Advertisement

ಎಚ್‌ಡಿಕೆ ಬಜೆಟ್ ಹೇಗೆ ಮಂಡಿಸ್ತಾರೆ?

12:17 AM Feb 08, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ನ 20 ಶಾಸಕರು ಎಚ್.ಡಿ.ಕುಮಾರ ಸ್ವಾಮಿ ತಮ್ಮ ಮುಖ್ಯಮಂತ್ರಿಯೇ ಅಲ್ಲ ಎಂದು ಹೇಳುತ್ತಿದ್ದಾರೆ. ಜನರ ಪಾಲಿಗೆ ಈ ಸರ್ಕಾರ ಬದುಕಿದೆಯೇ, ಸತ್ತಿದೆಯೇ ಎಂಬಂತಿದೆ. ಹೀಗಿದ್ದರೂ… ಕುಮಾರಸ್ವಾಮಿಯವರು ಯಾವ ಮುಖ ಹೊತ್ತುಕೊಂಡು ಬಜೆಟ್ ಮಂಡಿಸುತ್ತಾರೆ?

Advertisement

– ಇದು ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಪ್ರಶ್ನೆ. ‘ಉದಯ ವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

• ಬಜೆಟ್ ಅಧಿವೇಶನದ ಹೊತ್ತಿನಲ್ಲೇ ಸರ್ಕಾರದ ವಿರುದ್ಧ ಈ ಪ್ರತಿರೋಧ ಸರಿಯೇ?

ಕಾಂಗ್ರೆಸ್‌ನ 20 ಶಾಸಕರು ಕುಮಾರಸ್ವಾಮಿಯವರು ತಮ್ಮ ಮುಖ್ಯಮಂತ್ರಿ ಅಲ್ಲವೇ ಅಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಕುಮಾರಸ್ವಾಮಿಯವರು, ‘ನಾನೊಬ್ಬ ಕ್ಲರ್ಕ್‌ನಂತೆ ಕೆಲಸ ಮಾಡುತ್ತಿದ್ದೇನೆ. ನನಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ನಾನು ರಾಜೀನಾಮೆ ಬಿಸಾಕಿ ಹೋಗುತ್ತೇನೆ. ನಾನೇನು ಮುಂದುವರಿಯಬೇಕಿಲ್ಲ’ ಎಂದು ಹೇಳುತ್ತಿದ್ದಾರೆ. ಈ ಸರ್ಕಾರ ಜನರ ಪಾಲಿಗೆ ಬದುಕಿದೆಯೇ? ಪರಿಸ್ಥಿತಿ ಹೀಗಿರುವಾಗ ಕುಮಾರಸ್ವಾಮಿಯವರು ಯಾವ ಮುಖ ಹೊತ್ತುಕೊಂಡು ಬಜೆಟ್ ಮಂಡಿಸುತ್ತಾರೆ? 

ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಹೇಗೆ ಹೇಳುತ್ತೀರಿ?

Advertisement

ಸರ್ಕಾರಕ್ಕೆ ಬಹುಮತವಿಲ್ಲ ಎಂದು ನಾವೇನೂ ಹೇಳುತ್ತಿಲ್ಲ. ಕಾಂಗ್ರೆಸ್‌ ಶಾಸಕರೇ ಈ ಸರ್ಕಾರದಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಾರೆ. 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿಯವನ್ನು ಬದಲಾಯಿಸುವಂತೆ ಕೇಳಿರುವುದರ ಅರ್ಥವೇನು.

• ಬಜೆಟ್ ಅಧಿವೇಶನಕ್ಕೆ ಬಿಜೆಪಿ ಅಜೆಂಡಾ ಏನು?

ಅಲ್ಪಮತದ ಸರ್ಕಾರದಿಂದ ಬಜೆಟ್ ಮಂಡಿಸುವುದಕ್ಕೆ ಬಿಜೆಪಿಯ ವಿರೋಧವಿದೆ. ಹಾಗಾಗಿ ಅಲ್ಪಮತದ ಸರ್ಕಾರದ ವಿರುದ್ಧ ಸದನದೊಳಗೆ ದನಿ ಎತ್ತಿದ್ದೇವೆ. ಪರಿಸ್ಥಿತಿಗೆ ಅನುಗುಣವಾಗಿ ಪ್ರತಿರೋಧ ಮುಂದುವರಿಸುತ್ತೇವೆ.

• ಆಪರೇಷನ್‌ ಕಮಲ ಗುಮ್ಮ ಮತ್ತೆ ಬಿಜೆಪಿಯನ್ನು ಆವರಿಸಿರುವ ಬಗ್ಗೆ ಏನು ಹೇಳುವಿರಿ?

ಬಿಜೆಪಿಯಿಂದ ಯಾವುದೇ ಆಪರೇಷನ್‌ ನಡೆದಿಲ್ಲ. ಹಾಗಿದ್ದರೂ ಕಾಂಗ್ರೆಸ್‌ನವರು ಹಾಗೂ ಸಮ್ಮಿಶ್ರ ಸರ್ಕಾರವು ತನ್ನ ವೈಫ‌ಲ್ಯಗಳನ್ನು ಮುಚ್ಚಿಕೊಳ್ಳಲು ‘ಆಪರೇಷನ್‌ ಕಮಲ’ ಎಂದು ಆರೋಪಿಸುವ ತಂತ್ರ ಅನುಸರಿಸುತ್ತಿವೆ. ಇದಕ್ಕೆಲ್ಲಾ ಜಗ್ಗುವುದಿಲ್ಲ.

• ಗದ್ದಲದಿಂದಾಗಿ ಸದನದ ಕಲಾಪ ಬಲಿಯಾದರೆ ಬರಪೀಡಿತ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗದು…?

ಈ ಸರ್ಕಾರಕ್ಕೆ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬರಗಾಲದಿಂದ ತತ್ತರಿಸಿರುವ ಜನರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸಿಲ್ಲ. ಈ ಜನವಿರೋಧಿ ಸರ್ಕಾರಕ್ಕೆ ಜನರ ಸಂಕಷ್ಟಗಳು ಅರ್ಥವಾಗುತ್ತಿಲ್ಲ. ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಜನರ ಪರ ಹಾಗೂ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ.

• ಬಿಜೆಪಿ ಕೋಟ್ಯಂತರ ರೂ.ನೀಡುವ ಆಮಿಷವೊಡ್ಡಿ ಶಾಸಕರನ್ನು ಸೆಳೆಯುತ್ತಿದೆ ಎಂಬ ಆರೋಪದ ಬಗ್ಗ್ಗೆ?

ಕಾಂಗ್ರೆಸ್‌ ತನ್ನ ಶಾಸಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲವಾಗಿದೆ. ಅದನ್ನು ಮರೆಮಾಚಲು ಸುಳ್ಳು ಆರೋಪ ಮಾಡುತ್ತಿದೆಯಷ್ಟೆ.

• ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಯಿಂದ ಲೋಕಸಭಾ ಚುನಾವಣಾ ತಯಾರಿಗೆ ಹಿನ್ನಡೆಯಾಗುವುದಿಲ್ಲವೇ?

ಯಾವುದೇ ರೀತಿಯ ಹಿನ್ನಡೆಯಾಗಿಲ್ಲ. ಪಕ್ಷ ತನ್ನ ಪಾಡಿಗೆ ಸಿದ್ಧತಾ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಜತೆಗೆ ವಿರೋಧ ಪಕ್ಷವಾಗಿ ನಾವು ಸರ್ಕಾರದ ವಿರುದ್ಧವೂ ಹೋರಾಡುತ್ತಿದ್ದೇವೆ.

• ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಿಲ್ಲವೇ?

ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಬಿಜೆಪಿಯ ವರ್ಚಸ್ಸಿಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗಿಲ್ಲ. ಯಾವುದೇ ರೀತಿಯಲ್ಲಿ ಪಕ್ಷದ ಘನತೆಗೆ ಚ್ಯುತಿ ಉಂಟಾಗಲು ಅವಕಾಶ ನೀಡಿಲ್ಲ.

• ರಾಜಕೀಯ ಗೊಂದಲಗಳಿಗೆ ಕೊನೆ ಎಂದು?

ಅಲ್ಪಮತಕ್ಕಿಳಿದ ಹಾಗೂ ಜನವಿರೋಧಿ ಸರ್ಕಾರ ತೊಲಗಿದಾಗಷ್ಟೇ ಈ ಎಲ್ಲ ರಾಜಕೀಯ ಗೊಂದಲಗಳಿಗೆ ತೆರೆ ಬೀಳಲಿದೆ.

• ಕೆಲ ಅತೃಪ್ತ ಶಾಸಕರು ಬಿಜೆಪಿ ಶಾಸಕರ ನಿಯಂತ್ರಣ ದಲ್ಲಿದ್ದು, ಮಹಾರಾಷ್ಟ್ರ ಸರ್ಕಾರವು ಸಹಕಾರ ನೀಡುತ್ತಿದೆ ಎಂಬ ಆರೋಪಕ್ಕೆ ಏನು ಹೇಳುವಿರಿ?

ಇವೆಲ್ಲಾ ಅಂತೆ ಕಂತೆಗಳಷ್ಟೇ. ನಮಗೂ ಅತೃಪ್ತ ಶಾಸಕರಿಗೂ ಯಾವುದೇ ಸಂಬಂಧವಿಲ್ಲ.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next