Advertisement

ಉಡುಪಿ: 12 ವರ್ಷಗಳ ಹಾವಿನ ವಿಷ ದ್ವೇಷ; ಕೊನೆಗೂ ಆರೋಪಿಗಳು ಖುಲಾಸೆ

10:11 PM Nov 03, 2022 | Team Udayavani |

ಉಡುಪಿ: ಕರಾವಳಿ ಮತ್ತು ಮಲೆನಾಡಿನಲ್ಲಿ ಸಂಚಲನ ಮೂಡಿಸಿದ್ದ, ಹೆಬ್ರಿ ಸಮೀಪದ ಬೆಳಂಜೆ ತೆಂಕೋಲದಲ್ಲಿ 12 ವರ್ಷಗಳ ಹಿಂದೆ ನಡೆದ ಭಾಗೀರಥಿ(32) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್‌ ಆರೋಪವನ್ನು ಸಾಬೀತುಪಡಿಸಲು ವಿಫ‌ಲರಾಗಿರುವ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಿ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ದಿನೇಶ್‌ ಹೆಗ್ಡೆ ಅವರು ಆದೇಶಿಸಿದ್ದಾರೆ.

Advertisement

ಘಟನೆ ವಿವರ:

ಈ ಸಾವಿನ ಬಗ್ಗೆ ಅನುಮಾನ ಇದ್ದ ಕಾರಣ ಮೃತ ಭಾಗೀರಥಿಯ ಸಹೋದರ ಎನ್‌.ವಿ.ಕುಮಾರ್‌ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಮುಖ್ಯಮಂತ್ರಿಗಳು ಉಡುಪಿ ಎಸ್‌ಪಿ ಅವರಿಗೆ ತನಿಖೆ ಮಾಡುವಂತೆ ಆದೇಶಿಸಿದ್ದರು. ಅನಂತರ ಎಸ್‌ಪಿಯವರು ಡಿಸಿಐಬಿ ಇನ್‌ಸ್ಪೆಕ್ಟರ್‌ ಗಣೇಶ್‌ ಹೆಗ್ಡೆ ಅವರಿಗೆ ತನಿಖಾಧಿಕಾರಿಯಾಗಿ ನೇಮಿಸಿದ್ದರು. ಅದರಂತೆ ತನಿಖೆ ನಡೆಸಿದ ಅವರು ಮೃತರ ಪತಿ ಸುರೇಶ್‌ ಪ್ರಭು ಹಾಗೂ ಇತರ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ 57 ಸಾಕ್ಷ್ಯಾಧಾರಗಳನ್ನು ಒಳಗೊಂಡ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದಂತೆ ಹಾಸನದ ವೈದ್ಯ ಡಾ| ಸುರೇಶ್‌ ಪ್ರಭು ಹಾಗೂ ಮೃತ ಭಾಗೀರಥಿಯು ದಂಪತಿಯಾಗಿದ್ದು, ಇವರ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಬಾರದೆ ವೈಮನಸ್ಸು ಉಂಟಾಗಿದ್ದರಿಂದ ಅವರು ವಿಚ್ಛೇದನ ನೀಡಲು ಬಯಸಿದ್ದರು. ಆದರೆ ಭಾಗೀರಥಿ ಇದಕ್ಕೆ ಒಪ್ಪದಿದ್ದರಿಂದ ಅಸಮಾಧಾನಗೊಂಡ ಆರೋಪಿಯು ತಾನು ಬೇರೆ ಮದುವೆಯಾಗಿ ನೆಮ್ಮದಿಯಿಂದ ಇರಬೇಕಾದರೆ ಭಾಗೀರಥಿಯು ಸಾಯಲೇಬೇಕೆಂದುಕೊಂಡು ಆಕೆ ಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಈ ಬಗ್ಗೆ ತನ್ನ ಸ್ನೇಹಿತ ಮಂಜ ಯಾನೆ ಮಂಜುನಾಥ್‌ ಅವನೊಡನೆ ವಿಷಯ ತಿಳಿಸಿದ್ದ.

ವಿಷದ ಇಂಜೆಕ್ಷನ್‌! :

ಮಂಜುನಾಥನಿಗೆ ಈ ವಿಷಯ ತಿಳಿಸುತ್ತಿದ್ದಂತೆ ಆತ ಭಾಗೀರಥಿಗೆ ನಾಗರಹಾವಿನ ವಿಷವನ್ನು ಇಂಜೆಕ್ಷನ್‌ ಮೂಲಕ ಚುಚ್ಚಿ ಆಕೆಯನ್ನು ಕೊಲೆ ಮಾಡಿದರೆ ಆಕೆಗೆ ಹಾವು ಕಚ್ಚಿ ಮೃತಪಟ್ಟಿದ್ದಾಳೆಂದು ಎಲ್ಲರನ್ನೂ ನಂಬಿಸಬಹುದು ಎಂಬುದಾಗಿ ತಿಳಿಸಿ ಅದಕ್ಕೆ ಪೂರಕವಾದ ಸಂಚು ರೂಪಿಸಿದ್ದರು. ಬಳಿಕ ಮಂಜುನಾಥ್‌ ಹಾಗೂ ನಿರಂಜನ್‌ ರಾಜ್‌ ಅರಸ್‌ ಯಾನೆ ಅಚ್ಚನಿ ಅವರು ಸೇರಿ ಏಡ್ಸ್‌ ಹಾಗೂ ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆ ಬಗ್ಗೆ ನಾಗರಹಾವಿನ ವಿಷ ಬೇಕಾಗಿದೆ ಎಂದು ತಮ್ಮ ಪರಿಚಯದ ಹಾಸನದ ಹಾವಾಡಿಗ ಕೇಶವನಲ್ಲಿ ಸುಳ್ಳು ಹೇಳಿ ನಂಬಿಸಿದ್ದರು. ಅದರಂತೆ ಕೇಶವನು ನಾಗರಹಾವಿನಿಂದ ವಿಷವನ್ನು ಕಕ್ಕಿಸಿ ತೆಗೆದು ನೀಡಿದ್ದ. ಭಾಗೀರಥಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಂಜುನಾಥ ಹಾಗೂ ನಿರಂಜನ್‌ ರಾಜ್‌ ಅರಸ್‌ ನಾಗರಹಾವಿನ ವಿಷವನ್ನು ಸಂಗ್ರಹಿಸಿ ಸುರೇಶ್‌ ಪ್ರಭುವಿಗೆ ನೀಡಿದ್ದರು.

Advertisement

ಪತಿಯಿಂದ ಕೊಲೆಗೆ ಸಂಚು :

ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸುರೇಶ್‌ ಪ್ರಭು 2010ರ ಜ.5ರಂದು ಹಾಸನದ ಜಿಲ್ಲಾ ಸ್ಟೇಡಿಯಂ ಬಳಿ ಸಂಚು ರೂಪಿಸಿದ್ದಾನೆ. ಇದನ್ನು ಕಾರ್ಯಗತಗೊಳಿಸಲು ಜ.6ರಂದು ಬೆಳಗ್ಗೆ ಮಂಜುನಾಥ್‌ ನೀಡಿದ್ದ ನಾಗರಹಾವಿನ ವಿಷದಲ್ಲಿ ಸ್ವಲ್ಪ ಒಂದು ಸಿರೀಂಜ್‌ಗೆ ಲೋಡ್‌ ಮಾಡಿ ತಾನೇ ಇಟ್ಟುಕೊಂಡು ಉಳಿದ ವಿಷವನ್ನು ಸಣ್ಣ ಬಾಟಲಿ ಹಾಗೂ ಇನ್ನೊಂದು ಸಿರಿಂಜನ್ನು ಮಂಜುನಾಥನಿಗೆ ನೀಡಿ ಆತನೊಡನೆ ಮಾರುತಿ 800 ಕಾರಿನಲ್ಲಿ ನಿರಂಜನ್‌ ರಾಜ್‌ ಅರಸ್‌, ಬಸವೇ ಗೌಡ, ಪರಮೇಶ ಅವರೊಂದಿಗೆ ಹಾಸನದಿಂದ ಚಿಕ್ಕಮಗಳೂರು ಮಾರ್ಗವಾಗಿ ಹೆಬ್ರಿ ಸಮೀಪದ ಸೋಮೇಶ್ವರಕ್ಕೆ ಕರೆದುಕೊಂಡು ಬಂದು ಕಾದು ನಿಲ್ಲುವಂತೆ ಸೂಚಿಸುತ್ತಾರೆ. ಈ ಪೈಕಿ ಭಾಗೀರಥಿಗೆ ಕೆಲವೊಬ್ಬರ ಪರಿಚಯವಿರುವುದರಿಂದ ಆಕೆಯ ಎದುರಿಗೆ ಸಿಗಬಾರದೆಂದು ಸುರೇಶ್‌ ಪ್ರಭು ಸೂಚಿಸಿದ್ದರು. ಸೋಮೇಶ್ವರ ತಲುಪಿದ ಬಳಿಕ ಮಂಜುನಾಥ ಸಣ್ಣ ವಿಷದ ಬಾಟಲಿಯಲ್ಲಿರುವ ನಾಗರಹಾವಿನ ವಿಷವನ್ನು ತಾನು ಕೊಟ್ಟಂತಹ ಸಿರೀಂಜ್‌ಗೆ ಲೋಡ್‌ ಮಾಡಿ ನಿರಂಜನ್‌ ರಾಜ್‌ ಅರಸ್‌ಗೆ ನೀಡಿ ಭಾಗೀರಥಿಯನ್ನು ಚುಚ್ಚಿ ಕೊಲೆ ಮಾಡುವಂತೆ ಪತಿ ತಿಳಿಸಿದ್ದರು.

ಬಳಿಕ ತನ್ನ ಮಾರುತಿ 800 ಕಾರಿನಲ್ಲಿ  ಪತ್ನಿ ಭಾಗೀರಥಿಯೊಂದಿಗೆ ಧರ್ಮಸ್ಥಳಕ್ಕೆ ಹೋಗುವ ಸಲುವಾಗಿ ಹಾಸನದಿಂದ ಹೊರಟು ರಾತ್ರಿ ಭಾಗೀರಥಿಯ ಅಣ್ಣ ಎನ್‌.ಜಿ.ಸೀತಾರಾಮ ಅವರ ಮನೆಯಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ, ನಗರಕ್ಕೆ ಹೋಗುವ ಕಾರ್ಯಕ್ರಮ ಗೊತ್ತು ಮಾಡಿಕೊಂಡಿದ್ದರೂ ಅಲ್ಲಿಗೆ ಹೋಗದೆ ಭಾಗೀರಥಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸುರೇಶ್‌ ಪ್ರಭು ತನ್ನ ಸೋದರ ಮಾವ ಶಂಕರ ಪ್ರಭು ಅವರ ಮನೆಯಾದ  ಬೈಕಾಡಿಯಲ್ಲಿ ಉಳಿದುಕೊಳ್ಳುವ ಎಂದು ಭಾಗೀರಥಿಯನ್ನು ನಂಬಿಸಿ ಶಿವಮೊಗ್ಗದಿಂದ ತೀರ್ಥಹಳ್ಳಿ- ಆಗುಂಬೆ-ಸೋಮೇಶ್ವರ ಮಾರ್ಗವಾಗಿ ಕರೆದುಕೊಂಡು ಬಂದು ರಾತ್ರಿ ಸುಮಾರು 7.45ರಿಂದ 8 ಗಂಟೆಯ ವೇಳೆಗೆ ಹೆಬ್ರಿ  ಸೋಮೇಶ್ವರಕ್ಕೆ ತಲುಪಿದಾಗ ಅಲ್ಲಿ ಮಂಜುನಾಥ ಇತರರೊಂದಿಗೆ ಸೇರಿ ಸಣ್ಣ ಬಾಟಲಿಯಲ್ಲಿದ್ದ ನಾಗರಹಾವಿನ ವಿಷವನ್ನು ಸಿರೀಂಜ್‌ಗೆ ಲೋಡ್‌ ಮಾಡಿ ಭಾಗೀರಥಿಗೆ ಸೋಮೇಶ್ವರದಿಂದ ಮಡಾಮಕ್ಕಿ ರಸ್ತೆಯಲ್ಲಿ ಹೋಗುತ್ತ ರಾತ್ರಿ ಸುಮಾರು 8.30ರಿಂದ 9ರ ವೇಳೆಗೆ ನಿರ್ಜನ ಸ್ಥಳದಲ್ಲಿ ನಾಗರಹಾವಿನ ವಿಷ ತುಂಬಿದ್ದ ಇಂಜೆಕ್ಷನ್‌ ಚುಚ್ಚಿ ಕೊಲೆ ಮಾಡಿದ್ದರು. ಭಾಗೀರಥಿ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ನಾಗರ ಹಾವಿನ ವಿಷವು ಖಾಲಿಯಾದ 2 ಸಿರಿಂಜ್‌ಗಳು, ಖಾಲಿಯಾದ ನಾಗರಹಾವಿನ ವಿಷದ ಸಣ್ಣ ಬಾಟಲಿ ಮತ್ತು ಟವೆಲ್‌ಗ‌ಳನ್ನು ಅಲ್ಲಿಯೇ ರಸ್ತೆ ಪಕ್ಕದ ಕಾಡಿನಲ್ಲಿ ಎಸೆದಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದರು.

ಬಳಿಕ ಪತಿ ಸುರೇಶ್‌ ಪ್ರಭು ತಾನು ನಡೆಸಿದ ಕೊಲೆ ಕೃತ್ಯವನ್ನು ಮರೆಮಾಚುವ ಸಲುವಾಗಿ ಭಾಗೀರಥಿಗೆ ಯಾವುದೋ ವಿಷದ ಹಾವು ಕಚ್ಚಿದೆ ಎಂದು ಆಕೆಯ ಮನೆಯವರನ್ನು ನಂಬಿಸಲು ಭಾಗೀರಥಿಯನ್ನು ಹೆಬ್ರಿಯ ರಾಘವೇಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ ಬಳಿಕ ಯಾವುದೇ ಸಾಕ್ಷಿ, ಪುರಾವೆ ಸಿಗಬಾರದೆಂಬ ಉದ್ದೇಶದಿಂದ ಯಾವುದೋ ವಿಷದ ಹಾವು ಕಚ್ಚಿ ಆಕೆ ಮೃತಪಟ್ಟಿದ್ದಾಳೆ ಎಂದು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ವರದಿ ನೀಡಲಾಗಿತ್ತು.

ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ ಎಂಬ ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next