Advertisement

ಉಡುಪಿ: ಮಣ್ಣಿನಡಿಯಲ್ಲಿ ಚಿನ್ನಾಭರಣ ಹೂತ್ತಿಟ್ಟಿದ್ದ ಕಳ್ಳನ ಬಂಧನ

10:33 AM Nov 23, 2021 | Team Udayavani |

ಉಡುಪಿ, ನ. 22: ಗುಂಡಿಬೈಲಿನ ಬಳಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬೆಳ್ಳಂಪಳ್ಳಿಯಲ್ಲಿ ಬಂಧಿಸಿದ್ದಾರೆ. ಗುಂಡಿಬೈಲಿನ ಬಳಿ ಬಾಬು ಆಚಾರ್ಯ ಅವರು ಹೊಸ ಮನೆ ನಿರ್ಮಾಣ ಮಾಡಿದ್ದು, ನ. 16ರಂದು ಅವರ ಹಳೆಯ ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ಒಳಪ್ರವೇಶಿಸಿ, ಕಪಾಟಿನಲ್ಲಿದ್ದ ಬೀಗದಿಂದ ಲಾಕರ್‌ ತೆಗೆದು ಅದರಲ್ಲಿದ್ದ ಒಟ್ಟು 90 ಗ್ರಾಂ ತೂಕದ 3,60,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ. ಮೌಲ್ಯದ ಬೆಳ್ಳಿ ಸಾಮಗ್ರಿ, ದೇವರ ಡಬ್ಬದಲ್ಲಿದ್ದ 400 ರೂ. ಸಹಿತ ಒಟ್ಟು 3,70,400 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು.

Advertisement

ಇದನ್ನೂ ಓದಿ:ಕಚ್ಚಿದ ಹಾವನ್ನು ಜೊತೆಯಲ್ಲೇ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರ ಮತ್ತು ತಾಂತ್ರಿಕ ವಿಧಾನದ ಮೂಲಕ ಕೃತ್ಯ ನಡೆಸಿದ್ದ ಕುಕ್ಕಿಕಟ್ಟೆಯ ಸುಕೇಶ್‌ ನಾಯ್ಕ (34)ನನ್ನು ತನಿಖಾ ತಂಡದವರು ನ. 21ರಂದು ಬೆಳ್ಳಂಪಳ್ಳಿ ವೈನ್‌ ಶಾಪ್‌ವೊಂದರ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ್ದ ಕೃತ್ಯವನ್ನು ತಿಳಿಸಿದ್ದ.

ಪೊದರು ಜಾಗದಲ್ಲಿ ಹೂತಿಟ್ಟಿದ್ದ!
ಆರೋಪಿ ಗುಂಡಿಬೈಲು ಪಂಚಧೂಮಾವತಿ ದೈವಸ್ಥಾನದ ಬಳಿಯ ನಿವಾಸಿ ಶ್ರೀಕರ ಕಾಮತ್‌ ಅವರ ಪೊದರು ಜಾಗದಲ್ಲಿನ ಮಣ್ಣಿನ ಅಡಿಯಲ್ಲಿ ಚಿನ್ನಾಭರಣಗಳನ್ನು ಹೂತ್ತಿಟ್ಟಿದ್ದ. ಅಲ್ಲಿಂದ 3,60,000 ರೂ.ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಈ ಹಿಂದೆ ಹಿರಿಯಡ್ಕ, ಮಣಿಪಾಲ, ಉಡುಪಿ ನಗರ, ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜೈಲಿನಿಂದ ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Advertisement

ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಅವರ ಆದೇಶದಂತೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್‌ಪಿ ಸದಾನಂದ ನಾಯ್ಕ್ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆಯ ನಿರೀಕ್ಷಕ ಪ್ರಮೋದ ಕುಮಾರ್‌ ಪಿ., ಪ್ರೊಬೆಷನರಿ ಪಿಎಸ್‌ಐ ಸುಹಾಸ್‌ ಆರ್‌., ಪ್ರಸಾದ್‌ ಕುಮಾರ್‌, ಸಿಬಂದಿ ರಾಜೇಶ್‌, ಸತೀಶ, ಜೀವನ್‌ ಕುಮಾರ್‌, ಲೋಕೇಶ್‌, ಸಂತೋಷ ರಾಥೋಡ, ಕಾರ್ತಿಕ್‌, ಬಾಲಕೃಷ್ಣ, ಶಿವಕುಮಾರ್‌, ಚೇತನ್‌, ಹೇಮಂತ್‌ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next