Advertisement
ಪುತ್ತೂರು: ಕೆಲವು ಭಾಗದಲ್ಲಿ ಬೆಳಗ್ಗೆ ಎದ್ದು ಸರಕಾರಿ ಬಸ್ ಹಿಡಿದು ಶಾಲೆ ಕಾಲೇಜಿಗೆ ಹೋಗುವುದೇ ದೊಡ್ಡ ಸಾಹಸ. ಮರಳಿ ಬರುವ ಸರ್ಕಸ್ ಅಂತೂ ಕೇಳಲೇಬೇಡಿ. ಇದಕ್ಕಿಂತಲೂ ಘೋರವಾದದ್ದು ಇನ್ನೊಂದು ಇದೆ. ಪುತ್ತೂರು ಭಾಗದ ಕೆಲವು ಕಾಲೇಜುಗಳಲ್ಲಿ ನಾನಾ ಕಾರಣಗಳಿಗಾಗಿ ಕ್ಲಾಸ್‌ಗಳು ಮಧ್ಯಾಹ್ನವೇ ಮುಗಿಯುತ್ತವೆ. ಕಾಲೇಜು ಬಿಟ್ಟರೂ ಇಲ್ಲಿ ನವರಿಗೆ ಮನೆಗೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ, ಹೆಚ್ಚಿನ ಊರಿಗೆ ದಿನಕ್ಕೆ ಎರಡೇ ಬಸ್.. ಒಂದು ಬೆಳಗ್ಗೆ ಮತ್ತೂಂದು ಸಂಜೆ. ಈ ಪರಿಸ್ಥಿತಿಯಲ್ಲಿ ಮಧ್ಯಾಹ್ನದ ಹೊತ್ತು ಸಂಕಷ್ಟಕ್ಕೆ ಒಳಗಾಗುವ ಕಥೆಯನ್ನು ಸ್ವತಃ ಬಸ್ಸೊಂದು ಹೇಳಿಕೊಂಡಿದೆ. ಆ ಕಥೆ ಯನ್ನು ಕೇಳುವಂತವರಾಗಿ..
Related Articles
Advertisement
ಹಾಗೋ ಹೀಗೋ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಕಾಲೇಜು ಅಂಗಳಕ್ಕೆ ಬಿಟ್ಟು ನಾನು ಹೊರಡುವುದು ಪುತ್ತೂರಿಗೆ. ಒಂದು ವೇಳೆ ನನ್ನ ಜತೆ ಬರಲಾಗದಿದ್ದರೆ ಅವರೆಲ್ಲ ಕಾಲೇಜು ತಲುಪುವಾಗ ಒಂದು ಅವಧಿ ಮುಗಿದಿರುತ್ತದೆ!
ಮಧ್ಯಾಹ್ನದ ಸಂಕಟ ಕೇಳಿ..!
ಬೆಳಗ್ಗೆ ನಾನು ಹೇಳಿದ ಸ್ಥಿತಿ ಬಹುತೇಕ ಎಲ್ಲ ಕಡೆ ಇದೆ. ಬೆಳಗ್ಗಿನ ಕಥೆಯನ್ನು ಹೇಗೋ ಸಹಿಸಿಕೊಳ್ಳೋಣ. ಆದರೆ ಈಗ ಹೇಳುವ ಪರಿಸ್ಥಿತಿ ಭಿನ್ನ. ಉಪನ್ಯಾಸಕರ ಕೊರತೆಯಿಂದ ಹೆಚ್ಚಿನ ಕಡೆಗಳಲ್ಲಿ ಪದವಿ ತರಗತಿಗಳು ಮಧ್ಯಾಹ್ನ ತನಕ ಇದ್ದು ಅನಂತರ ವಿದ್ಯಾರ್ಥಿಗಳು ಮನೆ ದಾರಿ ಹಿಡಿಯುತ್ತಾರೆ. ನಾನು ಬೆಳಗ್ಗೆ ಬಿಟ್ಟು ಹೋದ ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಮಧ್ಯಾಹ್ನದ ಅನಂತರ ತರಗತಿ ಇರುವುದಿಲ್ಲ. ಆಗ ಅವರು ಪುನಃ ಸುಳ್ಯಪದವಿಗೆ ಹೋಗಬೇಕು. ಆದರೆ ಪುತ್ತೂರು-ಬೆಟ್ಟಂಪಾಡಿ-ರೆಂಜ-ಮುಡಿಪಿನಡ್ಕ -ಸುಳ್ಯಪದವು ಮಾರ್ಗದಲ್ಲಿ ಮಧ್ಯಾಹ ನಾನಾಗಲೀ, ನನ್ನ ಸಹಪಾಠಿಯಾಗಲೀ ಸಂಚರಿಸುವುದೇ ಇಲ್ಲ. ಇಲ್ಲಿ ಬಸ್ ಬರುವಿಕೆಗಾಗಿಯೇ ಮಕ್ಕಳು ಕಾಯುತ್ತಿರುವುದು ಇಂದು-ನಿನ್ನೆಯ ಕಥೆಯು ಅಲ್ಲ. ವರ್ಷಗಳೇ ಉರುಳಿವೆ.
ಸುತ್ತಿ ಬಳಸಿ ಬರಬೇಕು, ಇಲ್ಲದಿದ್ದರೆ ಬಾಡಿಗೆ ರಿಕ್ಷಾ..!
ನಾನೇ ಬಿಟ್ಟು ಹೋದ ವಿದ್ಯಾರ್ಥಿಗಳ ಸುತ್ತಾಟದ ವ್ಯಥೆಯ ಕಥೆಯನ್ನು ನೀವೊಮ್ಮೆ ಕೇಳಿ ಬಿಡಿ. ಮಧ್ಯಾಹ್ನ ಕಾಲೇಜು ಬಿಟ್ಟ ಬಳಿಕ ಸುಳ್ಯಪದವಿಗೆ ತೆರಳುವ ವಿದ್ಯಾರ್ಥಿಗಳು ಸುತ್ತು ಬಳಸಿ ಮನೆಗೆ ತಲುಪದೇ ಬೇರೆ ದಾರಿ ಇಲ್ಲ. ಇದಕ್ಕಾಗಿ ಹತ್ತಾರು ಕಿ.ಮೀ.ದೂರ ಹೆಚ್ಚುವರಿ ಪ್ರಯಾಣ. ಕಾಲೇಜಿನಿಂದ ರೆಂಜ ತನಕ ನಡೆದುಕೊಂಡು ಬಂದು ಅಲ್ಲಿಂದ ಪೆರ್ಲ ಭಾಗದಿಂದ ಪುತ್ತೂರಿಗೆ ಹೋಗುವ ಖಾಸಗಿ ಬಸ್ ಹತ್ತಿ ಸಂಟ್ಯಾರಿನಲ್ಲಿ ಇಳಿಯಬೇಕು. ಅಲ್ಲಿಂದ ಇನ್ನೊಂದು ಬಸ್ ಹಿಡಿದು ಕೌಡಿಚ್ಚಾರಿನಲ್ಲಿ ಇಳಿದು ಅಲ್ಲಿ ಸುಳ್ಯಪದವು ಬಸ್‌ಗೆ ಕಾಯಬೇಕು. ಅಂದರೆ ಇದು ಕೊಂಕಣ ಸುತ್ತಿ ಮೈಲಾರದ ಕಥೆ. ಸುತ್ತಾಟ ಬೇಡ ಅನ್ನುವವರು, ರೆಂಜದಿಂದ 100 ರೂ. ಬಾಡಿಗೆ ತೆತ್ತು ಅಟೋದಲ್ಲಿ ಮುಡಿಪಿನಡ್ಕಕ್ಕೆ ಬರಬೇಕು. ಅಲ್ಲಿಂದ ಪುತ್ತೂರು ಕೌಡಿಚ್ಚಾರು ಮಾರ್ಗವಾಗಿ ಸುಳ್ಯಪದವಿಗೆ ಹೋಗುವ ಬಸ್‌ಗೆ ಕಾಯಬೇಕು. ಇವೆರೆಡು ಆಗದಿದ್ದರೆ ಎಂದಿನಂತೆ ಸಂಜೆ 4.15 ಕ್ಕೆ ಪುತ್ತೂರಿನಿಂದ ಹೊರಟು ಬೆಟ್ಟಂಪಾಡಿ ಮೂಲಕ ರೆಂಜ ಮಾರ್ಗವಾಗಿ ಬರುವ ಬಸ್ ಅನ್ನು ಆಶ್ರಯಿಸಬೇಕು. ಸಂಜೆ 4.45ಕ್ಕೆ ಆ ಬಸ್ ರೆಂಜಕ್ಕೆ ತಲುಪುತ್ತದೆ. ಇದರಲ್ಲಿ ಒಮ್ಮೊಮ್ಮೆ ಸಂಚಾರ ಅಂದರೆ ಅದು ದೇವರಿಗೆ ಪ್ರೀತಿ ಅಂದರೂ ತಪ್ಪೇನಿಲ್ಲ.
ನನಗೂ ಒಬ್ಬ ಗೆಳೆಯನಿದ್ದರೆ
ಮಧ್ಯಾಹ್ನ ವಿದ್ಯಾರ್ಥಿಗಳು ಕಾಯುವ ಸ್ಥಿತಿ ನೆನೆದಾಗಲೆಲ್ಲಾ ಸಂಕಟವಾಗುತ್ತಿದೆ. ನಾನೇ ಬಿಟ್ಟು ಹೋದ ದೂರದ ಊರಿನ ಆ ವಿದ್ಯಾರ್ಥಿಗಳು ದಿನವಿಡೀ ಸಮಯ ಸವೆಸುವ, ಪರೀಕ್ಷಾ ಸಂದರ್ಭದಲ್ಲಿ ಆತಂಕ ಪಡುವ ಸ್ಥಿತಿಗೆ ಮರುಗಬೇಕಾದವರು ಮರುಗುತ್ತಿಲ್ಲ ಅನ್ನುವುದೇ ನೋವಿನ ಸಂಗತಿ. ಎಷ್ಟೋ ಸಲ ನನಗೂ ಅನ್ನಿಸಿದುಂಟು, ನನಗೂ ಒಬ್ಬ ಗೆಳೆಯ (ಇನ್ನೊಂದು ಬಸ್) ಸಿಕ್ಕಿದರೆ ಇದೇ ರೂಟ್‌ನಲ್ಲಿ ಕಳುಹಿಸಿ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದೆ. ಆ ದಿನ ಎಂದೂ ಬರುವುದೋ ಏನೋ..!
ಇಲ್ಲಿನ ರೂಟ್ ಮ್ಯಾಪ್ ಹೀಗಿದೆ..
ಸುಳ್ಯಪದವಿನಿಂದ ಬೆಳಗ್ಗೆ 6.45, 8.00, 9.30ಕ್ಕೆ ಮುಡಿಪಿನಡ್ಕ-ಪೆರಿಗೇರಿ- ಕೌಡಿಚ್ಚಾರು- ಪುತ್ತೂರು ಮಾರ್ಗವಾಗಿ ಬಸ್ ಸಂಚಾರ ಇದೆ. ಬೆಟ್ಟಂಪಾಡಿ ಪದವಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಅದರಲ್ಲಿ ಬಂದರೆ ಮುಡಿಪಿನಡ್ಕದಲ್ಲಿ ಇಳಿದು ರಿಕ್ಷಾ ಮಾಡಿಕೊಂಡು ಹೋಗಬೇಕು. 8.30, 10.15ಕ್ಕೆ ಸುಳ್ಯಪದವಿನಿಂದ ಮುಡಿಪಿನಡ್ಕ ರೆಂಜ ಮಾರ್ಗವಾಗಿ ಬೆಟ್ಟಂಪಾಡಿ ಮೂಲಕ ಪುತ್ತೂರಿಗೆ ಬಸ್ ಇದೆ. ಈ ಎರಡು ಬಸ್‌ಗಳು ಮಾತ್ರ ಬೆಟ್ಟಂಪಾಡಿ ಕಾಲೇಜಿನ ಬಳಿಯಿಂದ ಹೋಗುತ್ತದೆ. ಈ ಎರಡು ಬಸ್‌ನ ಪೈಕಿ ಕಾಲೇಜಿನ ತರಗತಿ ಆರಂಭಕ್ಕೆ ಪೂರಕವಾಗಿ ಇರುವುದು 8.30ರ ಬಸ್. ಹಾಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಈ ಬಸ್ ಅನ್ನೇ ಅವಲಂಬಿಸಿದ್ದಾರೆ. ಬೆಳಗ್ಗೆ 8 ಗಂಟೆಯ ಪೆರಿಗೇರಿ ಕೌಡಿಚ್ಚಾರು ಬಸ್ ಕೈ ಕೊಟ್ಟರೆ ಆ ಬಸ್‌ನಲ್ಲಿ ಪುತ್ತೂರಿಗೆ ಹೋಗಬೇಕಿದ್ದ ವಿದ್ಯಾರ್ಥಿಗಳು 8.30ರ ರೆಂಜ ಮಾರ್ಗವಾಗಿ ಹೋಗುವ ಬಸ್ ಹತ್ತುತ್ತಾರೆ. ಇದರಿಂದ ಅತ್ತ ಬೆಟ್ಟಂಪಾಡಿ ಕಾಲೇಜಿಗೆ ಹೋಗುವವರಿಗೆ ಮತ್ತಷ್ಟು ತೊಂದರೆ. ಕಾಲಿಡದಷ್ಟು ಜಾಗ ಇಲ್ಲದೆ ನೇತಾಡಿಕೊಂಡೇ ಹೋಗಬೇಕಾದ ಅನಿವಾರ್ಯತೆ.
ಬೆಳಗ್ಗೆ ಸುಳ್ಯಪದವಿನಿಂದ ಅಡ್ಜೆಸ್ಟ್ ಮಾಡಿಕೊಂಡು ಬರುತ್ತೇವೆ. ಆದರೆ ಮಧ್ಯಾಹ್ನ ವೇಳೆ ಕಾಲೇಜು ಬಿಟ್ಟರೆ ನಾವು ಪುನಃ ಊರಿಗೆ ಹೋಗಲು ಆಗುತ್ತಿರುವ ಸಮಸ್ಯೆ ಒಂದೆರೆಡು ಅಲ್ಲ. ಮಧ್ಯಾಹ್ನದ ಹೊತ್ತು ರೆಂಜ, ಮುಡಿಪಿನಡ್ಕ, ಸುಳ್ಯಪದವಿಗೆ ಬಸ್ ಸಂಚಾರ ಬೇಕು. ಇದರಿಂದ ಸುತ್ತಾಟ, ಬಾಡಿಗೆ ವಾಹನ ಅಲೆದಾಟಕ್ಕೆ ಮುಕ್ತಿ ಸಿಗಲಿದೆ. –ಕೃತಿಕಾ, ಬೆಟ್ಟಂಪಾಡಿ ಕಾಲೇಜು ವಿದ್ಯಾರ್ಥಿನಿ
-ಕಿರಣ್ ಪ್ರಸಾದ್ ಕುಂಡಡ್ಕ