Advertisement

ಉಡುಪಿ ನಗರದ ಮನೆಗಳಿಗೂ ತಟ್ಟಿದೆ ನೀರಿನ ಬಿಸಿ!

09:14 PM Apr 10, 2019 | sudhir |

ಉಡುಪಿ: ಲೋಕಸಭಾ ಚುನಾವಣೆಯ ಕಾವು ಒಂದೆಡೆ ಏರುತ್ತಿದ್ದು ಯಾವ ಅಧಿಕಾರಿಯನ್ನು ಕೇಳಿದರೂ ಚುನಾವಣೆ ಕರ್ತವ್ಯ ಎಂದು ನುಣುಚಿಕೊಳ್ಳುತ್ತಿದ್ದಾರೆ.

Advertisement

ಪ್ರಸ್ತುತ ನಗರದಲ್ಲಿ ನೀರಿನ ಸಮಸ್ಯೆ ದಿನಕ್ಕೊಂದು ರೂಪ ಪಡೆಯುತ್ತಿದೆ. ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರ ಪರಿಣಾಮ ನಗರ ದಲ್ಲಿ ನೀರಿನ ಸಮಸ್ಯೆಯಿಂದಾಗಿ ಹಲವು ಸಮಸ್ಯೆ ತಲೆ ದೋರಿದ್ದು, ಅಡುಗೆ, ಸ್ನಾನ, ಬಟ್ಟೆ ತೊಳೆಯಲು ಅಡಚಣೆ ಯಾಗಿದೆ.

ಅಸಮರ್ಪಕ ನೀರು ಪೂರೈಕೆ
ಹೆರ್ಗ ಗ್ರಾಮದ ಶೆಟ್ಟಿಬೆಟ್ಟು , ಗ್ಯಾಟ್‌ಸನ್‌, ಪ್ರಸಾದ್‌ ಸರ್ಕಲ್‌ ಸೇರಿದಂತೆ ಇತರೆ ಕಡೆಗಳಲ್ಲಿ ಅಸಮರ್ಪಕ ನೀರು ಪೂರೈಕೆಯಿಂದ ಜನರು ಪರದಾಡುತ್ತಿದ್ದಾರೆ.

ವಾರ್ಡ್‌ಗಳಿಗೆ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿರುವುದರಿಂದಾಗಿ ನೀರು ಸರಬರಾಜು ಮಾಡುವ ಪೈಪ್‌ಗ್ಳು ಗಾಳಿ ತುಂಬಿ ಒಡೆದು ಹೋಗಿವೆ. ಒಡೆದು ಹೋದ ಪೈಪ್‌ಲೈನ್‌ ನಗರದ ಪ್ರಮುಖ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಹೆಚ್ಚಿನ ಪೈಪ್‌ಲೈನ್‌ ಒಡೆದು ಹೋಗುತ್ತಿವೆ. ನಗರ ಸಭೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ವಾಗುತ್ತಿಲ್ಲ. ರಿಪೇರಿ ಮಾಡಿದರೂ ಮತ್ತೂಮ್ಮೆ ನೀರು ಬಿಡುವಾಗ ಮತ್ತೆ ನೀರಿನ ಪೈಪ್‌ಗ್ಳು ಒಡೆದು ಹೋಗುತ್ತಿವೆ.

ಪೈಪ್‌ಲೈನ್‌ ದುರಸ್ತಿಗೆ ಕ್ರಮ ಅವಶ್ಯ
ಕಳೆದ ಬಾರಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. 2017ರ ಅವಧಿಯಲ್ಲಿ ನಗರಕ್ಕೆ ನೀರಿನ ಬಿಸಿ ತಟ್ಟಿತ್ತು. ಅದೇ ಪರಿಸ್ಥಿತಿ ಈ ಬಾರಿಯೂ ಬರಲಿದೆ ಎನ್ನುವ ಆತಂಕ ಜನರಲ್ಲಿ ಕಾಡುತ್ತಿದೆ. ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ 3 ದಿನಗಳಿಗೊಮ್ಮೆ ಬರುವ ನೀರು ಸರಿಯಾಗಿ ಬರುತ್ತಿಲ್ಲ. ನೀರಿನ ಪೈಪ್‌ ಒಡೆದು ಹೋಗುತ್ತದೆ ಎನ್ನುವ ನಿಟ್ಟಿನಲ್ಲಿ ನಳ್ಳಿಯಲ್ಲಿ ನಿಧಾನ ಗತಿಯಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಅನೇಕ ಮನೆಗಳಿಗೆ ನೀರು ದೊರಕುತ್ತಿಲ್ಲ. ಆದುದರಿಂದ ಟ್ಯಾಂಕರ್‌ ಮೂಲಕವಾದರೂ ನೀರು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಜನರು ಮನವಿ ಮಾಡುತ್ತಿದ್ದಾರೆ.

Advertisement

ನೀರಿನ ಪ್ರಮಾಣ ಕಡಿಮೆ
ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಪ್ರಸಕ್ತ ಡ್ಯಾಂನಲ್ಲಿ ಇರುವ ನೀರು ಮುಂದಿನ 15 ದಿನಗಳ ವರೆಗೆ ಮಾತ್ರ ನಗರದ ಜನರಿಗೆ ಸಾಕಾಗಲಿದ್ದು, ಮುಂದೆ ನೀರಿಗಾಗಿ ಏನು ಮಾಡುವುದು ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಟ್ಯಾಂಕರ್‌ ನೀರಾದರೂ ನೀಡಿ
ಕಳೆದ ಒಂದು ವಾರದಿಂದ ಗ್ಯಾಟ್‌ಸನ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ನೀರು ಸರಬರಾಜು ಮಾಡುವ ನೀರಿನ ಪೈಪ್‌ಲೈನ್‌ಗಳು ಒಡೆದು ಹೋಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿ ದರೂ ಯಾವುದೇ ರೀತಿಯ ಪರಿಹಾರ ದೊರಕಿಲ್ಲ. ನೀರು ಸರಬರಾಜು ಆಗದೇ ಇರುವ ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕವಾದರೂ ನೀರು ನೀಡಿದರೆ ಒಳಿತು.
-ಸ್ಥಳೀಯರು

15 ದಿನಗಳಿಗಷ್ಟೇ ನೀರು ಲಭ್ಯ
ಪ್ರಸ್ತುತ ಬಜೆ ಡ್ಯಾಂ ನಲ್ಲಿ 3.44 ಮೀ. ನೀರು ಲಭ್ಯವಿದ್ದು, ಕಳೆದ ಬಾರಿ ಇದೇ ಸಮಯಕ್ಕೆ 4.49 ಮೀ. ಲಭ್ಯವಿತ್ತು. ರೇಶನಿಂಗ್‌ ಮಾಡದಿದ್ದರೆ ಈ ನೀರು 15 ದಿನಗಳಿಗಷ್ಟೇ ಸಾಕಾಗಲಿದೆ.
– ರಾಘವೇಂದ್ರ, ಪರಿಸರ ಎಂಜಿನಿಯರ್‌, ನಗರಸಭೆ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next