ಮಣಿಪಾಲ: ಸಮಾಜದ ಎಲ್ಲ ವರ್ಗದವರ, ಎಲ್ಲ ಧರ್ಮದವರ ಹಬ್ಬವನ್ನು “ಉದಯವಾಣಿ’ ಆಚರಿಸುವ ಮೂಲಕ ಜನರ ಹೃದಯ ಮಿಡಿತವಾಗಿ ಅಚ್ಚೊತ್ತಿದೆ ಮತ್ತು “ಉದಯವಾಣಿ’ ಪತ್ರಿಕೆ ಮಾತ್ರವಲ್ಲ ಅದು ಜನರ ಮನಸ್ಸಿನ ಭಾಷೆ ಎಂದು ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಯ ಎಂಡಿ ಜೆರ್ರಿ ವಿನ್ಸೆಂಟ್ ಡಯಾಸ್ ಅಭಿಪ್ರಾಯಪಟ್ಟರು.
“ಉದಯವಾಣಿ’ ದಿನಪತ್ರಿಕೆ ವತಿಯಿಂದ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಕ್ರಿಸ್ಮಸ್ ಸಂದರ್ಭ ಆಯೋಜಿಸಿದ ಗೋದಲಿ ಸ್ಪರ್ಧೆ-2022ರಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮಣಿಪಾಲದ “ಉದಯವಾಣಿ’ ಪ್ರಧಾನ ಕಚೇರಿಯಲ್ಲಿ ಶನಿವಾರ ಆಯೋಜಿಸಿದ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ನಾನು ಇಂದು ಈ ಮಟ್ಟಕ್ಕೆ ಏರಲು ಸತೀಶ್ ಯು.ಪೈ, ಪತ್ನಿ ಸಂಧ್ಯಾ ಎಸ್.ಪೈ, ದಿ.ಟಿ.ಮೋಹನ್ ದಾಸ್ ಎಂ. ಪೈ, ಗೌತಮ್ ಪೈ ಕಾರಣರಾಗಿದ್ದಾರೆ. ಮಣಿಪಾಲದಂತಹ ಪ್ರದೇಶದಲ್ಲಿ ಪತ್ರಿಕೆ, ಆಸ್ಪತ್ರೆ ಸೇರಿದಂತೆ ಪ್ರಿಂಟಿಂಗ್ ಕ್ಷೇತ್ರವನ್ನು ತೆರೆಯುವ ಮೂಲಕ ಅಂತಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಮೋಹನ್ ದಾಸ್ ಪೈ ಮತ್ತು ಸತೀಶ್ ಯು ಪೈ ಅವರದ್ದಾಗಿದೆ.
ಮುಂಜಾನೆ ಎದ್ದ ಕೂಡಲೇ “ಉದಯವಾಣಿ’ ಪತ್ರಿಕೆ ಓದದೆ ಇದ್ದರೆ ದಿನ ಪೂರ್ತಿಯಾಗದು ಎನ್ನುವಷ್ಟರ ಮಟ್ಟಿಗೆ ಜನರನ್ನು ಆಕರ್ಷಿಸುತ್ತಿದೆ. ತನ್ನ ಸತ್ಯ, ನಿಷ್ಠುರ ವರದಿಯೊಂದಿಗೆ “ಉದಯವಾಣಿ’ ಮನೆ ಮನವನ್ನು ಬೆಳಗುತ್ತ ಸಾಗುತ್ತಿದೆ. ಕ್ರೈಸ್ತರಲ್ಲಿ ಬಹುತೇಕರು ವಿದ್ಯಾವಂತರು, ಆಂಗ್ಲ ಮಾಧ್ಯಮದಲ್ಲಿಯೇ ಓದಿದವರು. ಆದರೆ ಅವರೆಲ್ಲರೂ ಓದುವುದು “ಉದಯವಾಣಿ’. ಏಸುವಿನ ತತ್ವವನ್ನು ಪ್ರಪಂಚಕ್ಕೆ ಸಾರುವ ನೆಲೆಯಲ್ಲಿ “ಉದಯವಾಣಿ’ ಆಯೋಜಿಸಿದ ಗೋದಲಿ ಸ್ಪರ್ಧೆಯಂತೆ ಇನ್ನಷ್ಟು ಸ್ಪರ್ಧೆಗಳು ಬರಲಿ ಎಂದು ಆಶಿಸಿದರು.
Related Articles
ಎಂಎಂಎನ್‌ಎಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ, ಶುಭಹಾರೈಸಿದರು.
“ಎಲ್ಲ ಸಮುದಾಯವನ್ನು ಒಗ್ಗೂಡಿಸುವ ವಿಶಿಷ್ಟ ಕಲ್ಪನೆಯ ಗೋದಲಿ’ “ಉದಯವಾಣಿ’ ಕರಾವಳಿ ಕರ್ನಾಟಕದ ಜನಪ್ರಿಯ ಪತ್ರಿಕೆಯಾಗಿದೆ. ಅಷ್ಟೇ ಅಲ್ಲ ಜನರ ಎಲ್ಲ, ಕಷ್ಟ, ಸುಖ, ದುಃಖಗಳಿಗೆ ಸ್ಪಂದಿಸುವ ಮೂಲಕ ಜನರ ಒಡನಾಡಿಯಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ವಿಶಿಷ್ಟ ಕಲ್ಪನೆಯೊಂದಿಗೆ “ಉದಯವಾಣಿ’ ಗೋದಲಿ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ ಎಂದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ವಿನೋದ್ ಕುಮಾರ್ ಅವರು ಗೋದಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇತ್ತೀಚೆಗೆ ನಮ್ಮ ಗೋದಲಿ ಸ್ಪರ್ಧೆಯಲ್ಲಿ ಯುವಕರ ಭಾಗವಹಿಸುವಿಕೆ ಹೆಚ್ಚಾಗುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ನಾವು ಗೋದಲಿ ಸ್ಪರ್ಧೆಯನ್ನು ಕೇವಲ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಏರ್ಪಡಿಸಿದ್ದಲ್ಲ, ಇದು ಎಲ್ಲ ಜಾತಿ, ಧರ್ಮದವರು ಸ್ಪರ್ಧಿಸುವ ಸ್ಪರ್ಧೆಯಾಗಿದೆ. ಕಳೆದ ವರ್ಷ ಮುಸ್ಲಿಂ ಕುಟುಂಬ ಗೋದಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಈ ಸ್ಪರ್ಧೆಯ ಮೂಲಕ ವಿವಿಧ ಜಾತಿ, ಧರ್ಮದ ಸಂಸ್ಕೃತಿ, ಸಾಮರಸ್ಯವನ್ನು ಬೆಸೆದು ಒಗ್ಗೂಡಿಸುವ ಹಂಬಲ ನಮ್ಮದಾಗಿದೆ ಎಂದು ಅವರು ಹೇಳಿದರು.
“ಉದಯವಾಣಿ’ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದರು. ತೀರ್ಪುಗಾರರಾಗಿ ಡೆನಿಸ್ ಡೇ’ಸಾ ತೊಟ್ಟಂ ಚರ್ಚ್, ಅನಿಲ್ ಡಿ’ಸೋಜಾ ಪೆರಂಪಳ್ಳಿ ಚರ್ಚ್, ರೆಜಿನಾ ಫೆರ್ನಾಂಡಿಸ್, ಎಲಿಸ್ ಡಿ”ಸೋಜಾ ಅವರು ಸಹಕರಿಸಿದ್ದರು. ಮ್ಯಾಗಸಿನ್ಸ್ ಮತ್ತು ಸ್ಪೆಶಲ್ ಇನಿಶಿಯೇಟಿವ್ಸ್, “ಉದಯವಾಣಿ’ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಸ್ವಾಗತಿಸಿ, ನಿರೂಪಿಸಿದರು. ಪ್ರಸರಣ ಮತ್ತು ಉತ್ಪನ್ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸತೀಶ್ ಶೆಣೈ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಡುಪಿ ವಲಯದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ವಂದಿಸಿದರು.
ಇದನ್ನೂ ಓದಿ: 2023 ರ ವಿಧಾನಸಭಾ ಚುನಾವಣೆ ನಂತರ ಸಮ್ಮಿಶ್ರ ಸರಕಾರ ಖಚಿತ : ಗಾಲಿ ಜನಾರ್ಧನ ರೆಡ್ಡಿ