ವಿಜಯಪುರ: ‘ಉದಯವಾಣಿ’ ಬೆಳಕಿಗೆ ತಂದ ವಿಜಯಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶು ಮಾರಾಟ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಿದೆ.
ಶುಕ್ರವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಶಿಶು ಮಾರಾಟ ಪ್ರಕರಣದ ವಿಷಯ ಪ್ರಸ್ತಾಪಿಸಿದ ಜಿಲ್ಲೆಯ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ‘ಉದಯವಾಣಿ’ ಪತ್ರಿಕೆಯ ಮೂಲಕ ಶಿಶು ಮಾರಾಟ ಪ್ರಕರಣ ಬಯಲಾದ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದರು.
5 ಸಾವಿರ ರೂ. ಶಿಶು ಮಾರಾಟ ನಡೆದ ಕೃತ್ಯ ಅತ್ಯಂತ ಹೇಯ ಹಾಗೂ ಅಮಾನವೀಯ. ಸರಕಾರ ಕಾನೂನು ಬಾಹಿರ ಈ ಕೃತ್ಯದ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಾರಾಟದ ಬಳಿಕ ಹೆತ್ತೊಡಲು ಸೇರದ ಮಗುವಿನ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸರಕಾರದ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ, ಸರ್ಕಾರಿ ಆಸ್ಪತ್ರೆಯ ದಾದಿಯಿಂದ ಮಗು ಮಾರಾಟ ಆಗಿರುವುದು ಸತ್ಯ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಸರ್ಕಾರ ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಅಗತ್ಯ ಇರುವ ಎಲ್ಲ ರೀತಿಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ, ಸರಕಾರ ಭವಿಷ್ಯದಲ್ಲಿ ಇಂಥ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.