Advertisement

ಆಟೋ ಪರವಾನಗಿ ಹೊಸ ಪದ್ಧತಿ ರದ್ದುಪಡಿಸಿ

05:57 PM Sep 09, 2021 | Team Udayavani |

ಚಿಕ್ಕಮಗಳೂರು : ಆಟೋ ಪರವಾನಗಿ ನೀಡಲು ಪ್ರಾದೇಶಿಕ ಸಾರಿಗೆ ಇಲಾಖೆ ಜಾರಿಗೆ ತರಲು ಮುಂದಾಗಿರುವ ನೂತನ ಪದ್ಧತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಶೃಂಗೇರಿ ತಾಲೂಕು ವ್ಯಾಪ್ತಿಯ ಆಟೋ ಚಾಲಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಶೃಂಗೇರಿ, ಕೊಪ್ಪ, ನರಸಿಂಹ ರಾಜಪುರ ಮೂಡಿಗೆರೆ, ಜಯಪುರ, ಬಾಳೆ ಹೊನ್ನೂರು, ಹರಿಹರಪುರ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ಆಟೋ ಚಾಲಕರು, ಶೃಂಗೇರಿ ಕ್ಷೇತ್ರ ಆಟೋ ಚಾಲಕರು ಮತ್ತು ಮಾಲಿಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ. ಎನ್‌. ರಮೇಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ. ಎನ್‌. ಜೀವರಾಜ್‌ ಮಾತನಾಡಿ, ಈ ಹಿಂದೆ ಆಟೋಗಳಿಗೆ ತಾಲೂಕು ವ್ಯಾಪ್ತಿಯಲ್ಲಿ ಪರ್ಮಿಟ್‌ ನೀಡಲಾಗುತ್ತಿತ್ತು. ಇದೀಗ ಪಟ್ಟಣ ಪಂಚಾಯಿತಿ ಮತ್ತು ಹೋಬಳಿ ವ್ಯಾಪ್ತಿಯಲ್ಲಿ ಪರ್ಮಿಟ್‌ ನೀಡುವ ಪದ್ಧತಿ ಜಾರಿಗೆ ತರಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದರು.

ಇದನ್ನೂ ಓದಿ : ದಸರಾ ಮಹೋತ್ಸವಕ್ಕೆ ಗಜಪಡೆ ಸಜ್ಜು; ಎರಡನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು

ನೂತನ ಪದ್ಧತಿ ಬೇರೆ ಜಿಲ್ಲೆಗಳಿಗೆ ಸರಿಯಾಗಬಹುದು. ಆದರೆ, ಮಲೆನಾಡು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆಟೋ ಚಾಲಕರು ಮತ್ತು ಮಾಲಿಕರಿಗೆ ಮಾರಕವಾಗುತ್ತದೆ. ನೂತನ ಪದ್ಧತಿಯಿಂದ ಬಾಡಿಗೆ ದೊರೆಯದೇ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ 12 ಸಾವಿರ ಆಟೋ ಚಾಲಕರ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಹೇಳಿದರು. ವಿಧಾನ ಪರಿಷತ್‌ ಉಪಸಭಾಪತಿ ಎಂ. ಕೆ. ಪ್ರಾಣೇಶ್‌ ಮಾತನಾಡಿ, ಆಟೋ ಚಾಲಕರು ಮತ್ತು ಮಾಲೀಕರ ಹಿತದೃಷ್ಟಿಯಿಂದ ಅವೈಜ್ಞಾನಿಕವಾಗಿರುವ ನೂತನ ಪದ್ಧತಿ ಕೈಬಿಟ್ಟು ಹಿಂದಿನ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಹೇಳಿದರು.

Advertisement

ಆಟೋ ಚಾಲಕರು ಮತ್ತು ಮಾಲಿಕರು ಆಟೋ ಪರ್ಮಿಟ್‌ ಅವಧಿಯನ್ನು ಎರಡು ವರ್ಷಕ್ಕೆ ಸೀಮಿತಗೊಳಿಸಬಾರದು. ಅದನ್ನು ದೀರ್ಘ‌ ಕಾಲದ ಅವಧಿಗೆ ನೀಡಬೇಕೆಂದು ಒತ್ತಾಯಿಸಿದರು. ಕೋವಿಡ್‌ ನಿಂದ ಕಳೆದ ಎರಡು ವರ್ಷಗಳಿಂದ ಬಾಡಿಗೆ ದೊರೆಯದೇ ಆಟೋ ಚಾಲಕರು ಮತ್ತು ಮಾಲಿಕರ ಬದುಕು ದುಸ್ತರವಾಗಿದೆ. ಲಾಕ್‌ ಡೌನ್‌ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ಪರದಾಡುತ್ತಿರುವ ಆಟೋ ಚಾಲಕರಿಗೆ ನೂತನ ಪದ್ಧತಿ ಮರಣ ಶಾಸನವಾಗಿದೆ.

ಪ್ರಾದೇಶಿಕ ಸಾರಿಗೆ ಇಲಾಖೆ ಆಟೋ ಚಾಲಕರು ಮತ್ತು ಮಾಲಿಕರ ಗಮನಕ್ಕೆ ತಾರದೇ ಏಕಾ ಏಕಿ ನೂತನ ಪದ್ಧತಿ ಜಾರಿಗೆ ತಂದಿದೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿ ಕೆ. ಎನ್‌. ರಮೇಶ್‌ ನ್ಯಾಯಾಲಯದ ಆದೇಶದ ಮೇರೆಗೆ ನೂತನ ಪದ್ಧತಿ ಜಾರಿಗೆ ತರಲಾಗಿದ್ದು, ಹತ್ತು ದಿನಗಳ ಒಳಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಚರ್ಚಿಸಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಜಿ. ಪ್ರಭು, ಶೃಂಗೇರಿ ಕ್ಷೇತ್ರ ಆಟೋ ಚಾಲಕರು ಮತ್ತು ಮಾಲಿಕರ ಸಂಘದ ಗೌರವಾಧ್ಯಕ್ಷ ಎಚ್‌. ಆರ್‌. ಜಗದೀಶ್‌, ಉಪಾಧ್ಯಕ್ಷ ವಿಜಯೇಂದ್ರ, ಮೂಡಿಗೆರೆ ತಾಲೂಕು ಗೌರವಾಧ್ಯಕ್ಷ ಅಮರ್‌ ನಾಥ್‌, ವಿಜಯ್‌ ಕುಮಾರ್‌, ಸಂಪತ್‌, ಮಧುಸೂದನ್‌, ನಾಗರಾಜ್‌, ಚಂದ್ರಶೇಖರ್‌, ಶಾಶ್ವತ್‌, ಸಿದ್ದಿಕ್‌, ನಾಗರಾಜ್‌, ಪ್ರೇಮ್‌, ಮಹಮ್ಮದ್‌ ಹನೀಫ್‌, ರಾಜು, ರುದ್ರೇಶ್‌ ಇತರರಿದ್ದರು.

ಇದನ್ನೂ ಓದಿ : ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೋವಿಡ್: ಅಭ್ಯಾಸ ಸ್ಥಗಿತಗೊಳಿಸಿದ ಟೀಂ ಇಂಡಿಯಾ

Advertisement

Udayavani is now on Telegram. Click here to join our channel and stay updated with the latest news.

Next