ಕಳೆದೊಂದು ದಿನದಲ್ಲಿ 42,618 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆ
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 42,618 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 330 ಮಂದಿ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಇನ್ನು, ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 2.50 ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ 2.63 ರಷ್ಟಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು (ಸಪ್ಟೆಂಬರ್ 4, ಶನಿವಾರ) ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
ತಾಲಿಬಾನ್ ಸಂಭ್ರಮಾಚರಣೆಯ ಗುಂಡಿನ ಸುರಿಮಳೆಗೆ ಮಕ್ಕಳು ಸೇರಿ ಹಲವರ ಸಾವು.!
ತಾಲಿಬಾನ್ ಉಗ್ರರು ಸಂಭ್ರಮಾಚರಣೆಗಾಗಿ ಕಾಬೂಲ್ ನಲ್ಲಿ ವೈಮಾನಿಕ ಗುಂಡಿನ ಸುರಿಮಳೆ ನಡೆಸಿದ್ದು, ಇದರಿಂದಾಗಿ ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಫಘಾನ್ ಸುದ್ದಿ ಸಂಸ್ಥೆ ಅಶ್ವಕ ವರದಿ ಮಾಡಿದೆ. ಇನ್ನು,
ಪಂಜ್ ಶೀರ್ ಕಣಿವೆಯ ಮೇಲೆ ತಾವು ನಿಯಂತ್ರಣ ಸಾಧಿಸಿದ್ದು, ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (NRFA) ನನ್ನು ಸೋಲಿಸಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ಉದ್ಯೋಗ ಕಳೆದುಕೊಂಡ 15 ಲಕ್ಷ ಮಂದಿ ಭಾರತೀಯರು..!
ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳನ್ನು ಒಳಗೊಂಡು ಭಾರತದಲ್ಲಿ ಕಳೆದ ತಿಂಗಳಿನಲ್ಲಿ ಆಗಷ್ಟ್ 15 ಲಕ್ಷ ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮಾಹಿತಿ ನೀಡಿದೆ. ಜುಲೈ ತಿಂಗಳಿನಲ್ಲಿ ಶೇಕಡಾ. 6.95 ರಷ್ಟಿದ್ದ ರಾಷ್ಟ್ರೀಯ ನಿರುದ್ಯೋಗ ದರವು ಆಗಷ್ಟ್ ತಿಂಗಳಲ್ಲಿ ಶೇಕಡಾ 8. 32 ಕ್ಕೆ ಹೆಚ್ಚಳವಾಗಿದೆ.
ನಮ್ಮನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ : ಟಿಕಾಯತ್
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮಹಾ ಪಂಚಾಯತ್ ನನ್ನು ಆಯೋಜಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಎಷ್ಟು ಮಂದಿ ರೈತರು ಸೇರುತ್ತಾರೆ ಎನ್ನುವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ದೇಶದಾದ್ಯಂತ ಸಹಸ್ರಾರು ಮಂದಿ ಭಾಗಿಯಾಗಲಿದ್ದಾರೆ. ಮಹಾ ಪಂಚಾಯತ್ ಗೆ ಬರುವ ರೈತರನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ರೈತರನ್ನು ತಡೆದರೇ, ನಾವು ಅದನ್ನು ಮೀರುತ್ತೇವೆ. ನಮ್ಮ ಗುರಿಯನ್ನು ತಲುಪಿಯೇ ತಲುಪುತ್ತೇವೆ ಎಂದು ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಲು ನಿಯಮ ಜಾರಿ : ಬೊಮ್ಮಾಯಿ
ಕೋವಿಡ್ 19 ಸೋಂಕಿನ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರಾಲಿಗಳಿಗೆ ಅವಕಾಶ ನೀಡಿರುವ ವಿಚಾರ ಸಾಮಾಜಿಕವಾಗಿ ಟೀಕೆಗಳಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಇದನ್ನೆಲ್ಲ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ
ಕೋವಿಡ್ ಇದ್ದರೂ ಕೆಲವು ಘಟನೆಗಳು ನಡೆದಿವೆ. ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಲು ನಿಯಮ ತರುತ್ತೇವೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ, ಪಂಜಾಬ್ ನಲ್ಲಿ ಆಪ್ ಅಧಿಕಾರಕ್ಕೆ : ಸಮೀಕ್ಷೆ
ಮುಂದಿನ ವರ್ಷ ಆರಂಭದಲ್ಲಿ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆ ಯಲ್ಲಿ ಬಿಜೆಪಿಯು ತಾನು ಸದ್ಯಕ್ಕೆ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಎಬಿಪಿ, ಸಿ-ವೋಟರ್ ಸಂಸ್ಥೆಗಳು ನಡೆಸಿರುವ ಜಂಟಿ ಸಮೀಕ್ಷೆ ತಿಳಿಸಿದೆ. ಇನ್ನು, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಬೆರಿಸ್ಟೋ ಮೇಲೆ ಹಲ್ಲೆ ಆರೋಪ : ಜಾರ್ವೋ ಬಂಧನ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯುತ್ತಿದೆ. ಉಭಯ ತಂಡಗಳೂ ಸಮಬಲದ ಹೋರಾಟ ನಡೆಸುತ್ತಿದೆ. ಆದರೆ ಸರಣಿಯಲ್ಲಿ ಆಗಾಗ ಮೈದಾನಕ್ಕೆ ನುಗ್ಗಿ ಕೀಟಲೆ ಮಾಡುತ್ತಿದ್ದ ವಿಚಿತ್ರ ಅಭಿಮಾನಿ ಜಾರ್ವೋ ಓವಲ್ ಟೆಸ್ಟ್ ಪಂದ್ಯದ ಎರಡನೇ ದಿನವೂ ಕೆಲ ಕಾಲ ಮೈದಾನದಲ್ಲಿ ಓಡಾಡಿ ಗಮನ ಸೆಳೆದಿದ್ದಾರೆ. ಘಟನೆಯನ್ನು ಐಸಿಬಿ ಗಂಭೀರವಾಗಿ ಪರಿಗಣಿಸಿದೆ. ಸೌತ್ ಲಂಡನ್ ಪೊಲೀಸರು ಜಾರ್ವೋನನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಜಾನಿ ಬೆರಿಸ್ಟೋಗೆ ಢಿಕ್ಕಿ ಹೊಡೆದ ಜಾರ್ವೋ, ಬೆರಿಸ್ಟೋಗೆ ಹಲ್ಲೆ ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿ ಬಂಧಿಸಲಾಗಿದೆ.
ಅನಂತನಾಗ್ ಹುಟ್ಟು ಹಬ್ಬ : ಎವರ್ ಗ್ರೀನ್ ಹೀರೋ ಕೈಯಲ್ಲಿ ವಿಭಿನ್ನ ಪಾತ್ರಗಳು
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‌ನಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಅಮೋಘ ಅಭಿನಯದ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನೇ ಹೊಂದಿರುವ ಅನಂತ್ ನಾಗ್ ಅವರು ಇಂದು 74ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ದೃಶ್ಯ-2′ ಚಿತ್ರೀಕರಣದಲ್ಲಿ ಭಾಗವಹಿಸಿರುವ ಅನಂತ್ ನಾಗ್ ಅವರ, “ಮೇಡ್ ಇನ್ ಬೆಂಗಳೂರು’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ಪರಂವಾ ಸ್ಟುಡಿಯೋ ನಿರ್ಮಾಣದಲ್ಲಿ ತಯಾರಾಗುತ್ತಿರುವ “ಆಬ್ರಕಡಾಬ್ರ’ ಚಿತ್ರದಲ್ಲೂ ಅನಂತ್‌ನಾಗ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದಲ್ಲದೇ ಯೋಗರಾಜ್ ಭಟ್ ನಿರ್ದೇಶನದ “ಗಾಳಿಪಟ-2′ ಚಿತ್ರದಲ್ಲೂ ಅನಂತ್‌ನಾಗ್ ನಟಿಸಿದ್ದಾರೆ.