ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈಗಿರುವುದು ಬಿಜೆಪಿ ಮತ್ತು ಜೆಡಿಎಸ್ – ಕಾಂಗ್ರೆಸ್‌ಗಳ ನಡುವಿನ ಹಣಾಹಣಿಯಷ್ಟೇ ಅಲ್ಲ. ಇಲ್ಲಿ ವ್ಯಕ್ತಿಗತ ರಾಜಕೀಯ ಕಾದಾಟ ಒಂದು ಹೆಜ್ಜೆ ಮುಂದಿದೆ!
ಉಡುಪಿಯ ರಾಜಕೀಯ ವಲಯದಲ್ಲಿ ಕಳೆದೊಂದು ದಶಕದಿಂದ “ಸಾಂಪ್ರದಾಯಿಕ ಎದುರಾಳಿಗಳು’ ಎಂದೇ ಗುರುತಿಸಲ್ಪಟ್ಟಿರುವ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ (ಈಗ ಮೈತ್ರಿ ಅಭ್ಯರ್ಥಿ) ಮತ್ತು ಬಿಜೆಪಿಯ ಕೆ. ರಘುಪತಿ ಭಟ್ (ಹಾಲಿ ಶಾಸಕ) ಈ ಚುನಾವಣೆಯಲ್ಲಿಯೂ ಪರಸ್ಪರ ತೊಡೆ ತಟ್ಟಿಕೊಂಡು ಕಣಕ್ಕಿಳಿದಿದ್ದಾರೆ. ಸ್ಪರ್ಧೆ ಪ್ರಮೋದ್ ಮತ್ತು ಶೋಭಾ ನಡುವೆ; ಆದರೂ ಉಡುಪಿ ವಿಚಾರಕ್ಕೆ ಬಂದಾಗ ಈ ಚುನಾವಣೆ ಪ್ರಮೋದ್ ಮತ್ತು ಭಟ್ ನಡುವಣ ಕಾದಾಟವಾಗಿದೆ!
ದಾನ ಧರ್ಮ, ಕುಡಿಯುವ ನೀರು (ವಿಶೇಷವಾಗಿ ಟ್ಯಾಂಕರ್ ನೀರು), ಮರಳು, ಅನುದಾನ, ಮೀನುಗಾರರ ಸಮಸ್ಯೆ, ಅಭಿವೃದ್ಧಿ- ಇವು ಇವರೀರ್ವರ ನಡುವಿನ ನೇರಾ ನೇರ ಟೀಕೆಯ ವಿಷಯಗಳು. ಈ ಬಾರಿ ಭಟ್ ಪಾಳಯದ ಹುಮ್ಮಸ್ಸು ಚುನಾವಣೆ ಘೋಷಣೆ ಆದಾಗ, ಶೋಭಾ ಅಭ್ಯರ್ಥಿ ಆದಾಗ ಇದ್ದುದಕ್ಕಿಂತ ಪ್ರಮೋದ್ ಎದುರಾಳಿ ಎಂದು ಘೋಷಣೆಯಾದಾಗ ಇಮ್ಮಡಿಸಿತು.
ರಘುಪತಿ ಭಟ್ ಅಲ್ಲಲ್ಲಿ ಸಭೆ, ಮನೆ ಭೇಟಿ ನಡೆಸುವತ್ತ ಮತಬೇಟೆ ಆರಂಭಿಸಿದ್ದಾರೆ. ಪ್ರಮೋದ್ ಮಧ್ವರಾಜ್ ಇಡೀ ಲೋಕಸಭಾ ಕ್ಷೇತ್ರ ಸುತ್ತಾಡಬೇಕಾಗಿರುವುದರಿಂದ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾರರ ಬಳಿಗೆ ಸ್ವತಃ ತೆರಳಲು ಸಾಧ್ಯವಾಗುತ್ತಿಲ್ಲ. ಆದರೂ ತನ್ನ ವಿಧಾನಸಭಾ ಕ್ಷೇತ್ರದ ಗರಿಷ್ಠ ಮತಗಳು ತನಗೇ ಸಿಗಬೇಕು ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಉಡುಪಿ ಕಡೆಗೆ ಪ್ರಚಾರಕ್ಕೆ ಬಂದಾಗಲೆಲ್ಲ ಜನರನ್ನು ನೇರವಾಗಿಯೇ ಭೇಟಿಯಾಗುತ್ತಿದ್ದಾರೆ. ಮತಯಾಚನೆಯಲ್ಲಿ ಭಟ್ ಮತ್ತು ಪ್ರಮೋದ್ ನಡುವಣ ಪೈಪೋಟಿ ಬಿರುಸುಗೊಂಡಿದೆ. ಇವರಿಬ್ಬರ ಅಭಿಮಾನಿಗಳು ಕೂಡ ಹಾಗೆಯೇ; ಪಕ್ಷಕ್ಕಿಂತಲೂ ತಮ್ಮ ನಾಯಕರ ಗೆಲುವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ತಾಸು ಹೆಚ್ಚೇ ದುಡಿಯುವವರು.
ಸಹಪಾಠಿಗಳಾದರೂ ಇವರೀರ್ವರು ರಾಜಕೀಯವಾಗಿ ಕಟ್ಟಾ ವಿರೋಧಿಗಳು. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ (2008 ಮತ್ತು 2018) ಪರಸ್ಪರ ಎದುರಿಸಿದ್ದಾರೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಪ್ರಮೋದ್ ಅವರು ಭಟ್ ಅವರೆದುರು 2,479 ಮತಗಳಿಂದ ಮತ್ತು 2018ರಲ್ಲಿ 12,044 ಮತಗಳಿಂದ ಗೆದ್ದಿದ್ದಾರೆ. 2013ರ ಚುನಾವಣೆಯಲ್ಲಿ ಭಟ್ ಸ್ಪರ್ಧಿಸಿರಲಿಲ್ಲ. ಬಿಜೆಪಿಯ ಸುಧಾಕರ ಶೆಟ್ಟಿ ಅವರು ಪ್ರಮೋದ್ ಎದುರಾಳಿಯಾಗಿದ್ದರು. ಆಗ ಪಕ್ಷದ ಅಭ್ಯರ್ಥಿ ಪರವಾಗಿ ರಘುಪತಿ ಭಟ್ ಪ್ರಮೋದ್ ವಿರುದ್ಧ ಪ್ರಚಾರ ಮಾಡಿದ್ದರು. ಅಂತಿಮವಾಗಿ ಪ್ರಮೋದ್ 39,524 ಅಂತರದಿಂದ ಜಯಭೇರಿ ಬಾರಿಸಿದ್ದರು. ಆದರೆ ಮರುವರ್ಷವೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಕಾಂಗ್ರೆಸ್‌ಗಿಂತ 32,674 ಅಧಿಕ ಮತಗಳನ್ನು ಗಳಿಸಿತ್ತು!
ಸಂತೋಷ್ ಬೊಳ್ಳೆಟ್ಟು