Advertisement

5 ದಶಕಗಳ ಮಹಾಯಾನ

10:10 AM Jan 02, 2020 | sudhir |

ಉದಯವಾಣಿ ತನ್ನ ಐವತ್ತು ವರ್ಷಗಳ ಹಾದಿಯಲ್ಲಿ ಅವೆಷ್ಟೋ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದೆ. ಇಂದಿನ ಎಷ್ಟೋ ಹೊಸತನಗಳು ಪತ್ರಿಕೆ ಆರಂಭವಾದ ಆ ಕಾಲದಲ್ಲೇ ಪತ್ರಿಕೆಯ ಸಂಪಾದಕೀಯ, ಮುದ್ರಣಾಲಯಗಳಲ್ಲಿ ದುಡಿದಿದ್ದ ಹಿರಿಯರ ಪ್ರಯೋಗಶೀಲತೆಯ ಮೂಸೆಯಿಂದ ಹೊರಬಂದು ಸಾಕಾರಗೊಂಡಿದ್ದವು.

Advertisement

ಸಾ ವಿರದ ಒಂಬೈನೂರ ಎಪ್ಪತ್ತರ ಜನವರಿ ಒಂದರಂದು ಆರಂಭವಾದ “ಉದಯವಾಣಿ’ ಕನ್ನಡ ದಿನಪತ್ರಿಕೆಗೆ ಈಗ ಐವತ್ತು ವರ್ಷ ವಯಸ್ಸು.
ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮೂರು ದಶಕಗಳು ಮತ್ತು ಇಪ್ಪತ್ತೂಂದನೆಯ ಶತಮಾನದ ಆದಿಭಾಗದ ಎರಡು ದಶಕಗಳಲ್ಲಿ ಅಸ್ತಿತ್ವವನ್ನು ಚಾಚಿಕೊಂಡಿರುವ ಉದಯವಾಣಿ ನಡೆದು ಬಂದ ಹಾದಿಯನ್ನು ದಾಖಲಿಸುವುದು ಕನ್ನಡ ಪತ್ರಿಕೋದ್ಯಮ ಮತ್ತು ಪತ್ರಿಕಾ ಮುದ್ರಣಗಳು ಅರ್ಧ ಶತಮಾನದಷ್ಟು ದೀರ್ಘ‌ ಕಾಲದಲ್ಲಿ ಸಾಗಿಬಂದ ದಾರಿಯ ಸಿಂಹಾವಲೋಕನವೂ ಹೌದು. ಈ ಐವತ್ತು ವರ್ಷಗಳಲ್ಲಿ ತಂತ್ರಜ್ಞಾನದ ಪ್ರಗತಿ ಉದಯವಾಣಿಯ ಓದುಗರ ಜೀವನದಲ್ಲಿ ಉಂಟು ಮಾಡಿರುವ ಸಾಗರದಷ್ಟು ಪರಿವರ್ತನೆಯ ಪ್ರಭಾವ ಪತ್ರಿಕೆಯ ಮೇಲೂ ಉಂಟಾಗಿದೆ.
1970ರ ದಶಕ ಭಾಷಿಕ ಪತ್ರಿಕೋದ್ಯಮ ಬಾಲ್ಯಾವಸ್ಥೆಯಲ್ಲಿದ್ದ ಕಾಲ.

ಕನ್ನಡದಲ್ಲಿ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಮೊದಲಾದೆಡೆಯಿಂದ ಹೊರಬರುತ್ತಿದ್ದ ಕೆಲವೇ ಪತ್ರಿಕೆಗಳಿದ್ದ ವಷ್ಟೆ. ಮಂಗಳೂರಿನಿಂದ ನವಭಾರತ ಮುದ್ರಣವಾಗುತ್ತಿತ್ತು. ಇದಕ್ಕೆ ಬಹಳ ಹಿಂದೆಯೇ ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಿಕಾ ಪ್ರಕಟನೆಯ ಪ್ರಯೋಗಗಳಾಗಿದ್ದರೂ ಹೆಚ್ಚಿನವು ಸುದ್ದಿಯ ಪ್ರಸಾರದ ಉದ್ದೇಶದವಾಗಿರಲಿಲ್ಲ. ಮುದ್ರಣ ತಂತ್ರಜ್ಞಾನ, ಸುದ್ದಿ ಸಂಗ್ರಹ, ನಿರೂಪಣೆ ನಗರಗಳಿಗಷ್ಟೇ ಸೀಮಿತವಾಗಿದ್ದ ಕಾಲ ಅದು.
ಇಂತಹ ಕಾಲಘಟ್ಟದಲ್ಲಿ ಮಂಗಳೂರಿನಿಂದ ಸುಮಾರು 60-70 ಕಿ.ಮೀ. ದೂರದ ಬೋಳುಬೆಟ್ಟದ ಮೇಲಿನಿಂದ ದಿನಪತ್ರಿಕೆಯೊಂದನ್ನು ಆರಂಭಿಸುವ ಕನಸು ಕಂಡು ಸಾಕಾರಗೊಳಿಸಿದವರು ಮಣಿಪಾಲದ ಪೈ ಬಂಧುಗಳು. ಪ್ರಾಯಃ ಆಗ ಅವರ ಕನಸಿಗೆ ದೃಢ ತಳಪಾಯವಾಗಿದ್ದದ್ದು ಅದಾಗಲೇ ಸ್ಥಾಪನೆಯಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ಮಣಿಪಾಲ ಪ್ರಸ್‌. ಅದರಲ್ಲಿ ದೇಶಕ್ಕೇನೇ ಅತ್ಯಾಧುನಿಕವಾದ, ಮೊದಲನೆಯದು ಎಂಬಂತಹ ಮುದ್ರಣ ಯಂತ್ರಗಳಿದ್ದವು.

ದೀಪಾವಳಿ ವಿಶೇಷಾಂಕದ ವಿಶಿಷ್ಟ ಸ್ಥಾನಮಾನ
ಉದಯವಾಣಿ ಪ್ರಾರಂಭ ಕಾಲದಿಂದಲೇ ವಾರ್ಷಿಕ ವಿಶೇಷಾಂಕದ ಪ್ರಕಟನೆಯನ್ನು ಆರಂಭಿಸಿದ್ದು, ಕೆಲವು ವರ್ಷಗಳ ಬಳಿಕ ಅದನ್ನು ದೀಪಾವಳಿ ವಿಶೇಷಾಂಕವನ್ನಾಗಿಸಿತು. ಇದಕ್ಕೆ ಕನ್ನಡ ಪತ್ರಿಕಾಲೋಕದಲ್ಲಿ ವಿಶಿಷ್ಟ ಸ್ಥಾನಮಾನವಿದೆ. ಅಂದಿನಿಂದ ಇಂದಿನವರೆಗೂ ಪ್ರತೀ ವಿಶೇಷಾಂಕವೂ ಸಂಗ್ರಾಹ್ಯ ಸಂಚಿಕೆಯಾಗಿ ಮೂಡಿಬರುತ್ತಿದೆ. ಆಯಾ ಕಾಲದ ಪ್ರಮುಖ ಸಾಹಿತಿ ಗಳು, ಕತೆ- ಕಾದಂಬರಿಗಾರರು, ಕವಿಗಳ ಬರಹಗಳನ್ನು ಹೊಂದಿ ಸುಪುಷ್ಟವಾಗಿ ಈ ದೀಪಾವಳಿ ಸಂಚಿಕೆಗಳು ಹೊರಬರುತ್ತಿವೆ. ಪ್ರತೀ ಸಂಚಿಕೆಯ ಮುಖಪುಟವೂ ಮೈಸೂರು ಮತ್ತು ತಂಜಾವೂರು ಶೈಲಿಯ ಮೂಲ ಚಿತ್ರ ಕಲಾಕೃತಿಗಳ ಚಿತ್ರಗಳನ್ನು ಹೊಂದಿ ವಿಶಿಷ್ಟವೆನಿಸಿದೆ. ಎನ್‌. ಗುರುರಾಜ್‌ ಮತ್ತು ವಿಶೇಷಾಂಕದ ಸಂಪಾದನೆಗಾಗಿಯೇ ಬೆಂಗಳೂರಿನಿಂದ ಮಣಿಪಾಲಕ್ಕೆ ಬಂದಿರುತ್ತಿದ್ದ ಹೆಸರಾಂತ ಲೇಖಕಿ ಡಾ| ವಿಜಯಾ ಈ ವಿಶೇಷಾಂಕಗಳನ್ನು ರೂಪಿಸಿಕೊಟ್ಟಿದ್ದಾರೆ. ಈ ಸಂಚಿಕೆಗಳಲ್ಲಿ ಪ್ರಕಟವಾದ ಕತೆ, ಕವನಗಳಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ. 1995ರ ವಿಶೇಷಾಂಕದಲ್ಲಿ ಪ್ರಕಟವಾದ ಡಾ| ಅನಂತಮೂರ್ತಿ ಅವರ “ಅಕ್ಕಯ್ಯ’ ಕತೆ ಹೊಸದಿಲ್ಲಿಯ “ಕಥಾ’ ಪ್ರಶಸ್ತಿ ಯನ್ನು ಪಡೆದುದು ಉಲ್ಲೇಖಾರ್ಹ ಉದಾಹರಣೆ.

ಸ್ಥಳೀಯ ಪುರವಣಿಗಳ ಲೋಕಲ್‌ -ಹೈಪರ್‌ ಲೋಕಲ್‌ ಪತ್ರಿಕೋದ್ಯಮ
ಆರಂಭದಲ್ಲಿ ಮುಖ್ಯಪುಟಗಳು ಪ್ರತಿದಿನ 12 ಇದ್ದು, 1999ರಲ್ಲಿ ಎಡಿಶನ್‌ಗಳು ವಾರಕ್ಕೆ ಎರಡು ಬಾರಿ ಪ್ರಾರಂಭಗೊಂಡವು. ಒಂದು ವರ್ಷದ ಅನಂತರ ಪ್ರತಿದಿನ ಎಡಿಶನ್‌ಗಳು ಪ್ರಾರಂಭಗೊಂಡವು. 2000ನೇ ಇಸವಿಯ ಅನಂತರ ಒಂದೊಂದಾಗಿ ಕಾಸರಗೋಡು, ಮಂಗಳೂರು, ಕೊಡಗು ಹೀಗೆ ಎಡಿಶನ್‌ ಪುಟಗಳು ಆರಂಭಗೊಂಡವು. ಈ ಸ್ಥಳೀಯ ಆವೃತ್ತಿಗಳ ಮುಖ್ಯ ಉದ್ದೇಶ ಆಯಾ ಸ್ಥಳೀಯ ವ್ಯಾಪ್ತಿಯ ಹೆಚ್ಚುವರಿ ಸುದ್ದಿಗಳನ್ನು, 12ರಷ್ಟು ಪುಟಗಳನ್ನು ಹೊಂದಿರುವ ಮುಖ್ಯ ಆವೃತ್ತಿಯಲ್ಲಿ ಪ್ರಕಟಿಸಲಾಗದ, ಆದರೆ ಸ್ಥಳೀಯವಾಗಿ ಪ್ರಾಮುಖ್ಯ ಹೊಂದಿರುವ ಸುದ್ದಿಗಳನ್ನೂ ಓದುಗರಿಗೆ ತಲುಪಿಸುವುದು. ಸ್ಥಳೀಯ ಆವೃತ್ತಿಗಳ ಆರಂಭವು ಸುದ್ದಿ ಸಂಗ್ರಹಣೆಯಲ್ಲಿ ಆಗುವ ಹೆಚ್ಚಳದ ಸಂಕೇತವೂ ಹೌದು. ಇದು ಉದಯವಾಣಿಯ ಒಟ್ಟಾರೆ ಬೆಳವಣಿಗೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. 2010ನೇ ಇಸವಿಯ ಬಳಿಕ ಸ್ಥಳೀಯ ಆವೃತ್ತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಯಿತು, ಪುಟಗಳ ಸಂಖ್ಯೆಯೂ ಹೆಚ್ಚಿತು. ಆ ಬಳಿಕ ಸ್ಥಳೀಯ ಆವೃತ್ತಿಗಳ ಪರಿಕಲ್ಪನೆಯಲ್ಲಿಯೇ ಹೊಸದಾಗಿ “ಹೈಪರ್‌ ಲೋಕಲ್‌’ ಪತ್ರಿಕೋದ್ಯಮವನ್ನು ಪುತ್ತೂರು ಮತ್ತು ಮಂಗಳೂರು “ಸುದಿನ’ಗಳ ರೂಪದಲ್ಲಿ ಆರಂಭಿಸಿದ ಹೆಗ್ಗಳಿಕೆಯೂ ಉದಯವಾಣಿಗಿದೆ. ಇದಕ್ಕೆ ಸೇರ್ಪಡೆಯಾಗಿ ಐವತ್ತನೆಯ ವರ್ಷದ ಈ ಸಂಭ್ರಮದ ಹೊತ್ತಿನಲ್ಲಿ ಉಡುಪಿ, ಕುಂದಾಪುರ ಮತ್ತು ಕಾರ್ಕಳ ಭಾಗಕ್ಕೂ ಈಗ ಸುದಿನ ವಿಸ್ತರಣೆಗೊಳ್ಳುತ್ತಿದೆ.

Advertisement

ಪುರವಣಿಗಳು
ಓದುಗರಿಗಾಗಿ ಸಾಹಿತ್ಯ, ಸಂಸ್ಕೃತಿ ಉಣಬಡಿಸಲು ಪ್ರತಿ ರವಿವಾರ ಸಾಪ್ತಾಹಿಕ ಸಂಪದದ ಪ್ರಕಟನೆ ಪ್ರಾರಂಭಿಸಲಾಯಿತು. ಸ್ಥಳೀಯ ಸುದ್ದಿಗಳ ಹೆಚ್ಚಿನ ಪ್ರಸಾರಕ್ಕಾಗಿ ಮುಖ್ಯ ಸಂಚಿಕೆಯ ಜತೆಗೆ ಪುರವಣಿ ಪ್ರಕಟಿಸಲು ಪ್ರಾರಂಭಿಸಲಾಯಿತು.

ಇದರ ಮುಂದುವರಿದ ಭಾಗವಾಗಿ ತಾಲೂಕು ಮಟ್ಟದಲ್ಲಿ ಪುರವಣಿಗಳ ಪ್ರಕಟನೆಗಳು ಹೊರಬಂದು ಇಂದು ಉಡುಪಿ, ಕುಂದಾಪುರ, ಕಾರ್ಕಳ, ಮಂಗಳೂರು, ಬೆಳ್ತಂಗಡಿ-ಬಂಟ್ವಾಳ ಹಾಗೂ ಗಡಿನಾಡು ಕಾಸರಗೋಡುಗಳಿಗಾಗಿಯೇ ಪ್ರತ್ಯೇಕ ಪುರವಣಿಗಳು ಸುದಿನವಾಗಿ ಪ್ರಕಟಗೊಳ್ಳುತ್ತಿವೆ.

ಸಂಭ್ರಮದ ಮೈಲಿಗಲ್ಲುಗಳು
ಐವತ್ತು ವರ್ಷಗಳ ಹಿಂದೆ ಆರಂಭಗೊಂಡ ಉದಯ ವಾಣಿ ಹತ್ತು, ಇಪ್ಪತ್ತು, ಇಪ್ಪತ್ತೈದು ಹೀಗೆ ವಿವಿಧ ಮೈಲಿಗಲ್ಲು ಗಳನ್ನು ಸಂಭ್ರಮದಿಂದ ಆಚರಿಸಿದೆ. ಅವು ಸ್ಮರಣೀಯವೂ ಆಗುವಂತೆ ಮಾಡಿದೆ. 1980ರಲ್ಲಿ ದಶ ಸಂಭ್ರಮಕ್ಕೆ ಮಣಿಪಾಲದಲ್ಲಿ ವಸ್ತು ಪ್ರದರ್ಶನ, ರಂಗೋಲಿ ಸ್ಪರ್ಧೆ, ಮಂಗಳೂರು ಮತ್ತು ಉಡುಪಿಗಳಲ್ಲಿ ಸ್ಮತಿ ಸಪ್ತಾಹ ಸಿನೆಮಾ ಪ್ರದರ್ಶನ ನಡೆಸಿದೆ. “ಕುಗ್ರಾಮ ಗುರುತಿಸಿ’ ಅಭಿಯಾನವೂ ಇದೇ ಸಂದರ್ಭದಲ್ಲಿ ನಡೆದುದು.

ಇಪ್ಪತ್ತನೆಯ ವರ್ಷದಲ್ಲಿ ಡಾ| ಟಿಎಂಎ ಪೈ ಉದಯವಾಣಿ ವಿಂಶತಿ ಪ್ರಶಸ್ತಿಯನ್ನು ಸ್ಥಾಪಿಸಿ ಜಿಲ್ಲೆಯ 10 ಕಾಲೇಜುಗಳಿಗೆ 10 ಸಾವಿರ ರೂ.ಗಳ ದತ್ತಿನಿಧಿ ಯನ್ನು ನೀಡಲಾಯಿತು. ಆ ಮೊತ್ತದ ಬಡ್ಡಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿವರ್ಷ ಪುರಸ್ಕರಿಸಬೇಕು ಎಂಬುದು ಇದರ ಉದ್ದೇಶ. ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಪ್ರದರ್ಶನ ಆಯೋಜಿಸಲಾಗಿತ್ತು.

1995ರಲ್ಲಿ ಬೆಳ್ಳಿಹಬ್ಬ ಆಚರಣೆ ನಡೆಯಿತು. ಅದಾದ 2 ವರ್ಷಗಳಲ್ಲಿ ಉದಯವಾಣಿ ಮತ್ತು ಸಹೋದರ ಪ್ರಕಾಶನಗಳು ಒಂದೇ ಸೂರಿನಡಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡುದು ಮತ್ತು ಬೆಂಗಳೂರಿ ನಲ್ಲಿ ಉದಯವಾಣಿಯನ್ನು ಅಂತರ್ಜಾಲಕ್ಕೆ ಸಂಯೋಜನೆಗೊಳಿಸಿದ್ದರ ಸ್ಮರಣಾರ್ಥವಾಗಿ ರಜತೋತ್ಸವ ಸ್ಮತಿ ಸಂಚಯವನ್ನು ಪ್ರಕಟಿಸಿದೆ. 2010ರ 40ರ ಸದವಸರದಲ್ಲಿ “ಹೆಜ್ಜೆಗುರುತು’ ಸಂಚಿಕೆಯನ್ನು ಪ್ರಕಟಿಸಿದೆ.
ಇದಲ್ಲದೆ ಉಡುಪಿಯ ಸ್ವಾಮೀಜಿಗಳು ಪರ್ಯಾಯ ಪೀಠವೇರುವ ಸಂದರ್ಭವನ್ನು ಒಂದು ಸ್ಮರಣಾರ್ಹ ಉತ್ಸವವನ್ನಾಗಿಸಲು ಕೀರ್ತಿಶೇಷ ವಿಜಯನಾಥ ಶೆಣೈಯವರು ಮತ್ತು ಕೀರ್ತಿಶೇಷ ಕೆ.ಕೆ. ಪೈಗಳ ಒತ್ತಾಸೆಯಲ್ಲಿ ಆರಂಭಗೊಂಡ “ಪರ್ಯಾಯೋತ್ಸವ’ ಸಂದರ್ಭಗಳಲ್ಲಿ ಉದಯವಾಣಿ ಸಂಗ್ರಾಹ್ಯ ಸಂಚಿಕೆಗಳನ್ನು ರೂಪಿಸಿ ಓದುಗರ ಕೈಗೆ ನೀಡಿದೆ.

ಬೇರು ಮಣಿಪಾಲ; ಹಲವು ಆವೃತ್ತಿಗಳಲ್ಲಿ ಚಾಚಿಕೊಂಡ ವೃಕ್ಷ
ಇಂದಿನಂತೆ ಬೆರಳತುದಿಯಲ್ಲಿ ಮಾಹಿತಿ ಪಡೆಯುವ ಸೌಭಾಗ್ಯ ಕಳೆದ ಶತಮಾನದ ಪೂರ್ವಾರ್ಧದಲ್ಲಿ ಇರಲಿಲ್ಲ. ಇಂತಹುದೊಂದು ತಾಂತ್ರಿಕ ಬದಲಾವಣೆ ಜಗತ್ತಿನಲ್ಲಿ ಆಗಬಹುದೆಂಬ ಕಲ್ಪನೆಯೂ ಅಸಾಧ್ಯವಾಗಿತ್ತು. ಪತ್ರಿಕಾ ಮಾಧ್ಯಮದ ರೂಪದಲ್ಲಿ ಕರ್ನಾಟಕ (ಮೊದಲಿನ ಮೈಸೂರು ರಾಜ್ಯ)ದಲ್ಲಿ ದಿನಪತ್ರಿಕೆಗಳೂ ಬೆರಳೆಣಿಕೆಯಷ್ಟಿದ್ದವು. ಕರಾವಳಿ ಪ್ರದೇಶವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಗಳೂರಿನಿಂದ ಮುದ್ರಣಗೊಂಡು ಬರುತ್ತಿದ್ದ, ಬಂದರೂ ತಡವಾಗಿ ದೊರೆಯುತ್ತಿದ್ದ ಪತ್ರಿಕೆಗಳೇ ಓದುಗರಿಗೆ ಆಹಾರ. ಈ ಕೊರತೆಯನ್ನು ನೀಗಿಸಲೋಸುಗ ಮಣಿಪಾಲದ ಪೈಗಳು 1970ರಲ್ಲಿ ಓದುಗರ ಹಸಿವು ತಣಿಸಲು ಉದಯವಾಣಿಯ ಉದಯವಾಯಿತು.

ಕರಾವಳಿಗರ ಮನೆಮಾತಾಯಿತು. ಇಂದಿಗೂ ಕರಾವಳಿಯ ಓದುಗರ ಮನದಲ್ಲಿ ನೆಚ್ಚಿನ ಪತ್ರಿಕೆಯಾಗಿ ಉದಯವಾಣಿ ತನ್ನ ಛಾಪನ್ನೊತ್ತಿದೆ. ಓದುಗರ ಬೆಂಬಲ, ಪೋ›ತ್ಸಾಹದಿಂದ ಇಂದು ಉದಯವಾಣಿ ಅನೇಕ ಆವೃತ್ತಿಗಳನ್ನು ಹೊರತರುವ ಮೂಲಕ ಕರ್ನಾಟಕದ ಮೂಲೆಮೂಲೆಯನ್ನೂ ಆವರಿಸಿದೆ.

ಮೊದಲನೆಯದಾಗಿ ಬೆಂಗಳೂರು ಆವೃತ್ತಿ 1993ರಲ್ಲಿ ಅನಾವರಣಗೊಂಡಿತು. ತದನಂತರ 2000ನೇ ಇಸವಿಯಲ್ಲಿ ಮುಂಬಯಿ ಆವೃತ್ತಿ, 2011ರಲ್ಲಿ ಹುಬ್ಬಳ್ಳಿ ಆವೃತ್ತಿ, 2017ರಲ್ಲಿ ಕಲಬುರಗಿ ಹಾಗೂ ದಾವಣಗೆರೆ ಆವೃತ್ತಿಗಳನ್ನು ಹೊರತರುವ ಮೂಲಕ ರಾಜ್ಯದ ಓದುಗರನ್ನು ತಲುಪಿದೆ.

ವರ್ಣಮಯ ಮುದ್ರಣ
1995ರಲ್ಲಿ ನಾಲ್ಕು ವರ್ಣಗಳ ಫೋರ್‌ ಕಲರ್‌ ಸಪರೇಶನ್‌ ಪ್ರಾರಂಭವಾಯಿತು ಕಪ್ಪು ಬಿಳುಪು ಮುದ್ರಣವಾಗುತ್ತಿದ್ದ ಚಿತ್ರಗಳೆಲ್ಲ ಫೋರ್‌ ಕಲರ್‌ ಗಣಕಯಂತ್ರದಲ್ಲಿಯೇ ಸಪರೇಶನ್‌ ಆರಂಭವಾಯಿತು. ಕತ್ತಲೆಯ ಕೆಮರಾ ರೂಂನಲ್ಲಿ ಚಿತ್ರಗಳ ಸಪರೇಶನ್‌ ಮಾಡುತ್ತಿದ್ದ ಕಾಲ ಅಂತ್ಯಗೊಂಡಿತು.
1996ರ ವರೆಗೆ ಪುಟಗಳ ವಿನ್ಯಾಸ ಗಣಕಯಂತ್ರದಲ್ಲಿ ಅಕ್ಷರಗಳನ್ನು ಬೊÅಮೈಡ್‌ ಶೀಟ್‌ ಮತ್ತು ಟ್ರೇಸಿಂಗ್‌ ಪೇಪರ್‌ಗೆ ಪ್ರಿಂಟ್‌ ಕೊಟ್ಟು ಬಳಿಕ ಅದನ್ನು ಪೇಸ್ಟ್‌ ಅಪ್‌ ವಿಭಾಗದಲ್ಲಿ ಗಮ್‌ ಹಾಕಿ ಪೋಣಿಸಿ ಬೇರೆ ಬೇರೆ ಪುಟಗಳನ್ನು ವಿನ್ಯಾಸ ಮಾಡುತ್ತಿದ್ದರು. ಅನಂತರ 1996-97ರಲ್ಲಿ ಇದೂ ಅಂತ್ಯವಾಗಿ ಕಂಪ್ಯೂಟರ್‌ನಲ್ಲಿಯೇ ಪೂರ್ಣ ಪ್ರಮಾಣದ ಪುಟ ವಿನ್ಯಾಸ ಪ್ರಾರಂಭವಾಯಿತು. ಪುಟ ವಿನ್ಯಾಸಕ್ಕಾಗಿ ಅಳವಡಿಕೆಗೊಂಡದ್ದು ಅಡೋಬ್‌ ಕಂಪೆನಿಯ ಪೇಜ್‌ಮೇಕರ್‌ 6.0 ಸಾಫ್ಟ್ವೇರ್‌. ಅದರ ಸಹಾಯದಿಂದ ಪುಟಗಳ ವಿನ್ಯಾಸವನ್ನು ಗಣಕಯಂತ್ರದಲ್ಲಿಯೇ ಸುಂದರವಾಗಿ ನಿರ್ವಹಿಸುವುದು, ಪ್ರಿ ಪ್ರಸ್‌ಗೆ ಕಳುಹಿಸಿಕೊಡುವುದು ಸಾಧ್ಯವಾಯಿತು. 1997ರ ಬಳಿಕ ಪೂರ್ತಿಯಾಗಿ ಪೇಜ್‌ಮೇಕರ್‌ನಲ್ಲಿಯೇ ಎಲ್ಲ ಪುಟಗಳನ್ನು ನಿರ್ವಹಿಸಲಾರಂಭವಾಯಿತು. ಪೇಸ್ಟಿಂಗ್‌ ಕಾಲ ಅಂತ್ಯಗೊಂಡಿತು.

ಬೆಂಗಳೂರಿನಲ್ಲಿಯೂ 1997ರಲ್ಲಿ ಪೇಜ್‌ಮೇಕರ್‌ ಮೂಲಕ ಪುಟಗಳು ವಿನ್ಯಾಸಗೊಳ್ಳುತ್ತಿದ್ದುವು. ಮಣಿಪಾಲದಿಂದ ಪುಟಗಳನ್ನು ಪಿಡಿಎಫ್ ಮಾಡಿ ಬೆಂಗಳೂರಿಗೆ ಹಾಟ್‌ಲೆçನ್‌ನಲ್ಲಿ ಕಳುಹಿಸಿಕೊಡಲಾಗುತ್ತಿತ್ತು. ಅಲ್ಲಿಂದಲೂ ಮಣಿಪಾಲಕ್ಕೆ ಪಿಡಿಎಫ್ ರೂಪದಲ್ಲಿಯೇ ಪುಟಗಳು ಬರುತ್ತಿದ್ದವು.
ವರ್ಣಮಯ ಮುದ್ರಣ ಯುಗದ ಆರಂಭ ಕಾಲದಲ್ಲಿ ಉದಯವಾಣಿ ಮೊದಲೆರಡು ಮತ್ತು ಕೊನೆಯ ಎರಡು ಪುಟಗಳು, ಆ ಬಳಿಕ ಎಲ್ಲ ಪುಟಗಳನ್ನೂ ಬಣ್ಣಗಳಲ್ಲಿ ಸುಂದರ ಮುದ್ರಣ ಮಾಡುವ ಸಾಮರ್ಥ್ಯ ಹೊಂದಿತು.

ಪ್ರಸ್ತುತ ಪ್ರಿಪ್ರಸ್‌ನಿಂದಲೇ ಪುಟಗಳನ್ನು ನೇರವಾಗಿ ಮುದ್ರಣಕ್ಕೆ ಕಳುಹಿಸುವಂತಹ ಸಿಟಿಪಿಯಂತಹ ಅತ್ಯಾಧುನಿಕ ಮುದ್ರಣ ವ್ಯವಸ್ಥೆಗಳು ಉದಯವಾಣಿಯ ಬತ್ತಳಿಕೆಯಲ್ಲಿವೆ. ಆರಂಭ ಕಾಲದಲ್ಲಿ ಟ್ರಂಕ್‌ ಕಾಲ್‌ಗಾಗಿ ಕಾದು ಏಜೆಂಟ್‌ಗಳು, ಬೆಂಗಳೂರು, ಮಂಗಳೂರಿನಂತಹ ದೂರದ ಊರುಗಳಲ್ಲಿ ಇದ್ದ ಪ್ರತಿನಿಧಿಗಳು ಸುದ್ದಿ ಕೊಡುತ್ತಿದ್ದರಾದರೆ ಇಂದು ಸಣ್ಣ ಸಣ್ಣ ಊರುಗಳಲ್ಲಿಯೂ ಉದಯವಾಣಿಗೆ ಬಿಡಿ ಸುದ್ದಿ ಸಂಗ್ರಾಹಕರಿದ್ದಾರೆ. ಉಡುಪಿ, ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕುಂದಾಪುರಗಳಲ್ಲಿ ಪತ್ರಿಕೆಯ ಕಚೇರಿಗಳಿವೆ, ಪೂರ್ಣಕಾಲಿಕ ವರದಿಗಾರರಿದ್ದಾರೆ. ಸುದ್ದಿಗಳು ಮತ್ತು ಫೋಟೋಗಳು ಘಟನೆ, ಸಮಾರಂಭಗಳು ನಡೆದ ಕ್ಷಣಾರ್ಧದಲ್ಲಿ ಮಣಿಪಾಲದ ಕೇಂದ್ರ ಕಚೇರಿಗೆ ರವಾನೆಯಾಗುವಷ್ಟು ತಾಂತ್ರಿಕ ಮುನ್ನಡೆಯಾಗಿದೆ.

ನಿರೂಪಣೆ: ಚಾರು
ಮಾಹಿತಿ: ರವೀಂದ್ರ ನಾಡಿಗ್‌, ಗಿರೀಶ್‌ ಹಂದಾಡಿ, ಜಯಾನಂದ ಅಮೀನ್‌, ಭಾಸ್ಕರ ದೇವಾಡಿಗ

Advertisement

Udayavani is now on Telegram. Click here to join our channel and stay updated with the latest news.

Next