Advertisement

ದಳ ಕೋಟೆಯಲ್ಲಿಕೈ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ

04:04 PM Oct 02, 2022 | Team Udayavani |

ಮಂಡ್ಯ: ರಾಷ್ಟ್ರೀಯ ಕಾಂಗ್ರೆಸ್‌ನ ಯುವ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಪಾದಯಾತ್ರೆ ಅ.3ರಂದು ಜಿಲ್ಲೆಗೆ ಆಗಮಿಸಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಯುವ ರಾಜನಿಗೆ ಅದ್ಧೂರಿ ಸ್ವಾಗತ ಕೋರಲು ಸಜ್ಜಾಗಿದೆ.

Advertisement

ಪಾದಯಾತ್ರೆ ಮುಂದಿನ ವಿಧಾ ನಸಭಾ ಚುನಾವಣೆ ದಿಕ್ಸೂಚಿಯಾ ಗಲಿದೆ ಎಂಬ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೂ ಪ್ರತಿಷ್ಠೆಯಾಗಿದೆ. ಜೆಡಿಎಸ್‌ ಭದ್ರಕೋಟೆಯಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುವುದು ಜಿಲ್ಲಾ ನಾಯಕರಿಗೂ ಅನಿವಾರ್ಯವಾಗಿದೆ.

ಸಂಘಟನೆ ಶಕ್ತಿ ಪ್ರದರ್ಶನ ಪ್ರದರ್ಶಿಸಲೇಬೇಕಿದೆ: ಕೆಪಿಸಿಸಿ ಉಪಾಧ್ಯಕ್ಷ ರಾಗಿರುವ ಎನ್‌.ಚಲುವರಾಯ ಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಲೋಕಸಭೆ ಹಾಗೂ 2 ವಿಧಾನ ಪರಿಷತ್‌ ಚುನಾವಣೆ ಗಳಲ್ಲಿ ಜೆಡಿಎಸ್‌ಗೆ ತಕ್ಕ ಟಕ್ಕರ್‌ ಕೊಡುವ ಮೂಲಕ ಭದ್ರಕೋಟೆ ಬೇ ಧಿಸಿದ್ದಾರೆ. ಆದರೆ ಪ್ರಮುಖ ಘಟ್ಟ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಾಗಿರುವು ದರಿಂದ ತಮ್ಮ ಸಂಘಟನೆ ಶಕ್ತಿಯನ್ನು ರಾಹುಲ್‌ ಗಾಂಧಿ ಎದುರು ಪ್ರದರ್ಶಿಸಲೇಬೇಕಾಗಿದೆ.

ತಿಂಗಳಿನಿಂದ ಸಿದ್ಧತೆ: ಜಿಲ್ಲೆಯಲ್ಲಿ ಭಾರತ್‌ ಜೋಡೋ ಪಾದಯಾತ್ರೆ ಯಶಸ್ವಿಗೆ ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್‌ ನಾಯಕರು ಇನ್ನಿಲ್ಲದ ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯ ಪ್ರತಿ ಗ್ರಾಮಗಳಿಂದ ಜನರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಮನೆ ಮನೆಗೆ ಕರಪತ್ರ ಹಂಚಿಕೆ ಮಾಡುವ ಮೂಲಕ ಪಾದಯಾತ್ರೆಗೆ ಆಗಮಿಸುವಂತೆ ಪ್ರಚಾರ ನಡೆಸಿದ್ದಾರೆ.

ಪಾದಯಾತ್ರೆ ಯಶಸ್ವಿಗೆ ನಾಯಕರಿಗೆ ಜವಾಬ್ದಾರಿ: ಜಿಲ್ಲೆಯಲ್ಲಿ ಭಾರತ್‌ ಜೋಡೋ ಯಾತ್ರೆ 3 ದಿನ ನಡೆಯಲಿದೆ. ಅ.3, 6 ಹಾಗೂ 7ರಂದು ಶ್ರೀರಂಗ ಪಟ್ಟಣ, ಪಾಂಡವಪುರ ಹಾಗೂ ನಾಗಮಂಗಲ ತಾಲೂಕಿನಲ್ಲಿ ಸಾಗಲಿದೆ. 3 ದಿನ ಜಿಲ್ಲಾ ಕಾಂಗ್ರೆಸ್‌ ನಾಯಕರ ಶಕ್ತಿ ಪ್ರದರ್ಶನ ನಡೆಯಲಿದೆ. ಅದಕ್ಕಾಗಿ ಆಯಾ ವಿಧಾನಸಭಾ ಕ್ಷೇತ್ರವಾರು ಜವಾಬ್ದಾರಿ ವಹಿಸಿಕೊಂಡು ಮತದಾರರು, ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಪಾದ ಯಾತ್ರೆಗೆ ಕರೆತರುವ ಜವಾಬ್ದಾರಿ ನಾಯಕರ ಮೇಲಿದೆ.

Advertisement

ಪಾದಯಾತ್ರೆ ಅನುಕೂಲ: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಂದೂ ಸ್ಥಾನ ಗೆಲ್ಲದೆ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್‌ ಗೆ ಪಾದಯಾತ್ರೆ ಅನುಕೂಲಕರ ವಾತಾ ವರಣ ಸೃಷ್ಟಿಸಲಿದೆ ಎಂಬ ಚರ್ಚೆ ನಡೆಯುತ್ತಿವೆ. ಈಗಾಗಲೇ ಸ್ಥಳೀಯ ಹಾಗೂ ದಕ್ಷಿಣ ಪದವೀಧರ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಅದೇ ಹುಮ್ಮಸ್ಸಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಮುಂದಾಗಿದೆ. ಇದಕ್ಕೆ ಪಾದಯಾತ್ರೆ ಸಹಕಾರಿ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಕಾಂಕ್ಷಿತರಿಗೂ ಜವಾಬ್ದಾರಿ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರಿಗೂ ಜವಾಬ್ದಾರಿ ನೀಡಲಾಗಿದೆ. 3 ದಿನ ನಡೆಯುವ ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಜತೆಗೆ ಲಕ್ಷಾಂತರ ಮಂದಿ ಹೆಜ್ಜೆ ಹಾಕುವ ಮೂಲಕ ಬೆಂಬಲ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಆಯಾ ಕ್ಷೇತ್ರಗಳಲ್ಲಿನ ಆಕಾಂಕ್ಷಿತರು, ಮುಖಂಡರು, ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಪ್ರಚಾರ ಕೈಗೊಂಡು ಸಾರ್ವಜನಿಕರನ್ನು ಸೆಳೆದು ಕರೆತರುವ ಜವಾಬ್ದಾರಿ ನೀಡಲಾಗಿದೆ. ಕಳೆದ ವಾರದ ಹಿಂದೆ ನಡೆದ ಪೂರ್ವಭಾವಿ ಸಭೆಯಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇದೇ ವಿಚಾರ ಪ್ರಸ್ತಾಪ ಮಾಡಿದ್ದರು.

ಹಿರಿಯರ ಕಡೆಗಣನೆ ಆರೋಪ : ಕಾಂಗ್ರೆಸ್‌ನಲ್ಲಿ ಮೂಲ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಆಗಿಂದಾಗ್ಗೆ ಕೇಳಿ ಬರುತ್ತಲೇ ಇದೆ. ಜಿಲ್ಲಾ ಕಾಂಗ್ರೆಸ್‌ನ ಪದಾಧಿ ಕಾರಿಗಳ ನೇಮಕ ವಿಚಾರದಲ್ಲಿ ಹಿರಿಯ ಮುಖಂಡರ ಸಲಹೆ ಪಡೆಯದೇ ಏಕಾಏಕಿ ಬೇಕಾದವರಿಗೆ ಪದಾಧಿಕಾರಿಗಳ ಹುದ್ದೆ ನೀಡಲಾಗುತ್ತಿದೆ. ಇದರಿಂದ ಪಕ್ಷದ ಹಿರಿಯ ಮುಖಂಡರು ಪಕ್ಷದ ಚಟುವಟಿಕೆಗಳಿಂದಲೇ ದೂರ ಉಳಿದಿದ್ದಾರೆ ಎಂಬ ಆರೋಪ ರಿಂಗಣಿಸುತ್ತಲೇ ಇವೆ.

ಬಣ ರಾಜಕೀಯ ಕೊನೆಯಾಗುವುದೇ? : ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮೊದಲಿನಿಂದಲೂ ಇದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ಬಿನ್ನಾಭಿಪ್ರಾಯ ಚುನಾವಣೆ ವೇಳೆ ಸ್ಫೋಟಗೊಳ್ಳುತ್ತದೆ. ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್‌ನಲ್ಲಿ ಅವರ ಬೆಂಬಲಿಗರಿದ್ದಾರೆ. ಅದರಂತೆ ಮಾಜಿ ಸಚಿವ ಹಾಗೂ ದಿವಂತಗ ನಟ ಅಂಬರೀಷ್‌ ಬಣವೂ ಸಕ್ರಿಯವಾಗಿದೆ. ಇಬ್ಬರು ನಾಯಕರ ವೈಮನಸ್ಸಿನಿಂದ ಶುರುವಾದ ಬಣ ರಾಜಕಾರಣ ಕಾಂಗ್ರೆಸ್‌ಗೆ ಹಿನ್ನೆಡೆಯಾಗು ತ್ತಲೇ ಇದೆ. ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಶಮನಗೊಳಿಸುವ ಪ್ರಯತ್ನ ಇಂದಿಗೂ ನಡೆದಿಲ್ಲ. ಆದರೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಿಂದ ಬಣ ರಾಜಕೀಯ ಕೊನೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

 

ಎಚ್‌.ಶಿವರಾಜು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next