Advertisement

ಉದಯವಾಣಿ ಸಂದರ್ಶನ; ಭವ್ಯ ಮಂದಿರ ನಿರ್ಮಿಸುವುದೇ ಮುಖ್ಯ ಗುರಿ, ಉಳಿದೆಲ್ಲವೂ ಗೌಣ

10:19 AM Aug 05, 2020 | mahesh |

ಜೀವನದ ಕೊನೆಯವರೆಗೂ ಹಿಂದೂ ಸಂಘಟನೆಗಳಲ್ಲಿ ಮತ್ತು 1980ರ ದಶಕದ ಬಳಿಕ ಶ್ರೀರಾಮಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ ಸಕ್ರಿಯವಾಗಿದ್ದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈಗ ಬದುಕಿದ್ದರೆ ಕೇಂದ್ರ ಸರಕಾರ ರೂಪಿಸಿದ ಅಯೋಧ್ಯಾ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ಇರುತ್ತಿದ್ದರು. ಈಗ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಟ್ರಸ್ಟಿಯಾಗಿ ನಿಯುಕ್ತಿಗೊಂಡಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಮಹತ್ವದ ಜವಾಬ್ದಾರಿ ವಹಿಸಿರುವ ಶ್ರೀ ವಿಶ್ವಪ್ರಸನ್ನತೀರ್ಥರನ್ನು ರಾಮ ಮಂದಿರದ ಭೂಮಿಪೂಜೆಯ ಸಂದರ್ಭದಲ್ಲಿ “ಉದಯವಾಣಿ’ ಸಂದರ್ಶಿಸಿತು.

Advertisement

ದೇಶದ ಬಹುದೊಡ್ಡ ಧಾರ್ಮಿಕ ಕ್ಷೇತ್ರಕ್ಕೆ ತಾವು ಧರ್ಮದರ್ಶಿಗಳಾಗಿ ನಿಯುಕ್ತಿಗೊಂಡ ಬಗೆಗೆ ಏನು ಅನಿಸುತ್ತಿದೆ?
ನಮ್ಮ ಗುರುಗಳು ಪಟ್ಟ ಪರಿಶ್ರಮದ ಫ‌ಲವನ್ನು ನಾವು ಅನುಭವಿಸುತ್ತಿದ್ದೇವೆ. ನಮಗೆ ಬಂದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇವೆ. ಇದು ರಾಮ ದೇವರು ನಮಗೆ ಕೊಟ್ಟ ಅವಕಾಶ ಎಂದು ಭಾವಿಸುತ್ತೇವೆ.

ಪ್ರಧಾನಿಯವರು ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸುವಾಗಿನ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಾ?
ನಾವು ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವುದರಿಂದ ಪ್ರತ್ಯಕ್ಷವಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ. ಸಿಗ್ನಲ್‌ ಸಿಕ್ಕಿದರೆ ಅದನ್ನು ವೀಕ್ಷಿಸಬಹುದು. ಇದಕ್ಕಾಗಿಯೇ ನಾವು ಇರುವಲ್ಲಿ ಲಕ್ಷ ತುಳಸೀ ಅರ್ಚನೆ, ಭಜನೆ, ಪಾರಾಯಣಗಳನ್ನು ಆಯೋಜಿಸಿದ್ದೇವೆ.

ಮಂದಿರ ನಿರ್ಮಾಣದ ವೆಚ್ಚ, ಈಗಿರುವ ನಿಧಿ ಇತ್ಯಾದಿಗಳ ಕುರಿತು…
ರಾಮಮಂದಿರ ನಿರ್ಮಾಣಕ್ಕೆ ಸುಮಾರು 300 ಕೋ.ರೂ. ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಇಡೀ ಪ್ರದೇಶವನ್ನು 1,000 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಬೇಕೆಂಬ ಇರಾದೆ ಇದೆ. ಈಗ ಸುಮಾರು 4 ಕೋ.ರೂ. ಇದೆ.

ಇಷ್ಟೊಂದು ಮೊತ್ತ ಸಂಗ್ರಹವಾಗಬಹುದೆ?
ಮಂದಿರ ನಿರ್ಮಿಸಲು ಸಿರಿವಂತರು ದೊಡ್ಡ ಮೊತ್ತ ಕೊಡಬಹುದು, ಕಾರ್ಪೊರೇಟ್‌ ಸಿಎಸ್‌ಆರ್‌ ನಿಧಿಯಿಂದ ದೇಣಿಗೆ ಬರಬಹುದು. ಸಾಮಾನ್ಯ ಭಕ್ತರಿಂದಲೂ ದೇಣಿಗೆ ಸಂಗ್ರಹಿಸುವ ಮೂಲಕ ಎಲ್ಲರೂ ಈ ಮಹಾನ್‌ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂಬುದು ಟ್ರಸ್ಟ್‌ ಇರಾದೆ. ಇದಕ್ಕಾಗಿಯೇ ಒಬ್ಬರಿಂದ ತಲಾ 10 ರೂ., ಪ್ರತಿ ಮನೆಯಿಂದ 100 ರೂ. ಸಂಗ್ರಹಿಸುವ ಗುರಿ ಇದೆ.

Advertisement

 1980-90ರ ದಶಕದಲ್ಲಿ ಕರಾವಳಿ ಭಾಗ ಅಂತೆಯೇ ಕರ್ನಾಟಕದಿಂದ ರಾಮಶಿಲಾ ಪೂಜನ ನಡೆಸಿ ಇಟ್ಟಿಗೆಗಳನ್ನು ಕೊಂಡೊಯ್ಯಲಾಗಿತ್ತು. ಅವೆಲ್ಲವೂ ಈಗ ಶಿಥಿಲವಾಗಿರಬಹುದಲ್ಲವೇ?
ಅವೆಲ್ಲವನ್ನೂ ಶಿಸ್ತುಬದ್ಧವಾಗಿ ಇರಿಸಲಾಗಿದೆ. ಒಂದು ಬೃಹತ್‌ ಸಮುಚ್ಚಯ ನಿರ್ಮಾಣಗೊಳ್ಳುವಾಗ ಎಲ್ಲ ಸಾಮಗ್ರಿಗಳೂ ಅಗತ್ಯ ಬೀಳುತ್ತವೆ. ಅಂಥ ಸಾಮಗ್ರಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು.

ಮಂದಿರ ನಿರ್ಮಾಣ ಕಾರ್ಯದಲ್ಲಿ ನೀವು ಹೇಗೆ ತೊಡಗಿಸಿಕೊಳ್ಳಬೇಕೆಂದಿದ್ದೀರಿ?
ಪ್ರಬೋಧಿನಿ ಏಕಾದಶಿಯಿಂದ ಗೀತಾಜಯಂತಿ ಏಕಾದಶಿವರೆಗೆ (ನ. 15ರಿಂದ ಡಿ. 15) ಧನ ಸಂಗ್ರಹ ಆಂದೋಲನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಆ ಸಂದರ್ಭದಲ್ಲಿ ವಿವಿಧೆಡೆ ಸಂಚಾರ ನಡೆಸಿ ರಾಷ್ಟ್ರಮಂದಿರವಾಗಲಿರುವ ರಾಮಮಂದಿರ ನಿರ್ಮಾಣದ ಮಹತ್ವವನ್ನು ತಿಳಿಸುತ್ತೇವೆ.

ಭೂಮಿಪೂಜೆ ದಿನ, ಮುಹೂರ್ತ ವಿಷಯದ ಚರ್ಚೆ ಬಗ್ಗೆ ಏನು ಹೇಳುತ್ತೀರಿ?
ಆ. 5ರಂದು ಭೂಮಿಪೂಜೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇನ್ನು ಇದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಇಡೀ ರಾಷ್ಟ್ರದ ಗುರಿ ರಾಮಮಂದಿರ ನಿರ್ಮಾಣವಾಗಬೇಕೆನ್ನುವುದು. ಬಾಕಿ ವಿಷಯಗಳೆಲ್ಲವೂ ಗೌಣ.

ಅಯೋಧ್ಯೆಯಲ್ಲಿರುವ ಪೇಜಾವರ ಮಠದ ಶಾಖಾ ಮಠವನ್ನು ಅಭಿವೃದ್ಧಿಪಡಿಸುವ ಇರಾದೆ ಇದೆಯೆ?
ಸದ್ಯ ಇಲ್ಲ. ಮಂದಿರ ನಿರ್ಮಾಣವಾಗುವುದೇ ನಮ್ಮ ಮುಂದಿರುವ ಮುಖ್ಯ ವಿಷಯ. ಸದ್ಯ ಅಲ್ಲಿ ಛತ್ರವೊಂದು ಇದೆ. ಕಾಲಕ್ರಮೇಣ ಅಗತ್ಯಕ್ಕೆ ತಕ್ಕಂತೆ ನಿರ್ಮಿಸಲೂಬಹುದು.

 1992ರ ಡಿ. 7ರ ಮುಂಜಾನೆ ರಾಮಲಲ್ಲಾನ ಮೂರ್ತಿಯನ್ನು ಆಗಿನ ಆಕಸ್ಮಿಕ ಘಟನೆಯಿಂದಾಗಿ ಪ್ರತಿಷ್ಠಾಪನೆ ಮಾಡಿದವರು ನಿಮ್ಮ ಗುರುಗಳು. ಮುಂದೆ ನಿಮಗೆ ಪ್ರತಿಷ್ಠಾಪನೆ ಮಾಡುವ ಅವಕಾಶ ಸಿಗಲಿದೆಯೆ?
ನಾವು ಈ ಸಂಬಂಧ ಹಕ್ಕು ಮಂಡಿಸುವುದಿಲ್ಲ. ಅವಕಾಶ ಸಿಕ್ಕಿದರೆ ದೇವರ ಸೇವೆ ಎಂದು ಪರಿಗಣಿಸುತ್ತೇವೆಯಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next