ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವತಿಯಿಂದ ಡಿ.14ರಂದು ಶತಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಅವಿಭಜಿತ ದ.ಕ.ಜಿಲ್ಲೆಯ ಪ್ರಖ್ಯಾತ ಆಗಮ ಶಾಸ್ತ್ರಜ್ಞರು, ವೇದಮೂರ್ತಿ ಗಳು, ಜಿಲ್ಲೆಯ ತಂತ್ರಿಗಳು ಸಹಿತ ಒಟ್ಟು 500 ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಶತ ಚಂಡಿಕಾಯಾಗ ಆರಂಭಗೊಂಡು 10ಕ್ಕೆ ಪೂರ್ಣಾಹುತಿ ನಡೆಯಲಿದೆ. ಶತಚಂಡಿಕಾಯಾಗದಲ್ಲಿ 150ಕ್ಕಿಂತ ಅಧಿಕ ಮಂದಿ ಸೇವಾಕರ್ತರು ಸ್ವತಃ ಸಂಕಲ್ಪಮಾಡಿ ಪೂರ್ಣಹುತಿಗೆ ತಾವೇ ಪರಿಕರಗಳನ್ನು ಸಮರ್ಪಿಸಲಿದ್ದಾರೆ.
ಸಾರ್ವಜನಿಕರು ಕೂಡ ತಾವು ತಂದ ಪರಿಕರಗಳನ್ನು ಅರ್ಪಿಸಬಹುದು. ದುರ್ಗಾರತಿಗೆ ಮಹಿಳೆಯರಿಂದಲೇ ವಿಶೇಷ ಕೌಂಟರ್, ಪ್ರಸಾದ ವಿತರಣೆಗೆ ಕೌಂಟರ್, ಮಾಹಿತಿ ಕೇಂದ್ರ, ದೇವರಿಗೆ ಸೇವೆ ಸಲ್ಲಿಸಲು ಕೌಂಟರ್ ತೆರೆಯಲಾಗಿದೆ. ದೇವಸ್ಥಾನದ ಉತ್ತರ ಬದಿಯ ಮುದ್ದಣ್ಣ ಎಸ್ಟೇಟ್, ದಕ್ಷಿಣ ಭಾಗದಲ್ಲಿ ಪಶುಸಂಗೋಪನ ಆಸ್ಪತ್ರೆಯ ಆವರಣ, ಪಶ್ಚಿಮ ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಅಲ್ಲಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ, 500 ಸ್ವಯಂ ಸೇವಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಆಗಮಿಸಲಿ ದ್ದಾರೆ. ದೇವಸ್ಥಾನ ಪ್ರಾಂಗಣ ದಲ್ಲಿ ರೋಹಿತ್ ಮುದ್ದಣ್ಣ ಶೆಟ್ಟಿ ಸಭಾಂ ಗಣ, ಅನ್ನಪೂರ್ಣ ಭೋಜನ ಶಾಲೆ, ವಾಸುದೇವ ಕೃಪಾ ಶಾಲೆಯ ಆವರಣದಲ್ಲಿ ಕುಳಿತುಕೊಂಡು ಅನ್ನಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ.
ವಿವಿಧ ಖಾದ್ಯದೊಂದಿಗೆ ಪಂಚ ಭಕ್ಷ್ಯ ಪರಮಾನವಿದ್ದು, ಮಧ್ಯಾಹ್ನ 12ಕ್ಕೆ ಅನ್ನಪ್ರಸಾದ ಆರಂಭವಾಗಲಿದೆ. ಸುಮಾರು 15ರಿಂದ 20 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವಾ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಮುದ್ದಣ್ಣ ಶೆಟ್ಟಿ ತಿಳಿಸಿದ್ದಾರೆ.
ಸಹಸ್ರಾರು ಮಹಿಳೆಯರಿಂದ ಏಕಕಾಲದಲ್ಲಿ ದುರ್ಗಾರತಿ
ಜಿಲ್ಲೆಯ ದೇವಸ್ಥಾನಗಳ ಇತಹಾಸದಲ್ಲೇ ಪ್ರಥಮ ಬಾರಿಗೆ ಅದೇ ದಿನ ಸಂಜೆ 6ಕ್ಕೆ ಸಹಸ್ರಾರು ಮಹಿಳೆಯರಿಂದ ಏಕಕಾಲದಲ್ಲಿ ದುರ್ಗಾರತಿ ನಡೆಯಲಿದೆ. ಆಸಕ್ತರು ದೇವಸ್ಥಾನದ ಕಚೇರಿಯಲ್ಲಿ ಮುಂಗಡವಾಗಿ ತಮ್ಮ ಹೆಸರು ನೋಂದಾಯಿಸಬೇಕು. ಆರತಿ ತಟ್ಟೆಯನ್ನು ದೇವಸ್ಥಾನದ ವತಿಯಿಂದಲೇ ಒದಗಿಸಲಾಗುವುದು. ಮಹಿಳೆಯರು ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಅರ್ಥಿಕ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳತ್ತೂರು ತಿಳಿಸಿದ್ದಾರೆ.