ನವದೆಹಲಿ: ಮಹಾರಾಷ್ಟ್ರದ ಶಿವಸೇನೆಯಲ್ಲಿ ಬಂಡಾಯ ಎದ್ದಿದ್ದ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಗುರುವಾರ (ಮೇ 11) ತೀರ್ಪು ಪ್ರಕಟಿಸಿದ್ದು, ಉದ್ದವ್ ಠಾಕ್ರೆ ಬಹುಮತ ಸಾಬೀತುಪಡಿಸದೇ ರಾಜೀನಾಮೆ ನೀಡಿರುವುದರಿಂದ ಉದ್ಧವ್ ನೇತೃತ್ವದ ಸರ್ಕಾರವನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ.
ಇದನ್ನೂ ಓದಿ:Chikkamagaluru: ಕಾರು – ಟಿಟಿ ಮುಖಾಮುಖಿ ಢಿಕ್ಕಿ; ಮಗು ಸೇರಿ ಇಬ್ಬರು ಮೃತ್ಯು
ಸುಪ್ರೀಂಕೋರ್ಟ್ ತೀರ್ಪು ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ ತಂದಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹಾದಿ ಸುಗಮವಾದಂತಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?
Related Articles
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದ್ದ ಶಿಂಧೆ ಹಾಗೂ ಇತರ 15 ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಪುನಃಸ್ಥಾಪಿಸಲು ಅವಕಾಶ ನೀಡಬೇಕೆಂಬ ಕೋರಿಕೆನ್ನೂ ತಿರಸ್ಕರಿಸಿದೆ.
ಉದ್ಧವ್ ಠಾಕ್ರೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸದೇ ರಾಜೀನಾಮೆ ನೀಡಿದ್ದರು. ಆದರೂ ಉದ್ದವ್ ಠಾಕ್ರೆ ಅವರು ಬಹುಪಾಲು ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸಿರುವ ಅಂದಿನ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಿಲುವನ್ನು ಸುಪ್ರೀಂಕೋರ್ಟ್ ಖಂಡಿಸಿದೆ.
ಶಿವಸೇನೆಯಲ್ಲಿ ಉಂಟಾದ ಬಿಕ್ಕಟ್ಟಿನ ಬಳಿಕ ಪಕ್ಷವನ್ನು ತೊರೆದು ಬಿಜೆಪಿ ಜತೆ ಕೈಜೋಡಿಸಿದ್ದ ಏಕನಾಥ ಶಿಂಧೆ ಮತ್ತು 15 ಶಾಸಕರನ್ನು ಅನರ್ಹಗೊಳಿಸಬೇಕೆಂದು ಠಾಕ್ರೆ ಬಣ ಕೋರಿತ್ತು. ಆದರೆ ಇದಕ್ಕೆ ಶಿಂಧೆ ಆಕ್ಷೇಪಿಸಿದ್ದರು. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದರ ವಿಚಾರಣೆ ನಡೆಸಿದ್ದು, ಮಾರ್ಚ್ 16ರಂದು ತೀರ್ಪನ್ನು ಕಾಯ್ದಿರಿಸಿತ್ತು.