Advertisement

ಮಿಂಚೇರಿ ಕೆರೆಗೆ ದಶಕದ ಬಳಿಕ ನೀರು

06:02 PM Sep 08, 2021 | Team Udayavani |

ಬಳ್ಳಾರಿ: ತಾಲೂಕಿನ ಮಿಂಚೇರಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಕುಡಿವ ನೀರಿನ ಕೆರೆಯಲ್ಲಿ ಕೊನೆಗೂ ನೀರು ಸಂಗ್ರಹವಾಗಿದ್ದು ದಶಕದ ‌ ಬಳಿಕ ಕೆರೆ ನಿರ್ಮಾಣದ ‌ ಮೂಲ ಉದ್ದೇಶ ಈಡೇರುತ್ತಿರುವುದು ಕೆರೆ ವ್ಯಾಪ್ತಿ ಗ್ರಾಮಗಳ ಜನರಲ್ಲಿ ಸಂತಸ ‌ ಮೂಡಿಸಿದೆ.

Advertisement

ತಾಲೂಕಿನ ಸಂಜೀವರಾಯನ ಕೋಟೆ ಗ್ರಾಪಂ ವ್ಯಾಪ್ತಿಯ ಸಂಜೀವರಾಯನಕೋಟೆ, ಮಿಂಚೇರಿ, ಬುರ್ರನಾಯಕನಹಳ್ಳಿ, ಚೆರಕುಂಟೆ ಗ್ರಾಮಗಳಲ್ಲಿ ಸಮರ್ಪಕ ‌ ಕುಡಿಯುವ ‌ ನೀರಿನ ಸಮಸ್ಯೆ ಇದ್ದು, ಅಂತರ್ಜಲದಲ್ಲಿ ಬರುತ್ತಿದ್ದ ನೀರು ಕುಡಿಯಲು ಯೋಗ್ಯವೆನಿಸಿದರೂ, ಫ್ಲೋರೈಡ್‌ ಅಂಶ ಅಕವಾಗಿತ್ತು. ಆದರೂ, ಗ್ರಾಮಗಳ ಜನರು ಅದೇ ನೀರನ್ನು ಸೇವಿಸಿ ಜೀವನ ಸಾಗಿಸುತ್ತಿದ್ದರು.

ತಾಲೂಕಿನ ಮಿಂಚೇರಿ ಗ್ರಾಮದಲ್ಲಿ ಫ್ಲೋರೈಡ್‌ ಅಂಶವುಳ್ಳ ನೀರು ಸೇವಿಸಿ, ಹಲವರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆರೋಪಗಳು ಸಹ ಗ್ರಾಮಸ್ಥರಿಂದ ಕೇಳಿಬಂದವು. ಈ ಸಮಸ್ಯೆಯನ್ನು ನೀಗಿಸುವ ಸಲುವಾಗಿ ತಾಲೂಕಿನ ಮಿಂಚೇರಿ ಗ್ರಾಮದಲ್ಲಿ “ಬಹುಗ್ರಾಮ ಕುಡಿಯುವ ‌ ನೀರಿನ ಯೋಜನೆ’ಯಡಿ 10-15 ವರ್ಷಗಳ ಹಿಂದೆ ಮಿಂಚೇರಿ ಗ್ರಾಮದಲ್ಲಿ ಜಿಪಂ ಇಂಜಿನೀಯರಿಂಗ್‌ ವಿಭಾಗದಿಂದ ಕರೆ ನಿರ್ಮಿಸಲಾಯಿತು. ಜತೆಗೆ ಕೆರೆ ಆವರಣದಲ್ಲಿ ನೀರು ಶುದ್ಧೀಕರಣಕ್ಕೆ ಪಂಪ್‌ ಹೌಸ್‌ ನನ್ನು ಸಹ ನಿರ್ಮಿಸಲಾಯಿತು. ಸಮೀಪದ ಎಚ್‌ಎಲ್‌ ಸಿ ಕಾಲುವೆಯಿಂದ ಕೆರೆಗೆ ನೀರು ಸರಬರಾಜನ್ನು ಸಹ ಮಾಡಲಾಯಿತಾದರೂ ಕೆರೆಯಲ್ಲಿ ನೀರೇ ನಿಲ್ಲಲಿಲ್ಲ. ಇದೀಗ ಕೊನೆಗೂ ಕೆರೆಯಲ್ಲಿ ನೀರು ನಿಲ್ಲಿಸುವಲ್ಲಿ ಯಶಸ್ವಿಯಾಗಿರುವ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಹಲವು ಬಾರಿ ಅನುದಾನ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ನಿರ್ಮಾಣವಾಗಿದ್ದ ಮಿಂಚೇರಿ ಕೆರೆಗೆ ಸಮೀಪದ ‌ ಎಚ್‌ ಎಲ್‌ ಸಿ ಕಾಲುವೆಯಿಂದ ‌ ಪೈಪ್‌ ಲೈನ್‌ ಅಳವಡಿಸಿ ನೀರನ್ನು ಪಂಪ್‌ ಮಾಡಿದರೂ, ಕೆರೆಯಲ್ಲಿ ಮಾತ್ರ ನೀರು ನಿಲ್ಲುತ್ತಿರಲಿಲ್ಲ. ನೀರೆಲ್ಲ ಭೂಮಿಯಲ್ಲೇ ಇಂಗುತ್ತಿತ್ತು. ಇದು ಅಧಿಕಾರಿಗಳಿಗೂ ತಲೆ ನೋವಾಗಿ ಪರಿಣಮಿಸಿತ್ತು. ಇದರಿಂದ ಜಿಪಂ, ತಾಪಂ ಸಾಮಾನ್ಯ ಸಭೆಗಳಲ್ಲಿ ಕೆರೆ ಬಗ್ಗೆ ಧ್ವನಿ ಎತ್ತುತ್ತಿದ್ದ ಸಂಬಂಧಪಟ್ಟ ಜನ ಪ್ರತಿನಿಧಿಗಳು, ಕೆರೆ ನಿರ್ಮಿಸಿರುವ ಜಾಗ ತಾಂತ್ರಿಕವಾಗಿ ಸರಿಯಿಲ್ಲ. ಕಾಲುವೆಯಿಂದ ಅಳವಡಿಸಿರುವ ಪೈಪ್‌ ಲೈನ್‌, ಮೋಟರ್‌ ಕಡಿಮೆ ಸಾಮರ್ಥ್ಯವಿದೆ. ಕೆರೆ ನಿರ್ಮಾಣಕ್ಕೆ ಸೂಕ್ತ ಭೂಮಿ ಗುರುತಿಸುವಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬೆಲ್ಲಾ ಆರೋಪಗಳನ್ನು ಅಧಿ ಕಾರಿಗಳು ಎದುರಿಸಬೇಕಾಯಿತು.

ಮೆಮ್ರಿನ್‌ ಶೀಟ್‌ ಅಳವಡಿಕೆ: ನೀರು ನಿಲ್ಲದ ಮಿಂಚೇರಿ ಕೆರೆಯಲ್ಲಿ ನೀರು ನಿಲ್ಲಿಸಲು ಮುಂದಾಗಿದೆ ‌  ಅಧಿಕಾರಿಗಳು, ಕೆರೆಯ ಬಂಡ್‌ ಸುತ್ತಲೂ ಹಾಕಿದ್ದ ಕರಿಬಂಡೆಗಳನ್ನೆಲ್ಲ ತೆಗೆದು, ಕೆಳಗೆ ಮೆಮ್ರಿನ್‌ ಶೀಟ್‌ ಅಳವಡಿಸಿ, ಅದರ ಮೇಲೆ ಮಣ್ಣು ಹಾಕಿ ಮತ್ತದರ ಮೇಲೆ ಬಂಡೆಗಳನ್ನು ಹಾಕಲಾಯಿತು. ಆಗಲೂ ನೀರು ನಿಲ್ಲಲಿಲ್ಲ. ಇದಕ್ಕೆ ಹೆಚ್ಚುವರಿ ಅನುದಾನವನ್ನೂ ಬಿಡುಗಡೆಗೊಳಿಸಲಾಯಿತು. ಆದರೂ ಕೆರೆ ಉದ್ದೇಶ ‌ ಈಡೇರಲಿಲ್ಲ. ಜನರಿಗೆ ಕುಡಿಯಲು ನೀರು ದೊರೆಯಲಿಲ್ಲ. ಆದರೆ, ಬರೋಬ್ಬರಿ ಒಂದೂವರೆ ದಶಕದ ಬಳಿಕ ಕೆರೆಯಲ್ಲಿ ನೀರು ನಿಲ್ಲುವುದರ ಜತೆಗೆ ಸಂಬಂಧ ‌ಪಟ್ಟ ಗ್ರಾಮಗಳ ಜನರಿಗೆ ಕುಡಿಯಲು ಸಮರ್ಪಕ ನೀರು ದೊರೆಯುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

Advertisement

ಡಿಸಿ, ಶಾಸಕರು ಭೇಟಿ : ಮಿಂಚೇರಿ ಕೆರೆಯಲ್ಲಿ ನೀರು ನಿಲ್ಲುವ ಮೂಲಕ ದಶಕದ ಕನಸು ನನಸಾಗಿದ್ದ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ, ವಿಧಾನಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ, ಜಿಪಂ ಸದಸ್ಯ ಪ್ರಶಾಂತ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತಸ ‌ ವ್ಯಕ್ತ ಪಡಿಸಿದ್ದಾರೆ. ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬೇಸಿಗೆಯಲ್ಲಿ ಗ್ರಾಮಗಳ ‌ ಜನರು  ಎದುರಿಸುತ್ತಿದ್ದ ಕುಡಿವ ನೀರಿನ ಸಮಸ್ಯೆ ನೀಗಿದಂತಾಗಿದೆ.

ಇದನ್ನೂ ಓದಿ : ಮದುವೆ ನಂತ್ರ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ ?

Advertisement

Udayavani is now on Telegram. Click here to join our channel and stay updated with the latest news.

Next