Advertisement

ಕರಾವಳಿ ಜನಮಾನಸದ ಮುಖವಾಣಿ ಉದಯವಾಣಿ

02:20 AM May 03, 2022 | Team Udayavani |

ಬೆಳ್ತಂಗಡಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪತ್ರಿಕೆ ನಡೆಸುವುದು ಅಸಾಧ್ಯ ಅನ್ನುವಂತಹ ಮಾತಿತ್ತು. ಬೆಂಗಳೂರು ನಗರಕ್ಕೆ ಅಥವಾ ರಾಜಕೀಯ, ವ್ಯಾವಹಾರಿಕ ಕ್ಷೇತ್ರಕ್ಕಷ್ಟೇ ಪತ್ರಿಕೆ ಸೀಮಿತ ಎಂಬ ಕಾಲಘಟ್ಟದಲ್ಲಿ ಮಣಿಪಾಲದ ಪೈ ಬಂಧುಗಳು ಅಸಾಧ್ಯವಾದುದನ್ನು ಆಯ್ಕೆ ಮಾಡಿಕೊಂಡು “ಉದಯವಾಣಿ’ ಯನ್ನು ಹುಟ್ಟುಹಾಕಿದರು.

Advertisement

ಇಂದು ಆ ಪತ್ರಿಕೆ ಕರಾವಳಿ ಜನಮಾನಸದ ಮುಖವಾಣಿಯಾಗಿ ಬೆಳೆದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.

ಉದಯವಾಣಿ ಪತ್ರಿಕೆಯು 50 ಸಂವತ್ಸರ ಪೂರೈಸಿದ ಸಂದರ್ಭದಲ್ಲಿ ಮಣಿಪಾಲ ಆವೃತ್ತಿಯಿಂದ ಪ್ರಕಟಿ ಸಲಾದ “ಹೊಳಪಿನ ಹಾದಿ- ಯಾನದ ಕಥನ’ ವಿಶೇಷ ಸಂಚಿಕೆಯನ್ನು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭಾಶೀರ್ವಾದ ನೀಡಿದರು.

ನಗರಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗಗಳಲ್ಲಿ ಮೆಡಿಕಲ್‌ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಅಸಾಧ್ಯ ಎಂಬ ಸಮಯದಲ್ಲಿ ಕಾಲೇಜು ಸ್ಥಾಪಿಸಿ, ತಾಲೂಕು ಕೇಂದ್ರ ಗಳಲ್ಲಿ ಆಸ್ಪತ್ರೆಗಳಿಗೆ ವೈದ್ಯರೇ ಬರಲು ಸಾಧ್ಯವಿಲ್ಲ ಎಂಬ ಕಾಲಮಾನದಲ್ಲಿ ಮಣಿಪಾಲದಲ್ಲಿ ಶ್ರೇಷ್ಠ ಆಸ್ಪತ್ರೆ ತೆರೆದು ವೈದ್ಯಕೀಯ ತಂತ್ರಜ್ಞಾನ, ತಜ್ಞರಿರುವ ಆಸ್ಪತ್ರೆ ಎಂದರೆ ಮಣಿಪಾಲ ಆಸ್ಪತ್ರೆ ಎಂಬ ಮಟ್ಟಿಗೆ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇದೇ ಹಾದಿಯಲ್ಲಿ ಮುಂದುವರಿದು ಉದಯವಾಣಿ ಸಹಿತ ತರಂಗ, ತುಷಾರ, ರೂಪತಾರ, ತುಂತುರು ಪತ್ರಿಕೆಗಳನ್ನು ಪ್ರಕಟಿಸಲು ಶ್ರೇಷ್ಠ ಸಾಹಿತಿ, ವಿದ್ವಾಂಸರು, ಕವಿಗಳಲ್ಲಿ ಸಾಹಿತ್ಯ ವನ್ನು ಬರೆಯುವಂತೆ ಪ್ರೇರೇಪಿಸಿ ದರು. ಜತೆಗೆ ಮುದ್ರಣ ಕ್ಷೇತ್ರದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ತಂತ್ರಜ್ಞಾನ ಆವಿಷ್ಕಾರ ವಾದರೂ ಮೊದಲು ಸೇರುವುದು ಮಣಿಪಾಲಕ್ಕೆ, ಬಳಿಕ ದಿಲ್ಲಿ ಮುಂತಾದೆಡೆಗೆ ಹೋಗುತ್ತದೆ. ಅಷ್ಟರ ಮಟ್ಟಿಗೆ ಮುದ್ರಣ ಕ್ಷೇತ್ರವನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಚಯಿಸಿ ಸ್ಥಳೀಯರನ್ನೇ ತಜ್ಞರಾಗಿ ಬೆಳೆಸಿದ ಕೀರ್ತಿ ಮಣಿಪಾಲಕ್ಕೆ ಸಲ್ಲಬೇಕು ಎಂದು ಶ್ಲಾಘಿಸಿದರು.

ಮುಂಜಾನೆಯ ಅನಿವಾರ್ಯ
ಡಾ| ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಉದಯವಾಣಿ ಪತ್ರಿಕೆ ಜಗತ್ತಿನ ಆಗುಹೋಗುಗಳ ಜತೆಗೆ ಗ್ರಾಮೀಣ ವಿಚಾರ-ವೈಶಿಷ್ಟéದೆಡೆಗೂ ಆದ್ಯತೆ ನೀಡುತ್ತಾ ಬಂದಿದೆ. ಹಾಗಾಗಿ 50 ವರ್ಷ ಪೂರೈಸಿ ಇಂದಿಗೂ ಮುಂಜಾನೆಯ ಚಹಾ ಸೇವಿಸುವಾಗ ಉದಯವಾಣಿ ಪತ್ರಿಕೆ ಬೇಕೇಬೇಕು ಎಂಬ ಭಾವನೆ ನಮ್ಮಲ್ಲಿದೆ. ಇದೇ ಪತ್ರಿ ಕೆಯ ಪ್ರಾಮುಖ್ಯವನ್ನು ಸೂಚಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಎಲ್ಲ ಯೋಜನೆಗಳು ಯಶಸ್ವಿ
ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ ಎಂಡಿ ಮತ್ತು ಸಿಇಒ ವಿನೋದ ಕುಮಾರ್‌ ಮಾತನಾಡಿ, ಹೊಸತನಕ್ಕೆ ಜೋಡಣೆಯಾಗುವ ಮತ್ತು ವಿಶೇಷ ಆಸಕ್ತಿದಾಯಕ ವಿಷಯಗಳನ್ನು ಪರಿಚಯಿಸುವಲ್ಲಿ ಮಣಿಪಾಲ ಬಳಗವು ಸದಾ ಮುಂದಿರುತ್ತದೆ. ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ಮತ್ತು ಪೂಜ್ಯ ಡಾ| ಹೆಗ್ಗಡೆ ಅವರ ಆಶೀರ್ವಾದ ಪಡೆದು ಆರಂಭಿಸಿದ ಎಲ್ಲ ನಮ್ಮ ಯೋಜನೆಗಳು ಯಶಸ್ವಿಯಾಗಿವೆ. ಕೆಲ ವರ್ಷಗಳ ಹಿಂದೆ ಪೂಜ್ಯರ ಆಶೀರ್ವಾದದಿಂದ ಆರಂಭಿಸಿದ ಸುದಿನ ಇಂದು ಗ್ರಾಮೀಣ ಭಾಗದ ಮನೆ-ಮನಗಳಿಗೆ ತಲುಪುವ ಮೂಲಕ ದೊಡ್ಡ ಯಶಸ್ಸು ಕಂಡಿದೆ. ಈ ಯಶಸ್ಸಿಗೆ ಕಾರಣವಾದ ಎಲ್ಲರನ್ನೂ ಸ್ಮರಿಸಲೇಬೇಕು ಎಂದರು.

ಡಾ| ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ ಉಪಸ್ಥಿತರಿದ್ದರು. ಉದಯವಾಣಿ ಮಾರುಕಟ್ಟೆ ವಿಭಾಗ
ಮುಖ್ಯಸ್ಥರಾದ ರಾಮಚಂದ್ರ ಮಿಜಾರ್‌ ಪ್ರಸ್ತಾವನೆಗೈದು, ಕಾರ್ಯ ಕ್ರಮ ನಿರ್ವಹಿಸಿದರು. ಸೀನಿಯರ್‌ ಮ್ಯಾನೇಜರ್‌ ಸತೀಶ್‌ ಎ. ಮಂಜೇಶ್ವರ, ಅಸಿಸ್ಟೆಂಟ್‌ ಮ್ಯಾನೇಜರ್‌ ಜಯಂತ್‌ ಕೆ. ಬಾಯಾರು, ಕಿರಿಯ ಪ್ರತಿನಿಧಿ ಗುರು ಮುಂಡಾಜೆ ಉಪಸ್ಥಿತರಿದ್ದರು.

ಗೌರವ ಡಾಕ್ಟರೆಟ್‌: ಹೇಮಾವತಿ ಹೆಗ್ಗಡೆ ಅವರಿಗೆ ಅಭಿನಂದನೆ
ಮಂಗಳೂರು ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೆಟ್‌ ಪದವಿ ಗೌರವ ಸ್ವೀಕರಿಸಿದ ಡಾ| ಹೇಮಾವತಿ ವೀ. ಹೆಗ್ಗಡೆ ಅವರನ್ನು ಉದಯವಾಣಿ ಸಂಸ್ಥೆಯ ಪರವಾಗಿ ಅಭಿನಂದಿಸ ಲಾಯಿತು.

ನಾಳಿನ ಸಂಚಿಕೆಯ ಜತೆ ಓದುಗರಿಗೆ ಉಚಿತ
ಉದಯವಾಣಿ ಯ “ಹೊಳಪಿನ ಹಾದಿ-ಯಾನದ ಕಥನ’ ವಿಶೇಷ ಸಂಚಿಕೆಯು ಮೇ 4ರಂದು ಪತ್ರಿಕೆಯೊಂದಿಗೆ ಉಚಿತವಾಗಿ ಓದುಗರ ಕೈಗೆ ಸೇರಲಿದೆ. ಉದಯವಾಣಿಯ 50 ವರ್ಷಗಳ ಪಯಣವನ್ನು ಓದುಗರ ಮುಂದಿಡಲಾಗಿದ್ದು, ಶಿಕ್ಷಣ, ಮಹಿಳಾ ಸಶಕ್ತೀಕರಣ ಮತ್ತು ಆರೋಗ್ಯ ವಲಯದ ಕುರಿತು ಪರಿಣಿತರು ಬರೆದ ವಿಶೇಷ ಲೇಖನಗಳಿವೆ.

ಶತಮಾನದಂಚಿಗೂ ಜನಜೀವನದ ಜೀವನಾಡಿಯಾಗಿರಲಿ
ಮುದ್ರಣ ಮಾಧ್ಯಮದಲ್ಲಿ ಪತ್ರಿಕೆ ಗುಣಮಟ್ಟ ಮಾತ್ರವಲ್ಲ ಮುದ್ರಣ ಗುಣಮಟ್ಟವೂ ಶ್ರೇಷ್ಠವಾದುದು. ಈ ನೆಲೆಯಲ್ಲಿ ಪೈ ಬಂಧುಗಳು ಹಾಗೂ ಉದಯವಾಣಿ ಸಮೂಹದ ಕಾಣಿಕೆಗಳು ಸಾಮಾನ್ಯವಾದುದಲ್ಲ, ಬಹಳ ಶ್ರೇಷ್ಠವಾದುದು. ಹಾಗಾಗಿ ಉದಯವಾಣಿ ಕರಾವಳಿ ಕರ್ನಾಟಕದ ಮುಖವಾಣಿಯಾಗಿ 50 ವರ್ಷಗಳಿಂದ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದೆ.

ಪತ್ರಿಕೋದ್ಯಮದಲ್ಲಿ ಅನೇಕ ಬದಲಾವಣೆಗಳಾದರೂ ಹೊಸ ಹೊಸ ಪತ್ರಿಕೆಗಳ ಪರಿಚಯವಾದರೂ ಉದಯವಾಣಿಯನ್ನು ಸ್ಪರ್ಧಾತ್ಮಕವಾಗಿ ಬೆಳೆಸುವಲ್ಲಿ ಸಂಪಾದಕೀಯ ಹಾಗೂ ಆಡಳಿತ ಮಂಡಳಿ ಯಶಸ್ವಿಯಾಗಿದೆ. ಉದಯವಾಣಿ ನೂರುಕಾಲ ಬಾಳಿ ನಮ್ಮ ಜನಜೀವನದ ಜೀವನಾಡಿಯಾಗಿರಲಿ ಎಂದು ಡಾ| ಹೆಗ್ಗಡೆಯವರು ಶುಭಾಶೀರ್ವಾದ ನೀಡಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next