ಕನ್ನಡ ಕಿರುತೆರೆ ವೀಕ್ಷಕರಿಗೆ “ಎಡೆಯೂರು ಶ್ರೀಸಿದ್ದಲಿಂಗೇಶ್ವರ’, “ಹರ ಹರ ಮಹಾದೇವ’, “ಮಹಾಭಾರತ’, “ರಾಧಾಕೃಷ್ಣ’ ಹಾಗೂ “ಸೀತೆಯ ರಾಮ’ ಮೊದಲಾದ ಪೌರಾಣಿಕ, ಆಧ್ಯಾತ್ಮಿಕ ಮತ್ತು ಮೌಲ್ಯಾಧಾರಿತ ಧಾರಾವಾಹಿಗಳನ್ನು ನೀಡಿರುವ “ಸ್ಟಾರ್ ಸುವರ್ಣ’ ವಾಹಿನಿ, ಇದೀಗ ಹೊಸ ವರ್ಷದ ಪ್ರಯುಕ್ತ ವೀಕ್ಷಕರಿಗೆ “ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ’ ಎಂಬ ಕನ್ನಡ ಮಣ್ಣಿನ ಸೊಗಡಿನ ಮತ್ತೂಂದು ಹೊಸ ಕಥೆಯನ್ನು ಪ್ರಸ್ತುತಪಡಿಸುತ್ತಿದೆ.
ಪುರಾಣದಲ್ಲಿ ಬರುವಂತೆ, ಒಮ್ಮೆ ಸುದರ್ಶನ ಚಕ್ರವು ಅಹಂಕಾರದಿಂದ ಮೆರೆದಾಗ, ಭೂಲೋಕದಲ್ಲಿ ಮಾನವನ ರೂಪದಲ್ಲಿ ಜನ್ಮ ತಾಳುವಂತೆ ಭಗವಾನ್ ಶ್ರೀ ವಿಷ್ಣುವು ಶಾಪ ನೀಡಿ, ನನ್ನಿಂದಾನೆ ನಿನ್ನ ಅಂತ್ಯವಾಗುವುದು ಎಂದು ಹೇಳುತ್ತಾನೆ. ಅಲ್ಲಿಂದ ಈ ಕಥೆ ಪ್ರಾರಂಭವಾಗುತ್ತದೆ. ಹೀಗೆ ಭೂಲೋಕದಲ್ಲಿ ಕಾರ್ತವೀರ್ಯಾರ್ಜುನನ ರೂಪದಲ್ಲಿ ಸುದರ್ಶನ ಚಕ್ರವು ಜನ್ಮ ತಾಳುತ್ತದೆ. ಹಾಗೂ ಶ್ರೀವಿಷ್ಣು ಮಾನವ ರೂಪದಲ್ಲಿ ಜನ್ಮತಾಳಲು ಆತನ ತಾಯಿಯಾಗಿ ಪಾರ್ವತಿಯು ರೇಣು ಮಹಾರಾಜನ ಮಗಳಾಗಿ ಜನ್ಮ ತಾಳುತ್ತಾಳೆ. ರೇಣುಕಾ ಕ್ಷತ್ರಿಯ ಗುಣಗಳನ್ನು ಕಲಿಯುತ್ತ ಬೆಳೆದರೆ, ಯಲ್ಲಮ್ಮನಿಗೆ ಅದು ರಕ್ತಗತವಾಗಿ ಬಂದಿರುತ್ತದೆ. ರೇಣುಕಾ ಅರಮನೆಯ ಗೋಡೆಗಳ ಮಧ್ಯೆ ಬೆಳೆದರೆ, ಯಲ್ಲಮ್ಮ ಪ್ರಕೃತಿಯ ಮಡಿಲಲ್ಲಿ ಬೆಳೆದಿರುತ್ತಾಳೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ಒಂದೇ ಆತ್ಮದ ಎರಡು ಶಕ್ತಿಗಳು ಒಂದಾಗಿ ಬಂದು ಮುಂಬರುವ ಕಷ್ಟ ಕೋಟಲೆಗಳನ್ನು ನಿವಾರಿಸುವುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ “ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಕನ್ನಡ ನೆಲದ ನೈಜ ಕಥೆಯನ್ನು ಕನ್ನಡಿಗರ ಮನೆಗಳಿಗೆ ತಲುಪಿಸಲು ಸಜ್ಜಾಗಿದೆ. ಈಗಾಗಲೇ ಈ ಧಾರಾವಾಹಿಯ ಚಿತ್ರೀಕರಣ ಶುರುವಾಗಿದ್ದು ರೇಣುಕಾ ಹಾಗೂ ಯಲ್ಲಮ್ಮನ ಬಾಲ್ಯದ ಕಥೆಯನ್ನು ಚಿತ್ರೀಕರಿಸಲಾಗುತ್ತಿದೆ. ಅಮೋಘ ಸೆಟ್, ಅದ್ಭುತ ಗ್ರಾಫಿಕ್ಸ್ ಮತ್ತು ಬೃಹತ್ ತಾರಾಬಳಗವಿರುವ ಧಾರಾವಾಹಿಯ ಪ್ರೋಮೋಗಳು ಪ್ರಸಾರವಾಗುತ್ತಿದ್ದು, ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಂದಹಾಗೆ, “ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ’ ಎಂಬ ಹೆಸರಿನಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಕನ್ನಡ ನಾಡಿನ ಕಿರುತೆರೆ ವೀಕ್ಷಕರನ್ನು ಆಶೀರ್ವದಿಸಲು “ಸ್ಟಾರ್ ಸುವರ್ಣ’ ವಾಹಿನಿಯ ಮೂಲಕ ಮನದಂಗಳಕ್ಕೆ ಬರುತ್ತಿರುವ ಕರುನಾಡಿನ ಶಕ್ತಿ ದೇವತೆಯ ಮಹಾಕಥೆ ಇದೇ ಜ. 23 ರಿಂದ ಸೋಮವಾರದಿಂದ – ಶನಿವಾರದವರೆಗೆ ಪ್ರತಿರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ.