“ಆ ರಾಜುನೇ ಬೇರೆ ಇಲ್ಲಿ ಕಾಣುವ ರಾಜುನೇ ಬೇರೆ..’
– ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ಮಂಜುನಾಥ್ ವಿಶ್ವಕರ್ಮ. ಅವರು ಹೇಳಿದ್ದು “ರಾಜು ಜೇಮ್ಸ್ ಬಾಂಡ್’ ಬಗ್ಗೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡದ ಜೊತೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲು ಆಗಮಿಸಿದ್ದರು. ಮೊದಲು ಮಾತಿಗಿಳಿದ ಅವರು ಹೇಳಿದ್ದಿಷ್ಟು. “ಕರ್ಮ ಬ್ರೋಸ್ ಬ್ಯಾನರ್‌ನಡಿ ನಾನು ಹಾಗೂ ಕಿರಣ್ ಬರ್ತೂರ್ (ಕೆನಡಾ) ಸೇರಿ ಚಿತ್ರ ನಿರ್ಮಿಸಿದ್ದೇವೆ. ಸದ್ಯಕ್ಕೆ ಚಿತ್ರ ಮುಗಿದಿದ್ದು, ಫೆಬ್ರವರಿಯಲ್ಲಿ ಆಡಿಯೋ ಬಿಡುಗಡೆ ಮಾಡಿ, ಬಿಡುಗಡೆ ಮಾಡುವ ಯೋಚನೆ ಇದೆ. ಬಿಕಾಂ ಓದಿದ ಹುಡುಗನೊಬ್ಬನಿಗೆ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂಬ ಆಸೆ ಇರುತ್ತೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಆಮೇಲೆ ಅವನು ಜೇಮ್ಸ್ ಬಾಂಡ್‌ನಂತಾಗುತ್ತಾನೆ. ಯಾಕೆ ಹಾಗಾಗುತ್ತಾನೆ ಅನ್ನೋದೇ ಕಥೆ. ಚಿತ್ರದ ಅಂಶ ಮತ್ತು ಆಶಯ ಚೆನ್ನಾಗಿದ್ದರಿಂದ ಕಿರಣ್ ಮತ್ತು ನಾನು ಸೇರಿ ಚಿತ್ರ ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರ, ಬೆಂಬಲ ನಮ್ಮ ಚಿತ್ರಕ್ಕಿರಲಿ’ ಎಂದರು ಮಂಜುನಾಥ್ ವಿಶ್ವಕರ್ಮ.
ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರಿಗೆ ಇದು ಮೂರನೇ ಚಿತ್ರ. ಹಿಂದಿನ ಎರಡು ಚಿತ್ರಗಳಿಗಿಂತ ಇದು ಭಿನ್ನ ಎನ್ನುವ ಅವರು, “ಇದೇ ಮೊದಲ ಸಲ ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ. 50 ದಿನಗಳ ಕಾಲ ಚಿತ್ರೀಕರಣಗೊಂಡಿದೆ. ನಾಲ್ಕು ಸಾಂಗ್, ಎರಡು ಫೈಟ್ ಕೂಡ ಇದೆ. ಚಿತ್ರದಲ್ಲಿ ಮನರಂಜನೆ ತುಂಬಿದೆ. ಗುರುನಂದನ್ ಇಲ್ಲಿ ಆ್ಯಕ್ಷನ್ ಮತ್ತು ಮ್ಯಾನರಿಸಂನಲ್ಲಿ ಇಷ್ಟವಾಗುತ್ತಾರೆ. ಸಾಧು, ಚಿಕ್ಕಣ್ಣ, ತಬಲನಾಣಿ ಅವರ ಕಾಮಿಡಿ ವಕೌìಟ್ ಆಗಿದೆ. ಎಷ್ಟೋ ವಿಷಯಗಳನ್ನು ನಿರ್ಮಾಪಕರು ಹೇಳಿದ್ದಾರೆ. ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಡಬ್ಬಿಂಗ್ ಮುಗಿಯುವ ಹಂತ ಬಂದಿದೆ. ಮನೋಹರ್ ಜೋಶಿ ಕ್ಯಾಮೆರಾ ಕೈಚಳಕ, ಅನೂಪ್ ಸೀಳಿನ್ ಸಂಗೀತ ಇಲ್ಲಿ ಹೈಲೈಟ್. ಅಮಿತ್ ಸಂಕಲನ ಮಾಡಿದರೆ, ನನ್ನೊಂದಿಗೆ ಜಗದೀಶ್ ನಡನಳ್ಳಿ, ಶಿವರಾಜ್ ಚಿತ್ರಕಥೆ ಮಾಡಿದ್ದಾರೆ. ಮುರಳಿ ನಾಲ್ಕು ಸಾಂಗ್‌ಗೆ ನೃತ್ಯ ಸಂಯೋಜಿಸಿದ್ದಾರೆ’ ಎಂದರು ದೀಪಕ್.
ನಾಯಕ ಗುರುನಂದನ್ ಅವರಿಗೆ ಈ ಚಿತ್ರ ವಿಶೇಷವಂತೆ. “ಇದು ಪಕ್ಕಾ ಮನರಂಜನೆ ಚಿತ್ರ. ಹಿಂದಿನ ಎರಡು ಚಿತ್ರಗಳಲ್ಲಿ ಮುಗ್ಧ ಪಾತ್ರ ಮಾಡಿದ್ದೆ. ಇಲ್ಲಿ ಪಕ್ಕಾ ಕಮರ್ಷಿಯಲ್ ಆಗಿರುವಂತಹ ಕಥೆ ಇದೆ. ನಾನು ಫೈಟ್ಸ್ ಕೂಡ ಮಾಡಿದ್ದೇನೆ. ಕಥೆಯ ಒನ್‌ಲೈನ್ ಕುರಿತು ನಾನು ಮತ್ತು ನಿರ್ಮಾಪಕ ಕಿರಣ್ ಚರ್ಚೆ ಮಾಡಿದ ಬಳಿಕ, ಮಂಜುನಾಥ್ ವಿಶ್ವಕರ್ಮ ಕೂಡ ಗ್ರೀನ್‌ಸಿಗ್ನಲ್ ಕೊಟ್ಟರು. ಕೊನೆಗೆ ದೀಪಕ್ ಜೊತೆಗೂಡಿ ಚಿತ್ರ ಮಾಡಲು ಮುಂದಾದೆವು. ನಮ್ಮ ಮೇಲೆ ನಂಬಿಕೆ ಇಟ್ಟು ನಿರ್ಮಾಪಕರು ಚಿತ್ರ ಮಾಡಿದ್ದಾರೆ. ಅವರ ನಂಬಿಕೆ ಸುಳ್ಳಾಗಲ್ಲ. ಲಂಡನ್‌ನ ವಿಶೇಷ ಜಾಗದಲ್ಲಿ ಚಿತ್ರೀಕರಿಸಿರುವುದು ಚಿತ್ರದ ಇನ್ನೊಂದು ಸ್ಪೆಷಲ್ ಎಂದರು ಗುರುನಂದನ್.
ಮತ್ತೂಬ್ಬ ನಿರ್ಮಾಪಕ ಕಿರಣ್ ಬಾರ್ತೂರು (ಕೆನಡಾ), ಕಳೆದ 9 ವರ್ಷಗಳಿಂದ ಕೆನಡಾದಲ್ಲಿ ಕನ್ನಡ ಚಿತ್ರಗಳ ವಿತರಣೆ ಮಾಡುವ ಮೂಲಕ ಅಲ್ಲಿ ಕನ್ನಡ ಚಿತ್ರಗಳಿಗೆ ವೇದಿಕೆ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ. ಅವರೇ ಹೇಳುವಂತೆ, “ಇದೊಂದು ಹೊಸ ಬಗೆಯ ಚಿತ್ರ. ಎಲ್ಲಾ ಅಂಶಗಳೂ ಇಲ್ಲಿವೆ. ಲಂಡನ್‌ನ ಸೆಂಟ್ರಲ್‌ನಲ್ಲಿ ಚಿತ್ರೀಕರಿಸಿರುವುದು ಹೈಲೈಟ್’ ಎಂದರು ಕಿರಣ್.
ಛಾಯಾಗ್ರಾಹಕ ಮನೋಹರ್ ಜೋಶಿ ಅವರಿಗೆ ಈ ಚಿತ್ರ ಸಾಕಷ್ಟು ಚಾಲೆಂಜಿಂಗ್ ಆಗಿತ್ತಂತೆ. ಕಾರಣ, ಸಂಡೂರಿನಲ್ಲಿ ಚಿತ್ರೀಕರಿಸುವಾಗ, ಅಲ್ಲಿ ಮೈನಿಂಗ್‌ನಿಂದ ರಸ್ತೆಯೆಲ್ಲಾ ಕೆಂಪಾಗಿದ್ದವಂತೆ. ಅದಕ್ಕೆ ತಕ್ಕಂತಹ ಲೈಟಿಂಗ್ ಪ್ಯಾಟರ್ನ್ ಬಳಸಿ ಚಿತ್ರಿಸಿದ್ದಾರಂತೆ. ಇದು ಹಳ್ಳಿಯ ಕಥೆಯೂ ಅಲ್ಲ, ಅತ್ತ ಸಿಟಿ ಕಥೆಯೂ ಅಲ್ಲ, ಪಟ್ಟಣ ಕಥೆಯಾದ್ದರಿಂದ ನೈಜತೆಗೆ ಹೆಚ್ಚು ಒತ್ತು ಕೊಟ್ಟು ಚಿತ್ರೀಕರಿಸಿರುವುದು ವಿಶೇಷತೆಗಳಲ್ಲೊಂದು’ ಎನ್ನುತ್ತಾರೆ ಮನೋಹರ್ ಜೋಶಿ.ಚಿತ್ರಕ್ಕೆ ಮೃದುಲಾ ನಾಯಕಿ. ಉಳಿದಂತೆ ಚಿತ್ರದಲ್ಲಿ ಜೈ ಜಗದೀಶ್, ರವಿಶಂಕರ್, ಅಚ್ಯುತ, ವಿಜಯ್ ಚೆಂಡೂರ್, ಮಂಜುನಾಥ್ ಹೆಗ್ಡೆ ನಟಿಸಿದ್ದಾರೆ.
ವಿಜಯ್ ಭರಮಸಾಗರ