Advertisement

ಉಡುಪಿ: 468 “ಶಾಲಾ ಸಂಪರ್ಕ ಸೇತು’

01:00 AM Feb 20, 2019 | Harsha Rao |

ಉಡುಪಿ: ಮಳೆಗಾಲದಲ್ಲಿ ತುಂಬಿ ಹರಿಯುವ ತೋಡುಗಳನ್ನು ದಾಟಿ ಹೋಗಬೇಕಾದ ಕರಾವಳಿ, ಮಲೆನಾಡಿನ ವಿದ್ಯಾರ್ಥಿಗಳಿಗೆ ಮುಂದಿನ ಮಳೆಗಾಲ ಒಂದಷ್ಟು ಸುರಕ್ಷಿತವಾಗುವ ನಿರೀಕ್ಷೆ ಇದೆ. ಆದರೆ ಶೀಘ್ರವೇ ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಇರುವುದರಿಂದ ನೀತಿಸಂಹಿತೆಯ ಭೀತಿ ಎದುರಾಗಿದೆ.

Advertisement

ಕಳೆದ ಮಳೆಗಾಲದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ಮತ್ತು ಉಡುಪಿಯ ಪಡುಬಿದ್ರಿಯಲ್ಲಿ ವಿದ್ಯಾರ್ಥಿಗಳು ಮಳೆನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇದರಿಂದ ಎಚ್ಚೆತ್ತ ಸರಕಾರ “ಶಾಲಾ ಸಂಪರ್ಕ ಸೇತು’ ಯೋಜನೆಯಡಿ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಮುಂದಿನ ಮಳೆಗಾಲದೊಳಗೆ ಸುಮಾರು 550ಕ್ಕೂ ಅಧಿಕ ಕಾಲು ಸೇತುವೆಗಳನ್ನು (ಕಾಲುಸಂಕ) ನಿರ್ಮಿ ಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. 

ಶಾಲೆ ದಾರಿಯಲ್ಲಿರುವ ಸಣ್ಣ ಹೊಳೆಗಳಿಗೆ 3ರಿಂದ 5 ಲ.ರೂ. ವೆಚ್ಚದಲ್ಲಿ ಆರ್‌ಸಿಸಿ ಕಿರು ಸೇತುವೆ ನಿರ್ಮಿಸು ವುದೇ ಈ ಯೋಜನೆ. ಈ ಕಾಲುಸಂಕ ಗಳು 4ರಿಂದ 8 ಅಡಿ ಅಗಲವಿದ್ದು, ಜನರು ಹಾಗೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಗಳೂ ಸಂಚರಿಸಬಹುದು. ಎರಡೂ ಕಡೆ ಕೂಡ ಕಾಂಕ್ರೀಟ್‌ ತಡೆಗೋಡೆಯ ಸುರಕ್ಷೆ ಇರಲಿದೆ.

ದಕ್ಷಿಣ ಕನ್ನಡದಲ್ಲಿ ಆರಂಭ
ಈ ಯೋಜನೆಯಂತೆ ಉಡುಪಿ ಜಿಲ್ಲೆಯಲ್ಲಿ 468 ಹಾಗೂ ದ.ಕ. ಜಿಲ್ಲೆಯಲ್ಲಿ 221 ಕಾಲುಸಂಕ ನಿರ್ಮಿಸಲಾ ಗುತ್ತದೆ. ದ.ಕ.ದಲ್ಲಿ ಮೊದಲ ಹಂತದಲ್ಲಿ 101 ಕಿರುಸೇತುವೆ ನಿರ್ಮಿಸಲು ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಕೆಲವೆಡೆ ಕಾಮಗಾರಿ ಆರಂಭವಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 32 ಸೇತುವೆ ನಿರ್ಮಾಣಗೊಳ್ಳಲಿವೆ. ಈ ಪೈಕಿ ಕಳೆದ ಬಾರಿ ವಿದ್ಯಾರ್ಥಿನಿ ನೀರಿನಲ್ಲಿ ಕೊಚ್ಚಿಹೋದ ಊರಿನಲ್ಲಿ ಕಾಲುಸಂಕ ನಿರ್ಮಾಣ ಆರಂಭಗೊಂಡಿದೆ.

ಟೆಂಡರ್‌ ಪ್ರಕ್ರಿಯೆ ಚುರುಕು
ಲೋಕಸಭಾ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವ ಆತಂಕ ಇರುವುದರಿಂದ ಲೋಕೋಪಯೋಗಿ ಇಲಾಖೆಯೂ ಟೆಂಡರ್‌ ಪ್ರಕ್ರಿಯೆ ಚುರುಕುಗೊಳಿಸಿದೆ. ಫೆ.28ರೊಳಗೆ ಹೆಚ್ಚಿನ ಕಾಮಗಾರಿಗಳಿಗೆ ಕಾರ್ಯಾ ದೇಶ ನೀಡಲು ಸಿದ್ಧತೆ ಕೈಗೊಂಡಿದೆ.

Advertisement

ಕಾರ್ಕಳದಲ್ಲಿ  ಅಧಿಕ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಅತ್ಯಧಿಕ ಅಂದರೆ 222 ಕಾಲುಸಂಕಗಳು ನಿರ್ಮಾಣವಾಗಲಿವೆ. ಬೈಂದೂರು ತಾಲೂಕಿನಲ್ಲಿ 79, ಕುಂದಾಪುರದಲ್ಲಿ 77, ಉಡುಪಿಯ ಕಾಪುವಿನಲ್ಲಿ 65 ಕಾಲು ಸಂಕಗಳು ನಿರ್ಮಾಣಗೊಳ್ಳಲಿವೆ. ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕು ಗಳನ್ನೊಳಗೊಂಡ ಉಡುಪಿ ಉಪವಿಭಾಗದಲ್ಲಿ 6.18 ಕೋ.ರೂ. ವೆಚ್ಚದಲ್ಲಿ 120 ಕಾಲುಸಂಕಗಳು ರಚನೆಯಾಗಲಿವೆ. ಮೊದಲ ಹಂತದಲ್ಲಿ 111, 2ನೇ ಹಂತದಲ್ಲಿ 6 ಮತ್ತು ಮೂರನೇ ಹಂತದಲ್ಲಿ 3 ಕಾಲುಸಂಕಗಳು ರೂಪುಗೊಳ್ಳಲಿವೆ. ಇನ್ನೂ ಅಂದಾಜು 4 ಕೋ.ರೂ. ಕಾಮಗಾರಿಗೆ ಬೇಡಿಕೆ ಇದೆ ಎನ್ನುತ್ತವೆ ಇಲಾಖೆ ಮೂಲಗಳು.

ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮೊದಲೇ ಕಾಮಗಾರಿ ಆರಂಭವಾದರೆ ಯಾವುದೇ ಅಡ್ಡಿಯಾಗದು. ಕೆಲವೊಂದು ತುರ್ತು ಕಾಮಗಾರಿಗಳಿಗೆ ನೀತಿ ಸಂಹಿತೆ ಅನ್ವಯ ವಾಗುವುದಿಲ್ಲ. ಶಾಲೆಯ ಕೆಲವು ಚಟುವಟಿಕೆಗಳು ಕೂಡ ನೀತಿ ಸಂಹಿತೆಯಿಂದ ಮುಕ್ತವಾಗಿರುತ್ತವೆ. ಆದರೆ ಇಂತಹ ಸಂದರ್ಭ ಎದುರಾ ಗುವ ಮೊದಲೇ ಎಚ್ಚರಿಕೆ ವಹಿಸಿ ಟೆಂಡರ್‌ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದು ಉತ್ತಮ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆಗೂ ಚರ್ಚಿಸುತ್ತೇನೆ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ

ಶಾಲಾ ಮುಖ್ಯಸ್ಥರು, ಜನಪ್ರತಿನಿಧಿಗಳಿಂದ ಮಾಹಿತಿ ಪಡೆದು ಅಗತ್ಯವಿದ್ದಲ್ಲಿ ಕಾಲುಸಂಕಕ್ಕೆ ಸಂಬಂಧಿಸಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಇದು ಒಂದೇ ವರ್ಷದ ಯೋಜನೆಯಲ್ಲ. ಮುಂದಿನ ವರ್ಷವೂ ಇರಲಿದೆ. ಈ ವರ್ಷ ಗರಿಷ್ಠ ಕಾಮಗಾರಿಗಳನ್ನು ಪೂರ್ಣಗೊಳಿಸಲಿದ್ದು, ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದಂತೆ ತ್ವರಿತವಾಗಿ ಪ್ರಕ್ರಿಯೆಗಳನ್ನು ಪೂರೈಸುತ್ತಿದ್ದೇವೆ. ತಮ್ಮ ತಮ್ಮ ಶಾಲೆಗಳ ರಸ್ತೆಯಲ್ಲಿ ಕಾಲುಸಂಕ ಬೇಕಾದರೆ ಮುಖ್ಯೋಪಾಧ್ಯಾಯರು, ಸ್ಥಳೀಯ ಜನಪ್ರತಿನಿಧಿ, ಗ್ರಾ.ಪಂ.ಗಳು ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸಬಹುದು.
– ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಉಡುಪಿ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next