Advertisement

Udupi: ಜಾತಿ ವ್ಯವಸ್ಥೆ ಒಳ್ಳೆಯದು, ನಾನು ಯಾವ ಜಾತಿ ಎಂಬುದೇ ಗೊತ್ತಿರಲಿಲ್ಲ: ಯದುವೀರ್

04:08 PM Sep 29, 2024 | Team Udayavani |

ಉಡುಪಿ: ಚುನಾವಣೆಗೆ ಮೊದಲು ನನಗೆ ನಾನು ಯಾವ ಜಾತಿ ಎಂಬುದೇ ಗೊತ್ತಿರಲಿಲ್ಲ. ಮೈಸೂರು ರಾಜ ವಂಶಸ್ಥರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬುದು ನನಗೆ ತಿಳಿದಿರಲಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ನಾನು ಹಿಂದುಳಿದ ವರ್ಗಗಳ ಅಭ್ಯರ್ಥಿ ಎಂಬ ವಿಚಾರದಿಂದ ನನ್ನ ಜಾತಿ ಗೊತ್ತಾಯಿತು ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

Advertisement

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ರವಿವಾರ (ಸೆ.29) ಕುಂಜಿಬೆಟ್ಟು ಶಾರದ ಕಲ್ಯಾಣ ಮಂಟಪದಲ್ಲಿ ಕರಾವಳಿಯ ಸಾಹಿತಿಗಳು – ಕಲಾವಿದರು – ಲೇಖಕರು – ಕವಿಗಳು – ಚುಟುಕು ಬರಹಗಾರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರಾಜವಂಶಸ್ಥರು ಹಿಂದುಳಿದ ವರ್ಗದವರು ಎಂದು ಹೇಳಿದರೆ ಎಲ್ಲರೂ ನಗುತ್ತಾರೆ. ಅದಕ್ಕಾಗಿ ನನಗೆ ಜಾತಿ ಲೆಕ್ಕದಲ್ಲಿ ಅಲ್ಲ, ಎಲ್ಲ ಸಮುದಾಯವನ್ನು ಪ್ರತಿನಿಧಿಸುವ ಸೌಭಾಗ್ಯ ಸಿಕ್ಕಿರುವುದು ಸಂತೋಷ ತಂದಿದೆ. ನಮ್ಮ ದೇಶದಲ್ಲಿ ಒಂದು ರೀತಿಯಲ್ಲಿ ಜಾತಿ ವ್ಯವಸ್ಥೆ ಇರುವುದು ಒಳ್ಳೆಯದಾಗಿದೆ. ಈ ಮೂಲಕ ಭಾರತೀಯ ವೈವಿಧ್ಯತೆಯನ್ನು ಸಂರಕ್ಷಣೆ ಮಾಡಬಹುದಾಗಿದೆ. ಆದರೆ ಇನ್ನೊಂದು ಅರ್ಥದಲ್ಲಿ ಜಾತಿ ಶಾಪವು ಕೂಡ ಆಗಿದೆ. ಇದನ್ನು ಬೇರೆಬೇರೆ ಕಾರಣಗಳಿಂದ ದುರಪಯೋಗಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಾತಿಯನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಾಗಿರುವುದು ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯ ತತ್ವದಡಿ ಒಗ್ಗೂಡಬೇಕು

ನಾವೆಲ್ಲರೂ ಕನ್ನಡ ಭಾಷೆಯ ಮೂಲಕ ಒಗ್ಗಟ್ಟಾಗಿದ್ದೇವೆ. ಇದಕ್ಕೂ ಮುಖ್ಯವಾಗಿ ಭಾರತೀಯರಾಗಿ ಒಗ್ಗಟ್ಟಾಗಿರುವುದು ಬೇಕಾಗಿದೆ. ಪ್ರತಿಯೊಬ್ಬ ಭಾರತೀಯ ಕನ್ನಡಿಗ ಅಲ್ಲ, ಆದರೆ ಪ್ರತಿಯೊಬ್ಬ ಕನ್ನಡಿಗ ಕೂಡ ಭಾರತೀಯ ಎಂಬ ತತ್ವದಡಿಯಲ್ಲಿ ನಾವು ಮುಂದುವರೆಯಬೇಕಿರುವುದು ಇಂದಿನ ಅಗತ್ಯವಾಗಿದೆ. ಕಲಾವಿದರು ರಾಷ್ಟ್ರೀಯತೆ, ಭಾರತಕ್ಕೆ ನೇತೃತ್ವ ವಹಿಸಿಕೊಂಡು ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ನಮ್ಮ ಕಲೆ, ಪರಂಪರೆ, ಭಾಷೆ ವಿಚಾರದಲ್ಲಿ ಕನ್ನಡದ ಸಾಹಿತ್ಯ ಪಾತ್ರ ಅತ್ಯಂದ ಅಮೂಲ್ಯವಾಗಿದೆ. ಈ ಪ್ರಾಮುಖ್ಯತೆಯನ್ನು ಗಮನಿಸಿಯೇ ಅಂದು ಮೈಸೂರು ಸಂಸ್ಥಾನದವರಿಂದ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತನ್ನು ರಚಿಸಲಾಯಿತು. ಎಲ್ಲ ಕಾಲಘಟ್ಟದಲ್ಲಿಯೂ ಕಲೆ ಮತ್ತು ಕಲಾವಿದರು ಸಂಸ್ಕೃತಿ, ಭಾಷೆ ಅಸ್ತಿತ್ವ ಉಳಿಯಲು ಮಹತ್ವದ ಕೊಡುಗೆಯಾಗುತ್ತಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾಾರ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಈಶ್ವರ ನಾಯಕ್, ದಿನೇಶ್ ಅಮೀನ್, ಶಿಲ್ಪಾಾ ಸುವರ್ಣ, ವಿಠಲ ಪೂಜಾರಿ, ಈಶ್ವರ್ ನಾಯ್‌ಕ್‌, ಪೃಥ್ವಿರಾಜ್ ಶೆಟ್ಟಿ, ಸಂಧ್ಯಾ ರಮೇಶ್, ಕಮಲಾಕ್ಷ ಹೆಬ್ಬಾರ್, ಚಂದ್ರ ಪಂಚವಟಿ, ಕುಮಾರ್ ದಾಸ, ರೂಢಫ್ ಡಿ’ಸೋಜಾ, ಎ. ಎನ್. ಮಹಾಂತೇಶ್ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳ ಕಲಾವಿದರು, ಸಾಹಿತಿಗಳನ್ನು ಸಮ್ಮಾನಿಸಲಾಯಿತು.

ಜಿಲ್ಲಾ ಒಬಿಸಿ ಮೋರ್ಚಾ ವಿಜಯಕೊಡವೂರು ಪ್ರಾಸ್ತಾವನೆಗೈದು ಸ್ವಾಗತಿಸಿದರು. ಅನಂತರ ಜರಗಿದ ಗೋಷ್ಠಿಯಲ್ಲಿ ಬರಹಗಾರ ಪ್ರೇಮ್‌ಶೇಖರ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ವಾಗ್ಮಿಗಳಾದ ಡಾ ಆರತಿ ಬಿ.ವಿ., ಪ್ರಕಾಶ್ ಮಲ್ಪೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next