Advertisement

ಇಲ್ಲಿ ಭಕ್ತರೇ ಅರ್ಚಕರು: ಉದ್ದಾಮದಲ್ಲಿ ನೀವುಂಟು ದೇವ್ರುಂಟು

01:29 PM Apr 14, 2020 | |

ಭದ್ರಾವತಿಯಿಂದ ಶಿವಾನಿ ರಸ್ತೆಯಲ್ಲಿ ಸಾಗಿದರೆ ಸುತ್ತಲೂ ನಿತ್ಯ ಹರಿದ್ವರ್ಣ ಹಸಿರು. ಅಲ್ಲಲ್ಲಿ ಬಾಳೆ, ಅಡಿಕೆ ತೋಟಗಳ ಪಂಕ್ತಿ ಸಿಗುತ್ತವೆ. ಹಾಗೇ ಮುಂದೆ ಹೋದರೆ ಗಂಗೂರು ಅನ್ನೋ ಊರು. ಇನ್ನೂ ಸ್ವಲ್ಪ ಮುಂದಡಿ ಇಟ್ಟರೆ, ಕಮಾನು, ಒಳನುಗ್ಗಿದರೆ ಕಾಡಿನ ಸಾಲು.  ಅದರ ಮಧ್ಯೆಯೇ ಗಂಟೆ ಸದ್ದು ನಿಮ್ಮ ಕಿವಿಗೆ ಬಿದ್ದರೆ ಇಲ್ಯಾವುದಪ್ಪಾ ದೇವಾಲಯ ಎಂಬ ಪ್ರಶ್ನೆ ಮೂಡುವುದು ಸಹಜ. ಅಲ್ಲಿ ಕಾಣಸಿಗುವುದೇ ಉದ್ಧಾಮ ಆಂಜನೇಯ ದೇವಸ್ಥಾನ.

Advertisement

ಅಲ್ಲಿ ಹೋದ ಮೇಲೆ ನೀವು ಸ್ವಲ್ಪ ಕಂಗಾಲುತ್ತೀರಿ. ಕಾರಣ ಇಷ್ಟೇ, ಅಲ್ಲಿ ಅರ್ಚನೆಗೆ ಇಷ್ಟು, ಅಭಿಷೇಕಕ್ಕೆ ಅಷ್ಟು, ಪ್ರಸಾದ ಮಾಡಿಸಿದರೆ ಇಷ್ಟು.. ಇಂಥ ಯಾವುದೇ ಫ‌ಲಕಗಳು ಕಾಣೋಲ್ಲ. ಈಗ ಏನು ಮಾಡೋದು? ಅಂತ ಯೋಚಿಸಿ ಸ್ವಲ್ಪ ಪೂಜೆ ಮಾಡಿ ಕೊಡ್ತೀರ ಅಂತ ಕೇಳಿಬಿಡಬೇಡಿ. ನೀವು ಕೇಳಿದರೂ ಯಾರನ್ನು-ಕನ್ನಡಕ, ಲಲಾಟದ ಮಧ್ಯೆ ನಗುವ ಕುಂಕುಮ, ಪಂಚೆಯುಟ್ಟ- ನರೇಂದ್ರ ಗುರೂಜಿಗಳನ್ನೇ ಕೇಳಬೇಕು. ನಿಜ, ಈ ದೇವಾಲಯ ಮುಂಚೂಣಿಗೆ ಬರಲು ಇವರೇ ಕಾರಣಕರ್ತರು.

“ನಮ್ಮಲ್ಲಿ ಯಾರೂ ಪೂಜೆ ಮಾಡಿಕೊಡುವುದಿಲ್ಲ. ನೀವೇ ಮಾಡಿಕೊಳ್ಳಬೇಕು. ಇದು ದೇವರ ಆಜ್ಞೆ’ ಹೀಗಂದು ಬಿಡುತ್ತಾರೆ.  ಇದನ್ನು ಕಳೆದ ಹತ್ತಾರು ವರ್ಷಗಳಿಂದ ಚಾಚೂ ತಪ್ಪದೆ ವ್ರತದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಎಷ್ಟೋ ದೇವಾಲಯದಲ್ಲಿ ದೇವರನ್ನು ಮುಟ್ಟಲು ಬಿಡುವುದಿಲ್ಲ. ಮಡಿ, ಮೈಲಿಗೆ ಅನ್ನೋ ನಿಯಮಗಳು ಎಲ್ಲೆಡೆಯೂ ಬ್ಯಾರಿಕೇಡುಗಳಾಗಿರುತ್ತವೆ. ಆದರೆ ಇಲ್ಲಿ ಅದ್ಯಾವುದೂ ಇಲ್ಲವೇ ಇಲ್ಲ.

ಮಂಗಳಾರತಿ ತಟ್ಟೆಗೆ ದುಡ್ಡು ಹಾಕುವುದು, ಚೆನ್ನಾಗಿ ಪೂಜೆ ಮಾಡಿಸಿಕೊಳ್ಳುವ ಯಾವುದೇ ಆಮಿಷಗಳಿಲ್ಲ. ಪ್ರಸಾದ ಇಲ್ಲ, ಹೂವು ಸಿಗಲಿಲ್ಲ ಅನ್ನೋ ಯಾವ ಕಂಪ್ಲೇಂಟ್‌ ಬರೋಲ್ಲ. ಏಕೆಂದರೆ, ಗರ್ಭಗುಡಿಗೆ ಹೋದರೆ ಅಲ್ಲಿರುವವರೆಲ್ಲಾ ಮಂಗಳಾರತಿಯೋ, ಗಂಧದ ಕಡ್ಡಿಯೋ ಹಿಡಿದು ತಾವೇ ಪೂಜೆ ಮಾಡುತ್ತಿರುತ್ತಾರೆ. ಭಕ್ತಿಯಿಂದ ಹನುಮನ ಪಾದವನ್ನು ಮುಟ್ಟಿ ನಮಸ್ಕರಿಸುತ್ತಾರೆ.  ತಂದ ಕುಂಕುಮ, ಅರಿಷಣವನ್ನು ಪಾದಕ್ಕೆ ಬಳಿದು ಭಕ್ತಿಯಿಂದ ವಂದಿಸಿ ಹೋಗುತ್ತಿರುತ್ತಾರೆ.  ನೀವು ತಂದ ಹೂ, ಹಣ್ಣನ್ನು ನೀವೇ ನಿಮಗೆ ಬಂದಂತೆ ನೈವ್ಯೇಧ್ಯ ಮಾಡಿಕೊಂಡು, ತೃಪ್ತಿಯಾಗುವ ತನಕ ಧ್ಯಾನಿಸಿ ಹೋಗಬಹುದು.

Advertisement

ಹೀಗೇಕೆ?

ದೇವರಿಗೆ-‌ಕ್ತರಿಗೆ ನೇರ ಸಂಬಂಧ ಇರಬೇಕು. ಮಧ್ಯೆ ಯಾರೂ ಇರಬಾರದು. ಸ್ವಾಮಿಗೆ ಹೀಗೇ ಪೂಜೆ ಮಾಡಬೇಕು ಅಂತಿಲ್ಲ. ಯಾರಿಗೆ ಹೆಂಗೆ ತಿಳಿಯುತ್ತೋ ಹಂಗೆ ಮಾಡ್ಲಿà. ಯಾರು, ಎಷ್ಟೊತ್ತಿಗೆ ಬಂದರೂ ಇಲ್ಲಿ ಪ್ರಸಾದ ಸಿಗುತ್ತದೆ. ಬಂದು ಹೋದವರಿಗೆ ವಿದ್ಯೆ, ಆರೋಗ್ಯ ವೃದ್ಧಿಸಬೇಕು. ಅದಕ್ಕಾಗಿ ಬೇಕಾದ ಹೋಮ, ಹವನ ಮಾಡುತ್ತೀವಿ. ಯಾವುದಕ್ಕೂ ಹಣವಿಲ್ಲ ಎನ್ನುತ್ತಾರೆ ನರೇಂದ್ರ ಗುರೂಜಿ.

ಇಲ್ಲಿ ಯಾರೂ ನಿಮಗೆ ಇಷ್ಟೇ ದುಡ್ಡು ಹಾಕಬೇಕು ಅಂತ ಕೇಳುವವರಿಲ್ಲ.  ಮಂಗಳಾರತಿಗೆ ಹಾಕುವ ಹಣವನ್ನು ಹುಂಡಿಯಲ್ಲಿ ಹಾಕಬಹುದು. ಒಂದು ಪಕ್ಷ ನೀವು ಮಂಗಳಾರತಿ ತಟ್ಟೆಯಲ್ಲಿ ಹಣ ಹಾಕಿದರೂ ಅದು ನೇರ ಮತ್ತೆ ಹುಂಡಿಗೇ ಹೋಗುತ್ತದೆ.  ಇನ್ನೊಂದು ಮಹತ್ವದ ವಿಚಾರ ಎಂದರೆ, ಇಲ್ಲಿ ನಡೆಯುವ ಹೋಮ, ಹವನಗಳಿಗೆ ಒಂದು ಪೈಸೆ ಕೂಡ ಪಡೆಯುವುದಿಲ್ಲ. ಯಾರು ಬೇಕಾದರೂ ಬಂದು ಭಾಗವಹಿಸಬಹುದು.

ವಿಶೇಷ ಎಂದರೆ, ಇಲ್ಲಿಗೆ ಬರುವ ಭಕ್ತಾದಿಗಳಿಗೆ ಪ್ರತಿ ನಿತ್ಯ 500ರಿಂದ 2000ಜನಕ್ಕೆ ಪ್ರಸಾದ ವಿನಿಯೋಗವಾಗುತ್ತದೆ.  ಬಂದವರಿಗೆಲ್ಲಾ ಪ್ರಸಾದ ತೆಗೆದುಕೊಂಡು ಹೋಗಿ ಅಂತ ಪ್ರೀತಿಯಿಂದ ಹೇಳುವುದುಂಟು. ವಿಶೇಷ ದಿನಗಳಲ್ಲಿ 50-60ಸಾವಿರ ಭಕ್ತರಿಗೆ ಅನ್ನದಾನ ಆಗುವುದುಂಟು.  ಹುಣ್ಣಿಮೆಯಂದು ಇಲ್ಲಿ ಹೋಮ, ಹವನಗಳು ನಡೆಯುತ್ತಲೇ ಇರುತ್ತವೆ. ಭಕ್ತರು ಅದರಲ್ಲೂ ಭಾಗಿಯಾಗಬಹುದು. ನಿರ್ಬಂಧವಿಲ್ಲ. ಹುಣ್ಣಿಮೆಯ ಬೆಳ್ಳಂಬೆಳಗ್ಗೆ ದೇವರಿಗೆ ಅಭಿಷೇಕವಿರುತ್ತದೆ.  ಭಕ್ತಾದಿಗಳೇ ಸ್ವತಃ ದೇವರಿಗೆ ಅಭಿಷೇಕವನ್ನು ಮಾಡಬಹುದು. ಬಹುಶಃ ಈ ರೀತಿಯ ಅವಕಾಶವಿರುವುದು ಇದೊಂದೇ ದೇವಸ್ಥಾನದಲ್ಲಿ ಅನ್ನೋದು ವಿಶೇಷ.  ಆದರೆ, ಹುಣ್ಣಿಮೆಯಂದು ಹೆಚ್ಚುಕಮ್ಮಿ 30-40 ಸಾವಿರ ಜನ ಸೇರುವುದರಿಂದಲೂ, ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಜನ ಜಮಾಯಿಸುವುದರಿಂದಲೂ ಎಲ್ಲರೂ ಒಟ್ಟೊಟ್ಟಿಗೇ ಪೂಜೆ ಮಾಡಲು ಆಗದು ಎನ್ನುವ ಕಾರಣಕ್ಕಾಗಿ ಆವತ್ತು ಮಾತ್ರ ದೇವಾಲಯದ ಮಂದಿಯಲ್ಲಿ ಒಂದಷ್ಟು ಜನ ಪೂಜೆ ಮಾಡಿಕೊಡುತ್ತಾರೆ.  ಇದರ ಹೊರತಾಗಿ ದೇವರಿಗೂ, ಭಕ್ತರಿಗೂ ನೇರ ಮುಖಾಮುಖೀಯಾಗಬಹುದು.

ಒಟ್ಟಾರೆ, ಇಲ್ಲಿಗೆ ಬಂದರೆ ನೀವುಂಟು, ದೇವ್ರುಂಟು. ಏಕಾಂತದಲ್ಲಿ ದೇವರನ್ನು ಮಾತನಾಡಿಸಬಹುದು.

ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next