್ಲಿ ಇದುವರೆಗೆ ಕಂಡರಿಯದ ರೀತಿಯ ನೀರಿನ ಸಮಸ್ಯೆ ಎದುರಾಗಿದೆ. ಐದು ದಿನಗಳಿಂದ ನಗರಕ್ಕೆ ಹನಿ ನೀರು ಕೂಡ ನಳ್ಳಿ ಮೂಲಕ ಸರಬರಾಜು ಆಗಿಲ್ಲ. ಹಿಂದೆಲ್ಲ ನಗರಸಭೆ ವತಿಯಿಂದ ಟ್ಯಾಂಕರ್‌ ಮೂಲಕವಾದರೂ ನೀರು ಕೊಡುತ್ತಿದ್ದರು. ಈ ಬಾರಿ ಅದೂ ಇಲ್ಲವಾಗಿದೆ. ನಗರ ವಸ್ತುಶಃ ನೀರಿಲ್ಲದೆ ತತ್ತರಿಸುತ್ತಿದೆ.

Advertisement

ಕೆಲವು ದಿನಗಳಿಂದ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿತ್ತು. ಆದರೆ ಉಡುಪಿಗೆ ನೀರುಣಿಸುವ ಬಜೆಯಲ್ಲಿ ಪೂರ್ತಿ ನೀರು ಖಾಲಿ ಆಗುವವರೆಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಇದ್ದುದು ಪರಿಸ್ಥಿತಿ ಬಿಗಡಾಯಿಸಲು ಕಾರಣ.

ಒಂದೆಡೆ ಏರುತ್ತಿರುವ ಬಿಸಿಲ ಝಳ, ಇನ್ನೊಂದೆಡೆ ನೀರಿನ ಕೊರತೆ. ಇದರ ನಡುವೆ ನಗರದ ಜನತೆ ಹೈರಣಾಗಿದ್ದಾರೆ. ಮೂರು ದಿನಗಳಿಗೆ ಹೇಗೊ ಹೊಂದಾಣಿಕೆ ಮಾಡುತ್ತಿದ್ದ ಸಾಮಾನ್ಯ ಜನರು ಈಗ ಒಂದೊಂದು ಕೊಡಪಾನ ನೀರಿಗಾಗಿಯೂ ಪರದಾಡುತ್ತಿದ್ದಾರೆ. ದಿನ ನಿತ್ಯದ ಅಗತ್ಯಕ್ಕೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ನಗರದ ಚಿಕ್ಕ ಪುಟ್ಟ ಹೊಟೇಲ್‌, ಲಾಡ್ಜ್, ರೆಸ್ಟೋರೆಂಟ್‌ಗಳಿಗೂ ನೀರಿನ ಬಿಸಿ ತಟ್ಟಿ ದ್ದು, ಕೂಡಲೇ ಪೂರೈಕೆಯಾಗದಿದ್ದಲ್ಲಿ ಬಂದ್‌ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳುತ್ತಿದ್ದಾರೆ.

ಹೊಟೇಲ್‌ ಉದ್ಯಮಕ್ಕೆ ನೀರಿನ ಬಿಸಿ
ಉಡುಪಿ- ಮಣಿಪಾಲದಲ್ಲಿ ಸಸ್ಯಾಹಾರಿ, ಮಾಂಸಾಹಾರಿ, ಲಾಡಿjಂಗ್‌ ಸಹಿತ ಒಟ್ಟು 700ಕ್ಕೂ ಅಧಿಕ ಹೊಟೇಲ್‌ಗ‌ಳಿವೆ. ಕೆಲವರು ಬಾವಿ, ಬೋರ್‌ವೆಲ್‌ ಹೊಂದಿದ್ದರೂ ಬಹುತೇಕರು ನಗರಸಭೆಯ ನೀರನ್ನು ನಂಬಿಕೊಂಡಿದ್ದಾರೆ.

Advertisement

ಪ್ರವಾಸಿಗರ ಸಂಖ್ಯೆ ಹೆಚ್ಚಳ
ಮೇ ತಿಂಗಳಿನಲ್ಲಿ ರಜೆ ಇರುವ ಕಾರಣ ನಗರಕ್ಕೆ ಬರುವ ಪ್ರವಾಸಿಗಳ ಸಂಖ್ಯೆ ಹೆಚ್ಚಾಗಿದ್ದು, ಊಟ, ತಿಂಡಿಗಾಗಿ ಅವರು ಹೊಟೇಲ್‌ ಆಶ್ರಯಿಸಿದ್ದಾರೆ. ಹೊಟೇಲ್‌ ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ನೀರಿನ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದೆ.

ಟ್ಯಾಂಕರ್‌ ನೀರಿನ ದರ ಏರಿಕೆ!
ನಗರಕ್ಕೆ ಖಾಸಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಯಾಗುತ್ತಿದೆ. 12 ಸಾವಿರ ಲೀ. ಒಂದು ಟ್ಯಾಂಕರ್‌ನ ಬೆಲೆ ಇದೀಗ 2,800 ರೂ. ನಿಂದ 3,700 ರೂ ವರೆಗೆ ಏರಿಕೆಯಾಗಿದೆ.

ಖಾಸಗಿ ಟ್ಯಾಂಕರ್‌ಗೂ ನೀರಿಲ್ಲ
ಟ್ಯಾಂಕರ್‌ ಮಾಲಕರಿಗೆ ದೂರವಾಣಿ ಕರೆ ನೀಡಿದರೆ “ಕ್ಷಮಿಸಿ ಸಾರ್‌, ನೀರಿಲ್ಲ’ ಎಂಬ ಉತ್ತರ ಬರುತ್ತಿದೆ. ಹಣ ಕೊಟ್ಟರೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಒಂದು ಬದಿಯಿಂದ ನಗರಸಭೆಯಿಂದಲೂ ನೀರಿಲ್ಲ, ಇನ್ನೊಂದೆಡೆ ಖಾಸಗಿಯಿಂದಲೂ ನೀರಿಲ್ಲದ ಸ್ಥಿತಿ.

ಶ್ರೀಕೃಷ್ಣಮಠಕ್ಕೂ ತಪ್ಪಿಲ್ಲ ನೀರಿನ ಬಿಸಿ
ಶ್ರೀಕೃಷ್ಣ ಮಠಕ್ಕೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಪ್ರತಿನಿತ್ಯ 4 ಟ್ಯಾಂಕರ್‌ ನೀರು ಹೊರಗಿ ನಿಂದ ತರಿಸಲಾಗುತ್ತದೆ.
ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತರ ಸಂಖ್ಯೆ ಹೆಚ್ಚಿದ್ದಾಗ ನೀರಿನ ಅಭಾವ ಕಾಡುವುದರಿಂದ ಟ್ಯಾಂಕರ್‌ ನೀರಿಗೆ ಮೊರೆ ಹೋಗಬೇಕಾಗುವುದು ಅನಿವಾರ್ಯ.

ಶ್ರೀಕೃಷ್ಣಮಠಕ್ಕೆ ಶ್ರೀ ಶೀರೂರು ಮಠದ ಬಾವಿ, ಶ್ರೀ ರಾಘವೇಂದ್ರ ಮಠದ ಬಾವಿಯಿಂದಲೂ ನೀರಿನ ಪೂರೈಕೆಯಾಗುತ್ತದೆ. ಅಲ್ಲದೆ ಮಠದ ಬಾವಿಗಳ ನೀರನ್ನು ಅಡುಗೆಗೆ ಮಾತ್ರ ಬಳಸಲಾಗುತ್ತದೆ ಎಂದು ಶ್ರೀಕೃಷ್ಣಮಠದ ಮೂಲಗಳು ತಿಳಿಸಿವೆ.

ನಗರಸಭೆಯಿಂದ ಟ್ಯಾಂಕರ್‌ ವ್ಯವಸ್ಥೆಯೇ ಮಾಡಿಲ್ಲ!
ಟೆಂಡರ್‌ ಪ್ರಕ್ರಿಯೆಯನ್ನು ಅಧಿಕಾರಿಗಳು ಸರಿಯಾಗಿ ನಡೆಸದೇ ಇರುವುದರಿಂದ ನಗರಸಭೆ ವತಿಯಿಂದ ಇನ್ನೂ ಟ್ಯಾಂಕರ್‌ ನೀರು ಪೂರೈಕೆ ಆರಂಭಗೊಂಡಿಲ್ಲ. ಈ ಹಿಂದೆ ಸಮಸ್ಯೆಯಾದಾಗ ನಗರಸಭೆ ವತಿಯಿಂದಲಾದರೂ 2-3 ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಈ ವ್ಯವಸ್ಥೆಯೂ ಇಲ್ಲದೆ ನೀರೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ನಗರಸಭಾ ಸದಸ್ಯರು ಸ್ವಂತ ವೆಚ್ಚದಿಂದ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಇದು ಎಲ್ಲರ ಸಮಸ್ಯೆ
ನೀರಿನ ಸಮಸ್ಯೆ ಕೇವಲ ಒಂದು ವಾರ್ಡ್‌ನ ಸಮಸ್ಯೆಯಲ್ಲ. ಈ ಕೊಡಲೇ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ. ಮನೆಯಲ್ಲಿ ನೀರಿಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ.
-ಹಿತೇಶ್‌ ಬನ್ನಂಜೆ

ವಾರದಿಂದ ನೀರಿಲ್ಲ
ಒಂದು ವಾರದಿಂದ ನೀರು ಬರುತ್ತಿಲ್ಲ. ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಜನರ ಸಮಸ್ಯೆಯನ್ನು ಅರಿತು ಪರಿಹರಿಸುವ ಕಾರ್ಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಂದ ನಡೆಯಬೇಕಾಗಿದೆ.
-ವಿಜಯ ಕುಮಾರ್‌, ಶಿರಿಬೀಡು.

ನೀರಿನ ಸಮಸ್ಯೆ ತೀವ್ರ
ಹೊಟೇಲ್‌, ಲಾಡಿjಂಗ್‌ ಉದ್ಯಮಗಳಿಗೆ ನೀರಿನ ಸಮಸ್ಯೆ ನಿರ್ವಹಿಸುವುದೇ ಕಷ್ಟವಾಗಿದೆ. ಬಾವಿ, ಬೋರ್‌ವೆಲ್‌ಗ‌ಳಲ್ಲಿಯೂ ಜಲಮೂಲ ತೀರ ಕೆಳಮಟ್ಟಕ್ಕೆ ತಲುಪಿದೆ. ಚಿಕ್ಕ ಹೊಟೇಲ್‌ಗ‌ಳು ನೀರಿಗಾಗಿ ಸಾವಿರಾರು ರೂ. ಖರ್ಚು ಮಾಡುತ್ತಿದ್ದಾರೆ. ಮಳೆ ಬಾರದಿದ್ದರೆ ಈ ಉದ್ಯಮ ನಡೆಸುವುದೇ ದೊಡ್ಡ ಸವಾಲು.
– ಡಾ| ತಲ್ಲೂರು ಶಿವರಾಮ್‌ ಶೆಟ್ಟಿ,
ಜಿÇÉಾ ಹೊ ಟೇಲ್‌ ಮಾಲಕರ
ಸಂಘದ ಅಧ್ಯಕ್ಷರು

ಬಂದ ಲಾಭ ನೀರಿಗೆ
ಕಳೆದ ಒಂದು ತಿಂಗಳಿನಿಂದ ನಾವು ಟ್ಯಾಂಕರ್‌ ನೀರನ್ನು ಬಳಸಿಕೊಂಡು ಹೊಟೇಲ್‌ ಉದ್ಯಮ ನಡೆಸುತ್ತಿದ್ದೇವೆ. ನೀರಿಗಾಗಿ ಸಾವಿರಾರು ರೂ. ವ್ಯಯಿಸುವ ಕಾಲ ಬಂದಿದೆ. ಬಂದಿರುವ ಲಾಭವನ್ನು ನೀರಿಗೆ ಖರ್ಚು ಮಾಡಬೇಕಾಗಿದೆ.
-ಶಂಕರ್‌, ಶಿರಿಬೀಡು ಕ್ಯಾಂಟೀನ್‌ ಮಾಲಕ

Advertisement

Udayavani is now on Telegram. Click here to join our channel and stay updated with the latest news.

Next