ಮುದ್ದೇಬಿಹಾಳ : ತಾಳಿ ಕಟ್ಟಿದ ಹೆಂಡತಿಯ ಶೀಲ ಶಂಕಿಸಿದ ಗಂಡನೊಬ್ಬ ಆಕೆಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಲು ಯತ್ನಿಸಿ, ನಂತರ ಆಕೆ ಸತ್ತಿದ್ದಾಳೆಂದು ತಿಳಿದು ಇಲ್ಲಿನ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗತನಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬಸರಕೋಡ ಗ್ರಾಮದಲ್ಲಿ ಇಂದು(ಶುಕ್ರವಾರ, ಆಗಸ್ಟ್ 13) ನಡೆದಿದೆ.
ಮಡಿವಾಳಪ್ಪ ಕಾನ್ಯಾಳ(26)ನೇ ಆ ಗಂಡನಾಗಿದ್ದು, ನೀಲಮ್ಮ ನತದೃಷ್ಟ ಹೆಂಡತಿಯಾಗಿದ್ದಾಳೆ. ಇವರಿಬ್ಬರಿಗೆ ಮಗ, ಮಗಳು ಇದ್ದಾರೆ. ಕೊಡಲಿಯಿಂದ ಹೊಡೆದಾಗ ನೀಲಮ್ಮ ನೆಲಕ್ಕೆ ಬಿದ್ದು ಒದ್ದಾಡತೊಡಗಿದ್ದಾಳೆ. ಆಕೆ ಸತ್ತಳೆಂದು ತಿಳಿದು ಮಡಿವಾಳಪ್ಪ ಪೊಲೀಸ್ ಠಾಣೆಗೆ ಬಂದಿದ್ದಾನೆ.
ಇದನ್ನೂ ಓದಿ : ಸೂರು ಕಳೆದುಕೊಂಡು 6 ವರ್ಷ ಕಳೆದರೂ, ಸೂರು ಇಲ್ಲಾ ಬಿಡಿಗಾಸು ಇಲ್ಲ
ಅತ್ತ ಇನ್ನೂ ಜೀವ ಇದ್ದ ನೀಲಮ್ಮಳನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸದ್ಯ, ನೀಲಮ್ಮ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಇತ್ತ ಮುದ್ದೇಬಿಹಾಳ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಕೊಂಡಿದ್ದಾರೆ.
ಈ ಹಿಂದೆ ಮಡಿವಾಳಪ್ಪ ಎರಡು ಬಾರಿ ಪತ್ನಿಯ ಶೀಲ ಶಂಕಿಸಿ ಆಕೆಯ ಕೊಲೆಗೆ ಯತ್ನಿಸಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ : ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ಇತರರಿಗೂ ಕರೆ ಕೊಡುತ್ತೇನೆ: ಸಿಎಂ ಬೊಮ್ಮಾಯಿ