Advertisement

ಉಡುಪಿ: ಅಭಿವೃದ್ಧಿ ಕಾಣದ ಬೀಡಿನಗುಡ್ಡೆ ಬಯಲು ರಂಗ ಮಂದಿರ

06:06 PM Feb 03, 2023 | Team Udayavani |

ಉಡುಪಿ: ನಗರದಲ್ಲಿ ಸುಸಜ್ಜಿತ ಬಯಲು ರಂಗ ಮಂದಿರದ ಬೇಡಿಕೆಯಂತೆ ನಿರ್ಮಾಣಗೊಂಡ ಬೀಡಿನಗುಡ್ಡೆ ಬಯಲು ರಂಗಮಂದಿರದ ಕಾಂಪೌಂಡ್‌ವಾಲ್‌ ಕುಸಿದು ಹಲವು ವರ್ಷ ಕಳೆದರೂ ದುರಸ್ತಿಪಡಿಸುವ ಅಥವಾ ಅಭಿವೃದ್ಧಿಪಡಿಸುವ ಕಾರ್ಯ ನಡೆದಿಲ್ಲ. 98 ಲಕ್ಷ ರೂ. ವೆಚ್ಚದಲ್ಲಿ ಕ್ರೀಡೆ, ಉತ್ಸವ, ಸಾರ್ವಜನಿಕ ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯಡಿ, ರಿಯಾಯಿತಿ ದರದಲ್ಲಿ ಸಭಾಂಗಣ ಒದಗಿಸುವ ಉದ್ದೇಶದಿಂದ ಬಯಲು ರಂಗಮಂದಿರ ನಿರ್ಮಿಸಲಾಗಿತ್ತು. ಪ್ರತೀ ವರ್ಷ ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ಜತೆಗೆ ವಿವಿಧ ಸಂಘ-ಸಂಸ್ಥೆಗಳಿಂದ ಕ್ರಿಕೆಟ್‌, ಕಲಾ ಚಟುವಟಿಕೆಗಳು, ಉತ್ಸವ, ಮೇಳಗಳ ಆಯೋಜನೆಗೂ ಅನುಮತಿ ನೀಡಲಾಗುತ್ತಿತ್ತು.

Advertisement

ವ್ಯವಸ್ಥಿತವಾಗಿಸಿದರೆ ಅನುಕೂಲ
ಕೋವಿಡ್‌ ಅನಂತರ ಬೀಡಿನಗುಡ್ಡೆ ರಂಗ ಮಂದಿರವು ಸೌಲಭ್ಯ ಮತ್ತು ನಿರ್ವಹಣೆ ಕೊರತೆಯಿಂದ ಮಹತ್ವ ಕಳೆದುಕೊಂಡು ದುಃಸ್ಥಿತಿಗೆ ತಲುಪಿದೆ. ಕೆಲವು ದಿನಗಳ ಕಾಲ ಮೈದಾನದಲ್ಲಿ ಗಿಡಗಂಟಿಗಳು ಬೆಳೆದು, ಮೂಲ ಸೌಕರ್ಯ ಅವ್ಯವಸ್ಥೆಯ ಆಗರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಮೈದಾನ ಒಳಭಾಗದಲ್ಲಿ ಸ್ವತ್ಛಗೊಳಿಸಿ ಇದೀಗ ಕೆಲವು ಕಾರ್ಯಕ್ರಮ, ಸಭೆ, ಪ್ರದರ್ಶನ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಕ್ರಿಕೆಟ್‌ ಕೋಚಿಂಗ್‌ ಸಹ ನಡೆಯುತ್ತಿರುವುದರಿಂದ ಮೈದಾನ ಚಟುವಟಿಕೆ ಯಿಂದ ಕೂಡಿದೆ. ಕುಸಿದು ಬಿದ್ದ ರಂಗಮಂದಿರದ ಆವರಣಗೋಡೆ ದುರಸ್ತಿಗೊಳಿಸಿ ಬಯಲು ರಂಗಮಂದಿರ ವ್ಯವಸ್ಥಿತವಾಗಿಸಿದರೆ ಉತ್ತಮ ಎನ್ನುತ್ತಾರೆ ಸ್ಥಳೀಯರು.

ಬಯಲು ಮಂದಿರ ಬಳಕೆಗೆ ಶುಲ್ಕವೆಷ್ಟು?
ಆರಂಭದಲ್ಲಿ 24 ಗಂಟೆ ಬಳಕೆಗೆ 25 ಸಾವಿರ ರೂ. ಮತ್ತು ಕ್ರಿಕೆಟ್‌ ಆಟಕ್ಕೆ 10 ಸಾವಿರ ರೂ. ನಿಗದಿಪಡಿಸಲಾಗಿತ್ತು, ಶುಲ್ಕ ಹೆಚ್ಚಳದ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ 24 ಗಂಟೆ ಬಳಕೆಗೆ 15 ಸಾವಿರ ರೂ., ಕ್ರಿಕೆಟ್‌ಗೆ 5 ಸಾವಿರ ರೂ. ನಿಗದಿಪಡಿಸಲಾಯಿತು. ಒಂದು ದಿನಕ್ಕಿಂತ ಹೆಚ್ಚು ಕಾಲ ನಡೆಸುವ ಪ್ರದರ್ಶನ, ಮೇಳ ಕಾರ್ಯಕ್ರಮಗಳಿಗೆ ಮೂಲ ಶುಲ್ಕದಲ್ಲಿ ಶೇ.20 ಹೆಚ್ಚುವರಿ ಶುಲ್ಕ ಪಾವತಿಸಬೇಕು.ಭದ್ರತಾ ಠೇವಣಿ 5 ಸಾವಿರ ರೂ. ಕಟ್ಟಬೇಕು. ನೀರು, ವಿದ್ಯುತ್‌ ಶುಲ್ಕ ಪ್ರತ್ಯೇಕ ಪಾವತಿಸಬೇಕು.

ತಿಂಗಳಿಗೆ ಕಾವಲುಗಾರನ ವೇತನ 17 ಸಾವಿರ ರೂ. ಮತ್ತು 1,500 ರೂ. ವಿದ್ಯುತ್‌ಬಿಲ್‌ ಸಹಿತ ಒಟ್ಟು 18,500 ರೂ. ನಿರ್ವಹಣ ವೆಚ್ಚ ನಗರಸಭೆಗೆ ತಗಲುತ್ತದೆ. ಅಪರೂಪಕ್ಕೊಮ್ಮೆ ಕ್ರಿಕೆಟ್‌, ಇನ್ನಿತರ ಕ್ರೀಡಾಕೂಟ, ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವುದರಿಂದ ತಿಂಗಳ ನಿರ್ವಹಣೆ ವೆಚ್ಚ ಭರಿಸಲು ನಗರಸಭೆಗೆ ಸವಾಲಾಗಿದೆ. ರಂಗಮಂದಿರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಿ, ನಿರಂತರ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಂಡಲ್ಲಿ ಬಹುತೇಕ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಕುಸಿದ ಆವರಣಗೋಡೆ
ಎರಡು ಕಡೆಗಳಲ್ಲಿ ಆವರಣ ಗೋಡೆ ಕುಸಿದುಬಿದ್ದಿದೆ. ಗೋಡೆಗೆ ಲಾರಿ ಢಿಕ್ಕಿಯಾಗಿ ಹಾನಿ ಸಂಭವಿಸಿದೆ. ಇದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಇನ್ನೊಂದು ಮಳೆಗಾಲದಲ್ಲಿ ಮಳೆಯ ರಭಸಕ್ಕೆ ಕುಸಿದು ಬಿದ್ದಿರುವುದಾಗಿದೆ. ಇದಕ್ಕೆ ತಾಗಿಕೊಂಡು ಇನ್ನಷ್ಟು ಭಾಗವು ಕುಸಿದು ಬೀಳುವ ಹಂತದಲ್ಲಿದೆ. ಬಯಲು ರಂಗಮಂದಿರ ನಿರ್ವಹಣೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಪೌರಾಯುಕ್ತ ಸದಸ್ಯ ಕಾರ್ಯದರ್ಶಿಯಾಗಿ, ಶಾಸಕರು, ನಗರಾಭಿವೃದ್ಧಿ ಕೋಶದ ಯೊಜನಾ ನಿರ್ದೇಶಕ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ತಹಶೀಲ್ದಾರ್‌ ಸದಸ್ಯರಾಗಿದ್ದಾರೆ. ಈ ಸಮಿತಿಯು ಸಭೆ ನಡೆಸಿ ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಭಾಗಕ್ಕೆ ಬಸ್‌ ಸೌಕರ್ಯ ಮತ್ತು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಾಗರಿಕರ ಆಶಯ.

Advertisement

ದುರಸ್ತಿಗೆ ಶೀಘ್ರ ಕ್ರಮ
ಬಯಲುರಂಗ ಮಂದಿರ ನಿರ್ವಹಣೆ ಮತ್ತು ಸ್ವತ್ಛತೆಗೆ ವಿಶೇಷ ಅದ್ಯತೆ ನೀಡಲಾಗುತ್ತಿದೆ. ಕುಸಿದ ಆವರಣ ಗೋಡೆ ದುರಸ್ತಿಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಇದನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.
– ಡಾ| ಉದಯಕುಮಾರ್‌ ಶೆಟ್ಟಿ, ಪೌರಾಯುಕ್ತರು, ನಗರಸಭೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next