Advertisement

ಉಡುಪಿ: 23,000 ಪ್ರಕರಣದ ಇತ್ಯರ್ಥ ಬಾಕಿ: ವೆಂಕಟೇಶ್‌ ನಾಯ್ಕ

02:15 AM Jul 15, 2017 | Team Udayavani |

ಉಡುಪಿ: ದೇಶದಲ್ಲಿರುವ ನ್ಯಾಯಾಧೀಶರ ಸಂಖ್ಯೆ ಕಡಿಮೆ ಇರುವುದರಿಂದ ನ್ಯಾಯಾಲಯಕ್ಕೆ ಬಂದ ಪ್ರಕರಣಗಳ ವಿಲೇವಾರಿ ತಡವಾಗುತ್ತಿದೆ. ಉಡುಪಿ ಜಿಲ್ಲೆಯೊಂದರಲ್ಲಿಯೇ 1968 ರಿಂದ ಈವರೆಗೆ 23 ಸಾವಿರ ಕಡತಗಳ ವಿಲೇವಾರಿ ಬಾಕಿ ಇದೆ. ಮಧ್ಯಸ್ಥಿಕೆ ವಹಿಸುವ ಪ್ರಕ್ರಿಯೆ ಹೆಚ್ಚಾದಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ. ಹೇಳಿದರು. 

Advertisement

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಮಧ್ಯಸ್ಥಿಕೆ ಕೇಂದ್ರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಉಡುಪಿ ಸಂಯುಕ್ತಾಶ್ರಯದಲ್ಲಿ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಮಧ್ಯಸ್ಥಿಕೆದಾರರಿಗೆ ಜಿಲ್ಲಾ ಮಟ್ಟದ 3 ದಿನಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. 

ಪ್ರಾಚೀನ ದಿನಗಳಲ್ಲಿ ನ್ಯಾಯ ದೊರಕಿಸುವ ಪ್ರಕ್ರಿಯೆ ಸರಳ ಹಾಗೂ ಸುಲಭವಾಗಿತ್ತು. ಹಳ್ಳಿಕಟ್ಟೆ, ಪಂಚಾಯತ್‌ ಕಟ್ಟೆಗಳಲ್ಲಿ ಒಂದೇ ದಿನದಲ್ಲಿ ಪ್ರಕರಣ ಇತ್ಯರ್ಥವಾಗುತ್ತಿತ್ತು. ಆದರೆ ಈಗ ಕಾನೂನು ಹೆಚ್ಚು ಸಂಕೀರ್ಣತೆಗೊಳ್ಳುತ್ತಿದ್ದು, ಇದರಿಂದ ನೀತಿ ತತ್ವದಡಿ ಶೀಘ್ರ ಅರ್ಜಿಯನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಎರಡೂ ಕಡೆಯವರನ್ನು ಮಾತುಕತೆಗೆ ಕರೆದು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸುವುದು ಉತ್ತಮ ಮಾರ್ಗ. ಮಧ್ಯಸ್ಥಿಕೆದಾರರಿಗೆ ಆಳವಾದ ಕಾನೂನಿನ ಜ್ಞಾನ, ವಿಷಯದ ಜ್ಞಾನ ಅತ್ಯಗತ್ಯ. ಮಧ್ಯಸ್ಥಿಕೆಯಿಂದ ಶೇ. 25 ರಷ್ಟು ಪ್ರಕರಣಗಳನ್ನು ಕಡಿಮೆಗೊಳಿಸಲು ಸಾಧ್ಯ ಎಂದರು. 

ವಕೀಲರ ಸಂಘದ ಮಾಜಿ ಅಧ್ಯಕ್ಷ ಮಾಧವ ಆಚಾರ್‌ ಮಾತನಾಡಿ ಯಾವುದೇ ಸಂಕೀರ್ಣತೆ ಇರುವ ಪ್ರಕರಣಗಳನ್ನು ರಾಜಿಯಲ್ಲಿ ಕೊನೆಗೊಳಿಸುವುದರಿಂದ ಎರಡೂ ಕಡೆಯವರಿಗೂ ಅನ್ಯಾಯವಾಗುವುದಿಲ್ಲ. ಇದರಿಂದ ಸಾಮಾಜಿಕ ನ್ಯಾಯ ಸಾಧ್ಯ. ಇದು ನ್ಯಾಯಾಂಗದ ಉತ್ತಮ ಕಾರ್ಯ ಎಂದರು. 

ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್‌. ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಹಿರಿಯ ಸವಿಲ್‌ ನ್ಯಾಯಾಧೀಶ, ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್‌. ಪಂಡಿತ್‌, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ತರಬೇತಿದಾರರಾದ ಎಸ್‌. ಎನ್‌. ಪ್ರಶಾಂತ್‌ ಚಂದ್ರ, ಜೊ. ಜೋಸೆಫ್, ತಾ.ಪಂ. ಅಧ್ಯಕ್ಷ ನಳಿನಿ ಪ್ರದೀಪ್‌ ರಾವ್‌ ಉಪಸ್ಥಿತರಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ ಲತಾ ಸ್ವಾಗತಿಸಿದರು. ಶ್ರೀಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next