ಕಾರ್ಕಳ: ಸುವರ್ಣ ಸಂಭ್ರಮವೆನ್ನುವುದು ಶ್ರೇಷ್ಠತೆಯ ಪ್ರತೀಕ. 50ರ ಸಂಭ್ರಮದಲ್ಲಿರುವ “ಉದಯವಾಣಿ’ ಈಗ ಹೊಸದಾಗಿ “ಸುದಿನ’ ಸಂಚಿಕೆ ಹೊರತಂದು, ಆ ಮೂಲಕ ಎಲ್ಲ ವರ್ಗದ ಓದುಗರಿಗೆ ಇಷ್ಟವಾಗುವಂತಹ ರೀತಿಯಲ್ಲಿ ಸುದ್ದಿ-ಮಾಹಿತಿಗಳನ್ನು ಕಟ್ಟಿಕೊಡುತ್ತಿರುವುದು ಸಂತೋಷಕರ ವಿಚಾರ ಎಂದು ಕಾರ್ಕಳ ದಾನಶಾಲೆಯ ರಾಜಗುರು ಧ್ಯಾನಯೋಗಿ ಶ್ರೀ ಜೈನಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ನುಡಿದರು.
ಅವರು ಶುಕ್ರವಾರ ದಾನಶಾಲೆ ಶ್ರೀ ಜೈನಮಠದಲ್ಲಿ ಉದಯವಾಣಿಯ ಕಾರ್ಕಳ “ಸುದಿನ’ ಮತ್ತು “ಕರಿಯಕಲ್ಲು ಕಾರ್ಲದ ಆತ್ಮ’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದ ಸಮಾಚಾರಗಳನ್ನು ತಿಳಿಸುವ ಮಾಧ್ಯಮ ಎಲ್ಲ ಕ್ಷೇತ್ರಗಳ ಕುರಿತು ಬೆಳಕು ಚೆಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಿದ ಸ್ವಾಮೀಜಿ, ಸರ್ವಧರ್ಮ ಸಮನ್ವಯದ, ಸರ್ವ ಧರ್ಮೀಯರಿಗೂ ಆಶ್ರಯ ತಾಣವಾಗಿರುವ ಕಾರ್ಕಳದಲ್ಲಿ ಸುದಿನ ಬಿಡುಗಡೆಗೊಳ್ಳುತ್ತಿರುವುದು ಸಂಭ್ರಮವನ್ನು ಮತ್ತಷ್ಟು ವೃದ್ಧಿಸಿದೆ ಎಂದು ಸ್ವಾಮೀಜಿ ಬಣ್ಣಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ನವೋದಯ ಟ್ರಸ್ಟ್‌ನ ನಿರ್ದೇಶಕ ಸುನಿಲ್ ಕುಮಾರ್ ಬಜಗೋಳಿ, ಮೋಹನ್ ಪಡಿವಾಳ್, ನೇಮಿರಾಜ್ ಆರಿಗ, ಪ್ರಭಾತ್ ಕುಮಾರ್, ದ್ವಾರಕಾ ನಿರಂಜನ್, ಎಂಎಂಎನ್‌ಎಲ್ ಸಿಇಒ ವಿನೋದ್ ಕುಮಾರ್, ಎಂಡಿಎನ್‌ಎಲ್ ಮುಖ್ಯಸ್ಥ ಹರೀಶ ಭಟ್, ಸಂಪಾದಕ ಅರವಿಂದ ನಾವಡ, ವ್ಯಾಪಾರ ಅಭಿವೃದ್ಧಿ ವಿಭಾಗದ ಡಿಜಿಎಂ ಸತೀಶ್ ಶೆಣೈ, ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು, ಉಡುಪಿ ಜಾಹೀರಾತು ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಭಟ್, ಸುದ್ದಿ ಸಂಪಾದಕ ರಾಜೇಶ್ ಮೂಲ್ಕಿ, ಪ್ರಸರಣ ವಿಭಾಗದ ಅಧಿಕಾರಿಗಳಾದ ಅಜಿತ್ ಭಂಡಾರಿ, ಪ್ರಕಾಶ್ ಪೆಲತ್ತೂರು, ವರದಿಗಾರ ರಾಮಚಂದ್ರ ಬರೆಪ್ಪಾಡಿ, ಪ್ರಸರಣ ವಿಭಾಗದ ಜಗದೀಶ್ ಪೂಜಾರಿ ವರಂಗ, ಕಚೇರಿ ಸಿಬಂದಿ ಸುಜಾತಾ, ಜಾಹೀರಾತು ವಿಭಾಗದ ವಿನಯ್ ಶೆಟ್ಟಿ, ಶರತ್ ಶೆಟ್ಟಿ ಬೆಳ್ಮಣ್ ಉಪಸ್ಥಿತರಿದ್ದರು.
ಫೋಟೋ : ಆಸ್ಟ್ರೋ ಮೋಹನ್