Advertisement

ಉಡುಪಿ: 10 ಸಾವಿರ ಮೆಟ್ರಿಕ್‌ ಟನ್‌ ಮರಳು ಪೂರೈಕೆ

04:31 AM Oct 09, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮರಳುಗಾರಿಕೆ ಸಮಸ್ಯೆ ತಕ್ಕ ಮಟ್ಟಿಗೆ ನಿವಾರಣೆಯಾಗುತ್ತಿದೆ. ಇಲ್ಲಿಯವರೆಗೆ 10 ಸಾವಿರ ಮೆ. ಟನ್‌ಗಳಷ್ಟು ಮರಳು ಒದಗಿಸಲಾಗಿದೆ. ಪರವಾನಿಗೆ ನೀಡುವ ಕೆಲಸ ನಡೆಯುತ್ತಿದ್ದು, 170 ಮಂದಿ ಪರವಾನಿಗೆದಾರರಲ್ಲಿ 158 ಮಂದಿ ಅರ್ಹರು ಎಂದು ಗುರುತಿಸಲಾಗಿದೆ. 120 ಮಂದಿಗೆ ಪರವಾನಿಗೆ ನೀಡಲಾಗಿದೆ. ರಜೆ ಇದ್ದ ಕಾರಣ ಎರಡು ದಿನಗಳಿಂದ ಈ ಪ್ರಕ್ರಿಯೆ ವಿಳಂಬವಾಗಿದ್ದು, ವಾರಾಂತ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

ಮರಳು ಸಾಗಾಟದ ಎಲ್ಲ ಲಾರಿಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಜಿಲ್ಲೆಯಿಂದ ಮರಳು ಹೊರಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಉಲ್ಲಂ ಸಿದರೆ ಪ್ರಕರಣ ಪರವಾನಗಿದಾರರಿಗೆ 28 ಷರತ್ತು ವಿಧಿಸಲಾಗಿದೆ. ಯಾವುದೇ ಅಂಶ ಉಲ್ಲಂಘನೆಯಾದರೂ ದಂಡ ತಪ್ಪಿದ್ದಲ್ಲ. ಮರಳು ದಿಬ್ಬ ತೆರವಿಗೆ 170ಕ್ಕಿಂತ ಹೆಚ್ಚು ಪರವಾನಗಿ ನೀಡದಿರಲು ಜಿಲ್ಲೆಯ ಏಳು ಸದಸ್ಯರ ಸಮಿತಿ ನಿರ್ಧರಿಸಿದೆ. 2011ಕ್ಕಿಂತ ಮೊದಲು ಸಾಂಪ್ರದಾಯಿಕ ಮರಳು ದಿಬ್ಬ ತೆರವು ಮಾಡುತ್ತಿದ್ದ 12 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣವಿದೆ.

2020ಕ್ಕೆ ಸ್ಯಾಂಡ್‌ ಬಜಾರ್‌ ಆ್ಯಪ್‌
ಈಗಾಗಲೇ 7.96 ಲಕ್ಷ ಮೆ. ಟನ್‌ಗಳಷ್ಟು ಮರಳು ತೆರವಿಗೆ ಆದೇಶ ಬಂದಿದ್ದು, ಈ ಪ್ರಕ್ರಿಯೆ ಡಿಸೆಂಬರ್‌ ಅಂತ್ಯದವರೆಗೂ ನಡೆಯಲಿದೆ. ಅನಂತರ ಸ್ಯಾಂಡ್‌ ಬಜಾರ್‌ ಆ್ಯಪ್‌ ಮೂಲಕ ಸಾರ್ವಜನಿಕರು ಸಮೀಪದಿಂದಲೇ ಮರಳು ಪಡೆಯಬಹುದು. ಆನ್‌ಲೈನ್‌ನಲ್ಲಿ ಮರಳಿನ ದರ ತಿಳಿದು ಹಣವನ್ನೂ ಅಲ್ಲಿಯೇ ಪಾವತಿಸಿದರೆ ಮನೆ ಬಾಗಿಲಿಗೆ ಮರಳು ತಲುಪಲಿದೆ. ಇದಕ್ಕಾಗಿ ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ. ಮರಳು ಬುಕ್‌ ಮಾಡಿದ ಅನಂತರ ಮರಳು ಲೋಡ್‌ ಆದಲ್ಲಿಂದ ಪ್ರತೀ ಮಾಹಿತಿ ಗ್ರಾಹಕರ ಮೊಬೈಲಿಗೆ ಬರಲಿದೆ. ಅತ್ಯಂತ ಪಾರದರ್ಶಕವಾಗಿ ಮರಳು ವಿತರಣೆ ಪ್ರಕ್ರಿಯೆ ನಡೆಯಲಿದೆ. ಮರಳು ಗುತ್ತಿಗೆದಾರರ ಮತ್ತು ಮರಳು ಸಾಗಾಟ ಮಾಡುವ ವಾಹನಗಳ ನೋಂದಣಿ ಕೂಡ ಆ್ಯಪ್‌ನಲ್ಲಿ ನಡೆಯಲಿದೆ.

ಹೀಗಿದೆ ಮರಳು ದರ
ಮರಳು ಸಾಗಿಸುವ 600 ಲಾರಿಗಳಿಗೆ ಜಿಪಿಎಸ್‌, ಮರಳು ಧಕ್ಕೆಗೆ ಜಿಪಿಎಸ್‌ ಸಹಿತ ಜಿಯೋ ಫೆನ್ಸಿಂಗ್‌ ಅಳವಡಿಸಲಾಗಿದೆ. 10 ಟನ್‌ ಮರಳಿಗೆ 5,500 ರೂ. ದರ ನಿಗದಿಪಡಿಸಿದ್ದು, ಪ್ರತಿ ಟನ್‌ ಮರಳು ಸಾಗಾಟಕ್ಕೆ 96 ರೂ. ರಾಜಧನ ಪಾವತಿಸಬೇಕು. 20 ಕಿ.ಮೀ. ವ್ಯಾಪ್ತಿಯೊಳಗೆ ಸಣ್ಣ ವಾಹನದ ಮೂಲಕ ಮರಳು ಸಾಗಾಟಕ್ಕೆ 1,500 ರೂ., ಬಳಿಕದ ಪ್ರತಿ ಕಿ.ಮೀ.ಗೆ 35 ರೂ. ಸಾಗಣೆ ವೆಚ್ಚ ನಿಗದಿಯಾಗಿದೆ. 20 ಕಿ. ಮೀ. ಒಳಗೆ ದೊಡ್ಡ ವಾಹನದಲ್ಲಿ ಮರಳು ಸಾಗಿಸಲು 2,500 ರೂ. ಮತ್ತು ಹೆಚ್ಚುವರಿ ಪ್ರತಿ ಕಿ.ಮೀ.ಗೆ 50 ರೂ.ನಂತೆ ದರ ವಸೂಲಿ ಮಾಡಲಾಗುತ್ತಿದೆ.

ಅಪಾರ ಬೇಡಿಕೆ
3 ತಿಂಗಳುಗಳ ಕಾಲ ಪರವಾನಿಗೆ ನೀಡುವ ಕೆಲಸ ನಡೆಯಲಿದೆ. ಮರಳು ಲಭ್ಯತೆ ಇರುವ ಧಕ್ಕೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಹಲವರಿಂದ ಬೇಡಿಕೆ ವ್ಯಕ್ತವಾಗಿದ್ದು, ಪರವಾನಿಗೆ ಪೂರ್ಣಗೊಂಡ ಅನಂತರ ಬೇಡಿಕೆಗೆ ಅನುಸಾರ ಪೂರೈಸಲಾಗುವುದು. ಮುಂದಿನ ವರ್ಷಕ್ಕೆ ಸ್ಯಾಂಡ್‌ ಬಜಾರ್‌ ಆ್ಯಪ್‌ ಮೂಲಕ ಮರಳು ವಿತರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
-ರಾನ್ಜಿ ನಾಯಕ್‌,
ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next