Advertisement

ದೇವೋಭವದಿಂದ ಅತಿಥಿ ತುಮ್‌ ಕಬ್‌ ಜಾವೋಗೆ ವರೆಗೆ…

03:47 PM Jan 27, 2021 | Team Udayavani |

ಅದೊಂದು ಕಾಲವಿತ್ತು… ಅತಿಥಿಗಳಿಗೆ ಜನ ಆಗ ದೇವರ ಸ್ಥಾನವಿತ್ತಿದ್ದರು. ಮಧ್ಯಾಹ್ನಕ್ಕೆ ಹಸಿದು ಮನೆಗೆ ಬಂದವರಿಗೆ ಉಣಲಿಕ್ಕಿಟ್ಟ ನಂತರವೇ ಮನೆಯ ಯಜಮಾನ ಊಟ ಮಾಡುತ್ತಿದ್ದ. ಅದೊಂದು ಬಗೆಯ ತೃಪ್ತಿ ಆತನಿಗೆ. ಗಂಡನ ಈ ಪುಣ್ಯಕಾರ್ಯದಲ್ಲಿ ಹೆಂಡತಿಯೂ ಸಾಥ್‌ ಕೊಡುತ್ತಿದ್ದಳು. ಒಮ್ಮೊಮ್ಮೆ ಮನೆಯಲ್ಲಿ ಏನೂ ಇರದಿದ್ದರೆ, ತಮ್ಮ ಪಾಲಿನದನ್ನೇ ಅತಿಥಿಗೆ ಇತ್ತು ಅದರಲ್ಲಿಯೇ ತೃಪ್ತಿ ಪಡೆಯುತ್ತಿದ್ದರು.

Advertisement

ಅ ತಿಥಿ… ಎಂದರೆ ವಾರ, ತಿಥಿ ಯಾವುದನ್ನೂ ಪರಿಗಣಿಸದೆ ಅಚಾನಕ್ಕಾಗಿ ದಾಳಿ ಇಡುವ ವ್ಯಕ್ತಿ. ಆದರೆ ಈಗ ಆ ಥರದ ಅತಿಥಿಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಮೊಬೈಲ್‌ ಫೋನುಗಳ ಆವಿಷ್ಕಾರದಿಂದಾಗಿ, ಇಂಥ ದಿನ, ಇಷ್ಟು ಹೊತ್ತಿಗೆ ನಿಮ್ಮ ಮನೆಗೆ ಬರುತ್ತಲಿದ್ದೇವೆ ಎಂದು ಮೊದಲೇ ಹೇಳಿಬಿಡುತ್ತಾರೆ…ಇದೂ ಒಂದು ರೀತಿಯಲ್ಲಿ ಅನುಕೂಲವೇ… ಅದರೆ ಇದು
ಪರ್ವಕಾಲವಲ್ಲವಲ್ಲ… ಈಗ ಅತಿಥಿಗಳು ಬಹಳಷ್ಟು ಜನರಿಗೆ ಅನ್‌ ವಾಂಟೆಡ್‌. ಹೆಂಗಸರ ಸೀರಿಯಲ್‌ ಸಮಯ.. ಅಂದರೆ
ಆರೂವರೆಯಿಂದ ರಾತ್ರಿ ಎಂಟುಗಂಟೆ, ನಂತರ ಒಂಬತ್ತು ಗಂಟೆಯಿಂದ ಹತ್ತೂವರೆ. ಇವು ಪ್ರೈಮ್‌ ಟೈಮ್…. ಇಂಥ ಸಮಯದಲ್ಲಿ ಯಾರದೇ ಮನೆಗೆ ಹೋದಲ್ಲಿ ನಿಮಗೆ ನೀರಸ ಸ್ವಾಗತ ಕಟ್ಟಿಟ್ಟದ್ದು! ಹೀಗಾಗಿ- ಅಯ್ಯೋ, ನಾವು
ಮನಿಯೊಳಗಿಲ್ಲವಲ್ಲಾ ಸಾರಿ… ಎಂದು ಹೇಳಿ ಬಿಡುವ ಚಾನ್ಸೂ 99%. ಆ ಅತಿಥಿಗಳೇನು ಕಡಿಮೆಯೇ?

ಇವರು ಸೇರಾದರೆ ಅವರು ಸವ್ವಾಸೇರು. ಫೋನ್‌ ಮಾಡದೆಯೇ ದಾಳಿಯಿಡುತ್ತಾರೆ. ಕಾರಣ ಕೇಳಿದರೆ- ನಿಮ್ಮ ಫೋನ್‌
ಸ್ವಿಚ್ಚ್ಡ್ ಆಫ್ ಬಂತು… ಏನ ಮಾಡೋದು ಎನ್ನುತ್ತಾರೆ!

ಇದನ್ನೂ ಓದಿ:ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮತ್ತೆ ಎದೆನೋವು; ಆಸ್ಪತ್ರೆಗೆ ದಾಖಲು

ಇನ್ನೂ ಕೆಲವರಿರುತ್ತಾರೆ… ಅವರು ಲಾಡ್ಜ್ ನಲ್ಲಿ ರೂಮು ಮಾಡಿ, ಆರಾಮವಾಗಿದ್ದುಕೊಂಡು, ಸುಮ್ಮನೆ ಭೇಟಿಯಾಗಲು ಬರುವಂಥವರು. ಒಮ್ಮೊಮ್ಮೆ ಹತ್ತಿರದ ಸಂಬಂಧಿಗಳಿಗೆ ಇವರ ವರ್ತನೆಯಿಂದ ಮನಸ್ಸಿಗೆ ಪಿಚ್ಚೆನ್ನಿಸುವ ಸಾಧ್ಯತೆಯೂ ಇದೆ.
ಇಷ್ಟಾದರೂ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಮನೆಗೆ ಅತಿಥಿಗಳು ಬರಲಿ ಎನ್ನುವ ಮನೋಭಾವ ಇರುವ ಜನರೇ ಹೆಚ್ಚು.
ಇಲ್ಲಿ ಕೆಲವೊಂದು ಟ್ವಿಸ್ಟ್  ಆತಿಥೇಯರಿಗೆ. ಅತಿಥಿಗಳನ್ನು ನಗುಮೊಗದಿಂದ ಸ್ವಾಗತಿಸಿರಿ. ಯಾಕೆಂದರೆ ನಾಳೆ ನಾವೂ ಅವರ
ಸಹಾಯ ಪಡೆಯುವ ಪ್ರಸಂಗ ಬಂದೀತು. ನಿಮ್ಮ ಮಹತ್ವದ ವಸ್ತುಗಳನ್ನು ಅವರಿವರ ಕೈಗೆ ಸಿಗದಂತೆ ಇರಿಸಿಕೊಳ್ಳಿರಿ. ಕೆಟ್ಟ ಮೇಲೆ, ಕಳೆದ ಮೇಲೆ ಮರುಗುವುದಕ್ಕಿಂತ ಇದು ಒಳ್ಳೆಯದು.

Advertisement

ಅತಿಥಿಗಳಾದರೂ ಇತರರಿಗೆ ಭಾರವಾಗದಂತಿರಬೇಕು. ತಮ್ಮದೇ ಸೋಪು, ಟವಲ್ಲು, ಕಾಸ್ಮೆಟಿಕ್ಸ್ ತರಬೇಕು. ಇತರರದನ್ನು
ಉಪಯೋಗಿಸಬಾರದು. ತಮ್ಮ ಬಟ್ಟೆಗಳನ್ನು ಅಲ್ಲಿಲ್ಲಿ ಎಸೆಯದೆ ನೀಟಾಗಿ ತಮ್ಮ ಬ್ಯಾಗಿನಲ್ಲಿರಿಸಿಕೊಳ್ಳಬೇಕು. ಬಟ್ಟೆಗಳನ್ನು
ವಾಶ್‌ ಮಾಡುವುದಾದರೆ ತಾವೇ ಮಾಡಿಕೊಳ್ಳಬೇಕು. ತಮ್ಮ ವಸ್ತುಗಳು ಅಕಸ್ಮಾತ್‌ ಕಳೆದುಹೋದರೆ ಅಥವಾ ಕೆಟ್ಟು ಹೋದರೆ ಅದನ್ನು ದೂರಿನ ರೀತಿ ಹೇಳಬಾರದು. ಇದರಿಂದ ಮನಸ್ತಾಪವುಂಟಾಗುತ್ತದೆ. ಈಗ ಎಲ್ಲರ ಮನೆಗಳಲ್ಲಿಯೂ ಮೊದಲಿನಂತೆ ಮಾಡುವ ನೀಡುವ ಕೈಗಳಿರುವುದಿಲ್ಲ. ಹೀಗಾಗಿ ಒಂದೋ, ಎರಡೋ ದಿನಗಳಿಗೆ ಮಾತ್ರ ವಾಸ್ತವ್ಯವನ್ನು
ಸೀಮಿತಗೊಳಿಸಿಕೊಳ್ಳಬೇಕು.

ಆತಿಥ್ಯ ನೀಡಿದವರ ಮನೆಯಲ್ಲಿ ಏನೇ ಅಡುಗೆ ಮಾಡಿದ್ದರೂ ರುಚಿಯಾಗಿದೆಯೆಂದು ಹೇಳಿ ಊಟ ಮಾಡಬೇಕು. ಅವರ ಮಕ್ಕಳ
ಜಾಣ್ಮೆಯನ್ನು ಮುಕ್ತ ಮನಸ್ಸಿನಿಂದ ಹೊಗಳಬೇಕು. ಅದೇನು ಮಹಾ ಎಂದು ತಮ್ಮದೇ ಡೋಲು ಬಾರಿಸುತ್ತ ಹೋಗಬಾರದು! ಒಟ್ಟಿನಲ್ಲಿ, ಇಬ್ಬರೂ ಎಚ್ಚರ ವಹಿಸಿದರೆ ಅತಿಥಿ ತುಮ್‌ ಕಬ್‌ ಜಾವೋಗೆ ಎನ್ನುವ ಸ್ಥಿತಿ ಬಾರದು.

– ಮಾಲತಿ ಮುದಕವಿ

Advertisement

Udayavani is now on Telegram. Click here to join our channel and stay updated with the latest news.

Next