Advertisement

Udupi: ದೇವಸ್ಥಾನಕ್ಕೆ ಹೋಗಿ ಹಿಂತಿರುಗುವ ವೇಳೆ ಅಪಘಾತ… ವ್ಯಕ್ತಿ ಮೃತ್ಯು

09:23 PM Oct 09, 2024 | Team Udayavani |

ಉಡುಪಿ: ಇಂದ್ರಾಳಿ ದೇವಸ್ಥಾನದಲ್ಲಿ ಮಧ್ಯಾಹ್ನ ಊಟ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅದೇ ಪರಿಸರದಲ್ಲಿ ಹಿಂದಿನಿಂದ ಅತೀ ವೇಗದಲ್ಲಿ ಬಂದ ಇಕೋ ವಾಹನ ಢಿಕ್ಕಿ ಹೊಡೆದ ಕಾರಣ ಪಡುಬಿದ್ರಿ ನಿವಾಸಿ, ಮಣಿಪಾಲ ಯುನಿಟ್‌-5 ಉದ್ಯೋಗಿ ದೀಪೇಶ್‌ ದೇವಾಡಿಗ(36) ಗಂಭೀರ ಗಾಯಗೊಂಡು ಚಿಕಿತ್ಸೆ ಫ‌ಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದರು. ಮೃತರು ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

Advertisement

ನವರಾತ್ರಿ ಹಿನ್ನೆಲೆಯಲ್ಲಿ ಕೆಲವೊಂದು ದೇವಸ್ಥಾನಗಳಿಗೆ ಇವರು ಮಧ್ಯಾಹ್ನದ ವೇಳೆ ಭೇಟಿ ನೀಡಿ ಪ್ರಸಾದ ಸ್ವೀಕರಿಸುತ್ತಿದ್ದರು. ಬುಧವಾರ ಪರ್ಕಳದ ನಿವಾಸಿ ಪ್ರವೀಣ್‌ ಅವರೊಂದಿಗೆ ದೇವಸ್ಥಾನಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ವಾಹನವನ್ನು ಕೆಳಭಾಗದಲ್ಲಿ ನಿಲ್ಲಿಸಿ ಊಟ ಮುಗಿಸಿ ನಡೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಜನರು ಓಡಾಟ ಮಾಡಿಕೊಂಡಿದ್ದರು. ಇವರು ಕೂಡ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಹಿಂದುಗಡೆ ನಿಂತಿದ್ದ ವಾಹನ ಏಕಾಏಕಿ ಆಗಮಿಸಿ ಢಿಕ್ಕಿ ಹೊಡೆದಿದೆ. ಇವರ ಜತೆಗಿದ್ದ ಪ್ರವೀಣ್‌ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಕೂಡ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಇತರ 4ರಿಂದ 5 ಮಂದಿಗೂ ವಾಹನ ಢಿಕ್ಕಿ ಹೊಡೆದಿದ್ದು, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪರಾಗಿದ್ದಾರೆ.

ಘಟನೆಗೆ ಕಾರಣವೇನು?
ವಾಹನ ರಸ್ತೆಯಲ್ಲಿ ನಿಂತಿದ್ದು, ಅದರೊಳಗೆ ಪ್ರಯಾಣಿಕರೂ ಇದ್ದು, ಇನ್ನೊಬ್ಬರ ಬರುವಿಕೆಗಾಗಿ ಕಾಯುತ್ತಿದ್ದರು. ಈ ವೇಳೆ ವಾಹನ ಒಮ್ಮೆಲೇ ಅತೀ ವೇಗದಿಂದ ಮುಂದಕ್ಕೆ ಬಂದಿದೆ. ಕೆಲವು ಮಂದಿ ಬ್ರೇಕ್‌ ಫೈಲ್‌ನಿಂದ ಈ ಅವಘಡ ನಡೆದಿದೆ ಎನ್ನುತ್ತಾರೆ ಕೆಲವು ಪ್ರತ್ಯೇಕ್ಷದರ್ಶಿಗಳು. ಆದರೆ ಕೆಲವೇ ತಿಂಗಳ ಹಿಂದೆ ಖರೀದಿಸಿದ್ದ ವಾಹನದಲ್ಲಿ ಬ್ರೇಕ್‌ ಫೈಲ್‌ ಆಗುವುದಾದರೂ ಹೇಗೆ ಎಂಬ ಪ್ರಶ್ನೆಯೂ ಎದ್ದಿದೆ. ಎರಡೂ ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದ ಕಾರಣ ಭಯದಿಂದ ಚಾಲಕ ಬ್ರೇಕ್‌ನಲ್ಲಿದ್ದ ಕಾರು ಎಕ್ಸಲೇಟರ್‌ಗೆ ಅದುಮಿದ ಕಾರಣ ಈ ಘಟನೆ ನಡೆದಿರುವ ಸಾಧ್ಯತೆಗಳೂ ಅಧಿಕವಿದೆ ಎಂದೂ ಅಲ್ಲಿರುವವರು ಕೆಲವರು ತಿಳಿಸಿದ್ದಾರೆ.

ಉತ್ತಮ ಕ್ರೀಡಾಪಟು
ಕ್ರಿಕೆಟ್‌ ಆಟದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ದೀಪೇಶ್‌ ಪಡುಬಿದ್ರಿ ಪರಿಸರ, ಮಂಗಳೂರು, ಉಡುಪಿ, ಮಣಿಪಾಲದ ಸಹಿತ ಮಣಿಪಾಲ ಸಂಸ್ಥೆ ಆಯೋಜಿಸಿದ್ದ ಹಲವಾರು ಕ್ರಿಕೆಟ್‌ ಪಂದ್ಯಾಕೂಟಗಳಲ್ಲಿ ಭಾಗವಹಿಸಿದ್ದ. ಕ್ರೀಡೆಯ ಬಗ್ಗೆ ಬಹುತೇಕ ಎಲ್ಲ ರೀತಿಯ ಮಾಹಿತಿಗಳೂ ಇವನಲ್ಲಿತ್ತು. 3 ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ. ಈ ಹಿಂದೆ ಮಣಿಪಾಲ ಸಂಸ್ಥೆಯ ಪ್ಯಾಕೇಜಿಂಗ್‌ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಅನಂತರ 3 ತಿಂಗಳ ಹಿಂದೆ ಸ್ಟೋರ್ ವಿಭಾಗದಲ್ಲಿ ಕರ್ತವ್ಯ ಮಾಡಿಕೊಂಡಿದ್ದರು.

ಅಪಾಯಕಾರಿ ರಸ್ತೆ
ನವರಾತ್ರಿ ಪ್ರಯುಕ್ತ ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಈ ರಸ್ತೆ ಏರುತಗ್ಗಿನಿಂದ ಕೂಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಮಣ್ಣ ಎದ್ದುಹೋಗಿದ್ದು, ಹೊಂಡಗಳಂತಾಗಿದೆ. ಈ ನಡುವೆ ವಾಹನಗಳು ಮೇಲ್ಗಡೆಯೇ ಹೋಗುವ ಕಾರಣ ಪಾದಚಾರಿಗಳಿಗೆ ನಡೆದಾಡಲೂ ಸ್ಥಳವಿಲ್ಲದಂತಹ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ವಾಹನಗಳನ್ನು ಕೆಳಗೆ ಇರಿಸಿಕೊಂಡು ನಡೆದುಕೊಂಡು ಹೋದರಷ್ಟೇ ಇಂತಹ ಅವಘಡಗಳನ್ನು ತಪ್ಪಿಸಲು ಸಾಧ್ಯವಿದೆ. ಹಿರಿಯ ನಾಗರಿಕರು ಹಾಗೂ ವಿಐಪಿ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳನ್ನು ಕೆಲ ಭಾಗದಲ್ಲಿಯೇ ನಿಲ್ಲಿಸಿದರೆ ಇಲ್ಲಿ ಉಂಟಾಗುವ ಟ್ರಾಫಿಕ್‌ ದಟ್ಟನೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯರು.

Advertisement
Advertisement

Udayavani is now on Telegram. Click here to join our channel and stay updated with the latest news.

Next