ಮಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು ಬೆಳಿಗ್ಗೆಯಿಂದಲೇ ಮಾದರಿ ಸಂಹಿತೆ ಜಾರಿಗೊಂಡ ಕಾರಣ ಸರಕಾರದ ಅನುದಾನವನ್ನು ಬಳಸಿಕೊಂಡು ಹಾಕಿರುವ ಜಾಹೀರಾತು ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ಗಳನ್ನು ಜಿಲ್ಲೆಯಾದ್ಯಂತ ಕೂಡಲೇ ತೆರವುಗೊಳಿಸುವಂತೆ ಜಿಲ್ಲೆಯ ಎಲ್ಲಾ ಚುನಾವಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ನಿರ್ದೇಶನ ನೀಡಿದರು.
ಅವರು ಮಾ.29ರ ಬುಧವಾರ ಈ ಕುರಿತು ಹಮ್ಮಿಕೊಂಡಿದ್ದ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ, ಕಾರಣ ಅಧಿಕೃತ ಹಾಗೂ ಅನಧಿಕೃತವಾಗಿ ಹಾಕಲಾಗಿರುವ ಎಲ್ಲಾ ರೀತಿಯ ಜಾಹೀರಾತುಗಳನ್ನು ತೆರವುಗೊಳಿಸಬೇಕು, ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು, ಯಾವುದೇ ಸರ್ಕಾರಿ ಕಚೇರಿಯಲ್ಲಿ, ಸರ್ಕಾರದ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಹಾಕಲಾಗಿರುವ ರಾಜಕೀಯ ಪಕ್ಷಗಳ ಮುಖಂಡರ ಭಾವಚಿತ್ರಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದ ಅವರು, 24, 72 ಗಂಟೆಯೊಳಗೆ ನಿರ್ವಹಿಸಬೇಕಾದ ಕರ್ತವ್ಯಗಳನ್ನು ವಿವರಿಸಿದರು.
ಒಮ್ಮೆ ತೆರವು ಮಾಡಲಾದ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಹಾಗೂ ಕಟ್‍ಔಟ್‍ಗಳನ್ನು ಪುನಃ ಅಳವಡಿಸಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಕರ್ನಾಟಕ ತೆರೆದ ಸ್ಥಳಗಳ (ವಿರೂಪಗೊಳಿಸುವಿಕೆ ತಡೆಗಟ್ಟುವ) ಕಾಯ್ದೆ-1981ರಂತೆ ಆರು ತಿಂಗಳ ಜೈಲು ಶಿಕ್ಷೆ, ಎರಡು ಸಾವಿರ ರೂ.ಗಳ ದಂಡ ವಿಧಿಸಬಹುದಾಗಿದೆ, ಅದನ್ನು ಅನುಷ್ಠಾನಗೊಳಿಸುವಂತೆಯೂ ಸಲಹೆ ನೀಡಿದರು.
Related Articles
ಅದೇ ರೀತಿ ಸಂಬಂಧಿಸಿದ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ನಿಗದಿತ ಕಾಲಮಿತಿಯಲ್ಲಿ ವರದಿ ನೀಡಬೇಕು, ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು, ನಿರ್ಲಕ್ಷ್ಯತನಕ್ಕೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ಮಾತನಾಡಿ, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ನೀಡಬೇಕಾದ ವರದಿಗಳನ್ನು ಕೂಡಲೇ ನೀಡುವಂತೆ ತಿಳಿಸಿದರು.
ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ತಹಶೀಲ್ದಾರರು, ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪುರಸಭೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.
ಉಡುಪಿಯಲ್ಲೂ ಬ್ಯಾನರ್, ಬಂಟಿಂಗ್ಸ್ ತೆರವಿಗೆ ಸೂಚನೆ:
ನಗರಸಭೆ ಸಿಬಂದಿ ಸಹಿತವಾಗಿ ಗ್ರಾ.ಪಂ., ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಬಂದಿ ವರ್ಗ ಜಿಲ್ಲಾಡಳಿತದ ಸೂಚನೆ ಮೇರೆಗೆ ಬ್ಯಾನರ್, ಬಂಟಿಂಗ್ಸ್ ಇತ್ಯಾದಿಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದ ಸಚಿವರ ಕಚೇರಿ ಹಾಗೂ ಸಂಸದರ ಕಚೇರಿಗೆ ಸರಕಾರದಿಂದ ನೀಡಿರುವ ಸವಲತ್ತುಗಳನ್ನು ನೀತಿ ಸಂಹಿತೆ ನಿಯಮ ಆಧಾರದಲ್ಲಿ ವಾಪಸ್ ಪಡೆಯಲಾಗಿದೆ. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರ ಸಭೆ ನಡೆಸಿ, ಚುನಾವಣೆ ವೆಚ್ಚ ಸಹಿತವಾಗಿ ಕಾರ್ಯಕ್ರಮ ಆಯೋಜನೆ ಸಂದರ್ಭದಲ್ಲಿ ಯಾವುದೇ ನಿಯಮದ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಲು ಸೂಚನೆಯನ್ನು ರವಾನಿಸಿದ್ದಾರೆ. ಒಟ್ಟಾರೆಯಾಗಿ ಜಿಲ್ಲಾದ್ಯಂತ ನೀತಿ ಸಂಹಿತೆ ಇಫೆಕ್ಟ್ ಶುರುವಾಗಿದೆ.
ಇದನ್ನೂ ಓದಿ: 14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!