Advertisement

ಅಮೆರಿಕ ವಿ.ವಿ. ವಿಜ್ಞಾನ ಪುಸ್ತಕಕ್ಕೆ ಉಡುಪಿ ಕಲಾವಿದನ ಕಲಾಕೃತಿ

03:10 AM Jun 02, 2018 | Team Udayavani |

ಉಡುಪಿ: ಪಶು ವೈದ್ಯಕೀಯ ಅಂತಿಮ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸ್ವರ್ಣ ಪದಕ ಪಡೆದು ಪ್ರಸ್ತುತ ಅಮೆರಿಕದ ಟಿಫ್ಸ್ ವಿ.ವಿ.ಯಲ್ಲಿ ಕಳೆದ 30 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಡಾ| ಎಂ.ಎಸ್‌.ವಿ. ಕುಮಾರ್‌ ರಚಿಸಿದ ‘ಎ ರೀಜನಲ್‌ ಎಪ್ರೋಚ್‌ ಟು ದಿ ಡಿಸೆಕ್ಷನ್‌ ಆಫ್ ದಿ ಡಾಗ್‌’ ಕೃತಿಯ 2ನೇ ಆವೃತ್ತಿಗೆ ಉಡುಪಿಯ ಚಿತ್ರ ಕಲಾವಿದ ಪಿ.ಎನ್‌. ಆಚಾರ್ಯ ರಚಿಸಿದ ಕಲಾಕೃತಿಗಳನ್ನು ಬಳಸಿಕೊಳ್ಳಲಾಗಿದೆ. ಈಜಿಪ್ಟ್, ಆಸ್ಟ್ರೇಲಿಯಾ ಕಲಾವಿದರ ಕಲಾಕೃತಿಗಳು ನಿರೀಕ್ಷಿತ ಮಟ್ಟದಲ್ಲಿ ಮೂಡಿ ಬಾರದ ಹಿನ್ನೆಲೆಯಲ್ಲಿ ಕಲಾವಿದ ಪಿ.ಎನ್‌. ಆಚಾರ್ಯರಿಂದ ಚಿತ್ರ ರಚಿಸಿಕೊಳ್ಳಲಾಗಿದೆ.

Advertisement

ಅಮೆರಿಕ ವೈದ್ಯಕೀಯ ಪಠ್ಯಪುಸ್ತಕಕ್ಕೆ ಜಗತ್ತಿನ ಶ್ರೇಷ್ಠ  ಸಂಶೋಧನ ವಿ.ವಿ. ಅಮೆರಿಕದ ಟಫ್ಸ್ ವಿ.ವಿ.ಯ ಲೈನಸ್‌ ಲರ್ನಿಂಗ್‌ ಪಬ್ಲಿಕೇಶನ್‌ ಪುಸ್ತಕವನ್ನು ಹೊರ ತಂದಿದೆ. ಇದು ಆಚಾರ್ಯರು ರಚಿಸಿದ ಪೂರ್ಣ ಪ್ರಮಾಣದ ಚಿತ್ರವಿರುವ 3ನೇ ಗ್ರಂಥವಾಗಿದೆ. ಈ ಮೂರು ಗ್ರಂಥಗಳು ಜಪಾನ್‌ ಮತ್ತು ಚೀನ ಭಾಷೆಯಲ್ಲಿಯೂ ಪ್ರಕಟಗೊಂಡಿವೆ. ಈ ಗ್ರಂಥವು 400 ಪುಟಗಳನ್ನು ಹೊಂದಿದ್ದು, 9 ಅಧ್ಯಾಯಗಳಲ್ಲಿ  ಸುಮಾರು 450ಕ್ಕೂ ಅಧಿಕ ಚಿತ್ರಗಳನ್ನು ಹೊಂದಿದೆ. ಇದನ್ನು ರಚಿಸಲು ಸುಮಾರು1 ವರ್ಷ ಅವಧಿ ಬೇಕಾಗಿತ್ತು ಎಂದು ಪಿ.ಎನ್‌. ಆಚಾರ್ಯ ತಿಳಿಸಿದ್ದಾರೆ.


ಕೊರಿಯರ್‌, ಅಂಚೆ, ಇ-ಮೇಲ್‌ ಮೂಲಕ ಬರುವ ಫೋಟೋಗಳ ಸ್ಕೆಚ್‌ ಮಾಹಿತಿಗೆ ಅನುಗುಣವಾಗಿ ಚಿತ್ರ ರಚಿಸಲಾಯಿತು. ನಾಯಿ ದೇಹದೊಳಗಿನ ಅಂಗಾಂಗಗಳನ್ನು ನಿಖರ, ಪ್ರಮಾಣಬದ್ಧವಾಗಿ ಬರೆಯಲಾಗಿದೆ. ಈ ಚಿತ್ರಗಳನ್ನು ಜಲವರ್ಣದಿಂದ ರಚಿಸಲಾಗಿದ್ದು, ಎಲ್ಲ  ಚಿತ್ರಗಳು ಸೂಕ್ಷಾತಿಸೂಕ್ಷ್ಮದಿಂದ ಕೂಡಿವೆ. ರೋಟರಿ ಪೆನ್‌ ನಂ. 1, 2, 3 ಮೂಲಕ ಚಿತ್ರಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಮಹತ್ವಪೂರ್ಣ ಕ್ಷಣ
ಕಲಾ ಬದುಕಿನಲ್ಲಿ ಇದು ಬಹಳ ಅಮೂಲ್ಯ, ಮಹತ್ವಪೂರ್ಣ ಕ್ಷಣವಾಗಿದ್ದು, ಕಲೆಗೆ ನ್ಯಾಯ ನೀಡುವ ಕೆಲಸವಾಗಿತ್ತು. ಈ ಕೆಲಸಕ್ಕೆ ಸಂಬಂಧಿಸಿದಂತೆ ಮೊದಲು ಪತ್ರ ಬಂದಾಗ ನಾನು ನಂಬಲೇ ಇಲ್ಲ. ವೈದ್ಯಕೀಯ ಕಲೆಯ ಬಗ್ಗೆ ಅಂದು ಪಡೆದ ತರಬೇತಿ ನಿವೃತ್ತಿಯ ಅನಂತರವೂ ಅಮೆರಿಕ ವಿ.ವಿ.ಯಂತಹ ಪ್ರತಿಷ್ಠಿತ ಸಂಸ್ಥೆಯ ಕೆಲಸಕ್ಕೆ ಸಹಕಾರಿಯಾಗುವುದೆಂದು ನಾನು ಭಾವಿಸಿರಲಿಲ್ಲ. ನನ್ನ ಮೇಲಿನ ವಿಶ್ವಾಸದಿಂದ ಕೊಟ್ಟ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಅದು ಅತ್ಯಂತ ತೃಪ್ತಿ ನೀಡಿದೆ. 
– ಪಿ.ಎನ್‌. ಆಚಾರ್ಯ, ಚಿತ್ರ ಕಲಾವಿದ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next