Advertisement

ಉಡುಪಿ: ಆ್ಯತ್ಲೆಟಿಕ್‌ ತರಬೇತಿಯಲ್ಲಿ 200 ಮಂದಿ

10:01 AM May 07, 2022 | Team Udayavani |

ಉಡುಪಿ: ಜಿಲ್ಲಾ ಕ್ರೀಡಾ ಇಲಾಖೆಯ ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ 200 ಮಂದಿ ವಿದ್ಯಾರ್ಥಿಗಳು ವಿವಿಧ ಆ್ಯತ್ಲೆಟಿಕ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದು ಕಳೆದ ಮೂರ್ನಾಲ್ಕು ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Advertisement

ಹೈಜಂಪ್‌, ಲಾಂಗ್‌ಜಂಪ್‌, ಡಿಸ್ಕಸ್‌ ಥ್ರೋ, ಶಾಟ್‌ ಪುಟ್‌, ಜಾವಲಿನ್‌ ಥ್ರೋ, ರನ್ನಿಂಗ್‌ ವಿವಿಧ ಆ್ಯತ್ಲೆಟಿಕ್ಸ್‌ ನಲ್ಲಿ 10 ವರ್ಷದಿಂದ 22 ವರ್ಷದ ವರೆಗಿನ ವಿವಿಧ ವಯೋಮಾನದ ವಿದ್ಯಾರ್ಥಿಗಳು ನಿತ್ಯ ಬೆಳಗ್ಗೆ, ಸಂಜೆ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿಲ್ಲಾ ಕ್ರೀಡಾಂಗಣ ಸಕಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರವಾಗಿದ್ದು, ಆ್ಯತ್ಲೆಟಿಕ್‌ಗಳ ಪ್ರತಿಭೆಗಳನ್ನು ಸೆಳೆಯುತ್ತಿದೆ. ಸಿಂಥೆಟಿಕ್‌ ಟ್ರ್ಯಾಕ್‌, ಜಿಮ್‌ ಸೌಕರ್ಯವನ್ನು ಹೊಂದಿದ್ದು, ಕ್ರೀಡಾಪಟುಗಳಿಗೆ ಉಚಿತವಾಗಿ ತರಬೇತಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಭಿನ್‌ ದೇವಾಡಿಗ (ಓಟ), ಕರಿಶ್ಮಾ ಸನಿಲ್‌ (ಜಾವಲಿನ್‌ ಥ್ರೋ), ಮಾಧುರ್ಯ ಶೆಟ್ಟಿ (ಡಿಸ್ಕಸ್‌ ಥ್ರೋ) ಇದೇ ಕ್ರೀಡಾಂಗಣದಲ್ಲಿ ತರಬೇತಿ ಪಡೆದವರಾಗಿದ್ದು ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಆ್ಯತ್ಲೆಟಿಕ್‌ಪಟುಗಳು.

ತರಬೇತುದಾರರ ಕೊರತೆ

ಉಡುಪಿಯಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ಈ ವರ್ಷದಿಂದ ಪದವಿವರೆಗೂ ಅವಕಾಶ ಕಲ್ಪಿಸಲಾಗು ತ್ತಿದೆ. ಪ್ರಸ್ತುತ ವಸತಿ ಶಾಲೆಗೆ ತಲಾ ಇಬ್ಬರು ಕೋಚ್‌ ಗಳು ತರಬೇತಿ ನೀಡುತ್ತಿದ್ದಾರೆ. ಹೆಚ್ಚುವರಿ 4ರಿಂದ 5 ಕೋಚ್‌ಗಳನ್ನು ನೇಮಕ ಮಾಡಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಕೋಚ್‌ಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರಿಲ್ಲ

Advertisement

ಮಕ್ಕಳಲ್ಲಿ ಕ್ರೀಡೆ ಆಸಕ್ತಿ ಬೆಳೆಯಲು ಮಾನಸಿಕ ಮತ್ತು ದೈಹಿಕವಾಗಿ ಪ್ರಾಥಮಿಕ ಶಾಲಾ ಹಂತದಲ್ಲೇ ಪ್ರೇರಣೆ ಸಿಗಬೇಕು. ನಮ್ಮ ವ್ಯವಸ್ಥೆಯಲ್ಲಿ ಹೀಗಾಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಶೇ. 50ಕ್ಕೂ ಅಧಿಕ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭಾವಂತ ವಿದ್ಯಾರ್ಥಿ ಸೂಕ್ತ ತರಬೇತಿ, ಮಾರ್ಗದರ್ಶನ ಇಲ್ಲದೆ ಕ್ರೀಡಾ ಕ್ಷೇತ್ರದಿಂದ ವಂಚಿತರಾಗುತ್ತಿದ್ದಾರೆ. ಈಗಿರುವ ಬೆರಳಣಿಕೆ ಸಂಖ್ಯೆಯ ದೈ.ಶಿ. ಶಿಕ್ಷಕರು ತಮ್ಮ ಶಾಲೆಯ ಜವಾಬ್ದಾರಿ ಜತೆಗೆ ಹೆಚ್ಚುವರಿಯಾಗಿ ಮಕ್ಕಳಿಗೆ ಕ್ರೀಡಾ ಪಾಠವನ್ನು ಹೇಳಿಕೊಡಬೇಕು. 1993ರಿಂದ ಸರಕಾರ ಅನುದಾನಿತ ಪ್ರಾಥಮಿಕ ಶಾಲೆ ಮತ್ತು 2003ರಿಂದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ದೈ.ಶಿ. ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಸೌಕರ್ಯದ ಕೊರತೆ

ಜಿಲ್ಲಾ ಕೇಂದ್ರದಂತೆ ಸುಸಜ್ಜಿತವಾಗಿ ತಾಲೂಕು ಮತ್ತು ಗ್ರಾ.ಪಂ. ಮಟ್ಟದಲ್ಲಿಯೂ ಉತ್ತಮ ಕ್ರೀಡಾಂಗಣ ಮತ್ತು ಸೌಕರ್ಯ ಒಳಗೊಂಡ ಕ್ರೀಡಾ ಕೇಂದ್ರ ನಿರ್ಮಾಣ ಗೊಳ್ಳಬೇಕು. ಕ್ರೀಡಾಸಕ್ತ ವಿದ್ಯಾರ್ಥಿಗಳು ಕುಂದಾಪುರ, ಕಾರ್ಕಳದಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ತರಬೇತಿ ಪಡೆಯಲು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತೀ ತಾಲೂಕು/ ಗ್ರಾ.ಪಂ.ಗಳಲ್ಲಿ ಒಂದರಂತೆ ಉತ್ತಮ ಆಟದ ಮೈದಾನ, ತರಬೇತಿ, ಮಾರ್ಗದರ್ಶನ ಕೇಂದ್ರವನ್ನು ಸ್ಥಾಪಿಸಲು ಜನಪ್ರತಿನಿಧಿಗಳು ಇಚ್ಛಾಸಕ್ತಿ ತೋರಬೇಕು ಎಂಬುದು ಗ್ರಾಮೀಣ ಕ್ರೀಡಾಪಟುಗಳ ಕೋರಿಕೆಯಾಗಿದೆ. ‌

ಸುಸಜ್ಜಿತ ಕ್ರೀಡಾಂಗಣ

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 150ರಿಂದ 200 ವಿದ್ಯಾರ್ಥಿಗಳು ನಿತ್ಯ ಆ್ಯತ್ಲೆಟಿಕ್‌ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಹೆಚ್ಚಿನ ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೋವಿಡ್‌ ಕಾರಣದಿಂದ ಶಾಲೆಗಳಲ್ಲಿ ಆ್ಯತ್ಲೆಟಿಕ್‌ ಕೂಟಗಳು ನಡೆದಿರಲಿಲ್ಲವಾದರೂ ತರಬೇತಿ ನಿಲ್ಲಿಸಿರಲಿಲ್ಲ. ಹೆಚ್ಚುವರಿ ಕೋಚ್‌ಗಳ ನೇಮಕ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ತಾಲೂಕು, ಗ್ರಾ.ಪಂ ಮಟ್ಟದಲ್ಲಿ ನರೇಗಾದಡಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಯೋಜನೆ ಸಿದ್ಧವಾಗುತ್ತಿದೆ. – ರೋಶನ್‌ ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ

ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next