Advertisement

ಉಡುಪಿ-ದಕ್ಷಿಣ ಕನ್ನಡ: ಶಾಂತಿಯುತವಾಗಿ ನಡೆದ ತರಗತಿ

01:00 AM Feb 15, 2022 | Team Udayavani |

ಉಡುಪಿ: ಸೋಮವಾರ ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಶಾಂತಿಯುತವಾಗಿ ನಡೆದಿವೆ. ಆದರೆ ಅರ್ಧದಷ್ಟು ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ.

Advertisement

ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಆಯಾ ಶಾಲೆಯ ಸಮವಸ್ತ್ರ ನಿಯಮವನ್ನು ಪಾಲಿಸಿ ತರಗತಿಯಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಕ್ಯಾಂಪಸ್‌ ವರೆಗೆ ಬುರ್ಖಾ, ಹಿಜಾಬ್‌ಗ
ಅವಕಾಶ ಇತ್ತಾದರೂ ತರಗತಿಯ ಒಳಗೆ ಅವಕಾಶ ನೀಡಿರಲಿಲ್ಲ.

ಶೇ. 50ರಷ್ಟು ವಿದ್ಯಾರ್ಥಿಗಳು ಗೈರು
10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ 311 ಪ್ರೌಢಶಾಲೆಗಳಿದ್ದು, 9ನೇ ತರಗತಿಗೆ 16,347 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಇದರಲ್ಲಿ ಸೋಮವಾರ 7,964 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದು, ಶೇ. 48.72ರಷ್ಟು ಹಾಜರಾತಿ ದಾಖಲಾಗಿದೆ. 10ನೇ ತರಗತಿಗೆ 16,529 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 8,177 ವಿದ್ಯಾರ್ಥಿ ಗಳು ಹಾಜರಾಗಿ ಶೇ. 49.47ರಷ್ಟು ಹಾಜರಾತಿ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ 611 ಪ್ರೌಢಶಾಲೆಗಳಲ್ಲಿ 9ನೇ ತರಗತಿಗೆ 33,003 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದು, ಸೋಮವಾರ 15,539 ವಿದ್ಯಾರ್ಥಿಗಳು (ಶೇ.47.08), 10ನೇ ತರಗತಿಯ 33,463 ವಿದ್ಯಾರ್ಥಿಗಳಲ್ಲಿ 15,866 ವಿದ್ಯಾರ್ಥಿಗಳು (ಶೇ.47.41) ಹಾಜರಾಗಿದ್ದಾರೆ. ಐದು ದಿನ ನಿರಂತರ ರಜೆ ಇದ್ದುದರಿಂದ ಹಾಜರಾತಿ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟ್‌ನ ಮಧ್ಯಾಂತರ ಆದೇಶ ಪಾಲನೆ ಮತ್ತು ಸರಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಜಿಲ್ಲಾಡಳಿತದಿಂದ ನಿರ್ದೇಶನ ನೀಡ ಲಾಗಿತ್ತು. ಜಿಲ್ಲೆಯ ಯಾವುದೇ ಪ್ರೌಢ ಶಾಲೆಯಲ್ಲಿ ಅಹಿತಕರ ಘಟನೆ ನಡೆದಿಲ್ಲ.

Advertisement

ಪ್ರೌಢಶಾಲೆಗಳ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಘೋಷಣೆ ಮಾಡಿರುವುದರಿಂದ ಬಹು ತೇಕ ಶಾಲೆಗಳಲ್ಲಿ ಪೊಲೀಸ್‌ ಭದ್ರತೆ ನಿಯೋಜಿಸ ಲಾಗಿತ್ತು. ಪೊಲೀಸರು ಬೆಳಗ್ಗೆಯಿಂದ ಸಂಜೆಯ ವರೆಗೂ ಶಾಲಾವರಣದಲ್ಲೇ ಇದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದಾರೆ.
ಡಿಡಿಪಿಐ (ಪ್ರಭಾರ) ಗೋವಿಂದ ಮಡಿವಾಳ ಅವರು ಸರಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಸಮವಸ್ತ್ರದ ನಿಯಮ ಪಾಲನೆ ಮಾಡಿರುವ ಕುರಿತು ಪರಿಶೀಲನೆ ನಡೆಸಿದರು.

ದಕ್ಷಿಣ ಕನ್ನಡದಲ್ಲಿ ಶಾಲೆ ಆರಂಭ
ಮಂಗಳೂರು: ಧಾರ್ಮಿಕ ವಸ್ತ್ರ ವಿವಾದದ ಹಿನ್ನೆಲೆಯಲ್ಲಿ ಫೆ. 9ರಿಂದ ಮುಚ್ಚಿದ್ದ 9 ಮತ್ತು 10ನೇ ತರಗತಿಗಳು ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭವಾಗಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಅಹಿತಕರ ಘಟನೆ ನಡೆಯದಂತೆ ಶಾಲೆಗಳ ಸುತ್ತಮುತ್ತ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿಯಾಗಿತ್ತು. ಕೆಲವು ಶಾಲೆಗಳು ಪೊಲೀಸ್‌ ಭದ್ರತೆಯೊಂದಿಗೆ ಆರಂಭವಾದವು. ಎಲ್ಲ ಶಾಲೆಗಳಲ್ಲಿ ಬೆಳಗ್ಗಿನಿಂದ ಸಂಜೆ ವರೆಗೆ ತರಗತಿಗಳು ನಡೆದಿವೆ. ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಗೊಂದಲ, ಆತಂಕವಿಲ್ಲದೆ ತರಗತಿಗೆ ಹಾಜರಾಗಿದ್ದಾರೆ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುಧಾಕರ್‌ ಕೆ. ಅವರು “ಉದಯವಾಣಿ’ ಜತೆಗೆ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲ ಆತಂಕವಿಲ್ಲದೆ ತರಗತಿಗೆ ಆಗಮಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜಿಲ್ಲೆಯಲ್ಲಿ ನಡೆದಿಲ್ಲ. ಈ ಹಿಂದೆಯೂ ಈ ವಿಚಾರಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ’ ಎಂದರು.

ಹಿಜಾಬ್‌ ವಿವಾದ ವೀಡಿಯೋ ಮಂಗಳೂರಿನದ್ದಲ್ಲ: ಕಮಿಶನರ್‌
ಮಂಗಳೂರು: ಹಿಜಾಬ್‌ಗ ಸಂಬಂಧಿಸಿ ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಒಳಗೊಂಡ ವೀಡಿಯೋ ಒಂದನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣ ಗಳಲ್ಲಿ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ಕಾಲೇಜಿನವರು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಇಂತಹ ಘಟನೆ ಮಂಗಳೂರಿನ ಕಾಲೇಜುಗಳಲ್ಲಿ ನಡೆದಿಲ್ಲ. ಹಿಜಾಬ್‌ಗ ಸಂಬಂಧಿಸಿ ಕೆಲವು ದಿನಗಳ ಹಿಂದೆ ಬೇರೆ ಕಡೆ ನಡೆದಿರುವ ಘಟನೆಯ ವೀಡಿಯೋವನ್ನು ಸುಳ್ಳು ಸುದ್ದಿಯೊಂದಿಗೆ ಹಂಚಲಾಗುತ್ತಿದೆ. ಮಂಗಳೂರು ಎಲ್ಲರ ಸಹಕಾರದಿಂದ ಶಾಂತಿಯುತವಾಗಿದೆ. ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರು ಮನೆಗೆ
ಮಡಿಕೇರಿ: ನ್ಯಾಯಾ ಲಯದ ಮಧ್ಯಾಂತರ ಆದೇಶವಿದ್ದರೂ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾದ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್‌ ಶಾಲೆಯ ಸುಮಾರು 30 ವಿದ್ಯಾರ್ಥಿನಿಯರನ್ನು ಮರಳಿ ಮನೆಗೆ ಕಳುಹಿಸಲಾಯಿತು.

ನ್ಯಾಯಾಲಯದ ಆದೇಶದಂತೆ ತರಗತಿಗಳಲ್ಲಿ ಶಿರವಸ್ತ್ರ ತೆಗೆಯಬೇಕೆಂದು ಮುಖ್ಯೋಪಾಧ್ಯಾಯರು ಮನವಿ ಮಾಡಿದರೂ ಕೇಳದ ವಿದ್ಯಾರ್ಥಿನಿ ಯರು ಶಿರವಸ್ತ್ರ ಬೇಕೆಂದು ಪಟ್ಟು ಹಿಡಿದರು. ಈ ಸಂದ‌ರ್ಭ ಅನಿವಾರ್ಯವಾಗಿ ತರಗತಿಯಲ್ಲಿ ಇರಲು ಅನುಮತಿ ನಿರಾಕರಣೆ ಮಾಡಿದಾಗ ವಿದ್ಯಾರ್ಥಿನಿಯರು ಮನೆಗೆ ತೆರಳಿದರು.
ಶಾಲೆ ಬಳಿ ಮುಂಜಾಗ್ರತೆಯ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next