ನವದೆಹಲಿ: ರಾಜಸ್ಥಾನದ ಉದಯ್ ಪುರದಲ್ಲಿ ಟೈಲರ್ ಕನ್ನಯ್ಯಲಾಲ್ ನನ್ನು ಪೈಶಾಚಿಕ ರೀತಿಯಲ್ಲಿ ಹತ್ಯೆಗೈದಿದ್ದ ಇಬ್ಬರು ಹಂತಕರನ್ನು ಪೊಲೀಸರು ಪತ್ತೆ ಹಚ್ಚಿ ಸೆರೆ ಹಿಡಿಯುವ ಮುನ್ನ ನಗರದಿಂದ ಪರಾರಿಯಾಗಲು ಯತ್ನಿಸಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ
“ಹೆಲ್ಮೆಟ್ ಧರಿಸಿದ್ದ ಇಬ್ಬರು ಆರೋಪಿಗಳು ಬೈಕ್ ನಲ್ಲಿ ಉದಯಪುರದ ಹೊರವಲಯದಲ್ಲಿನ ಹೆದ್ದಾರಿ ಮೂಲಕ ಪರಾರಿಯಾಗಲು ಯತ್ನಿಸಿದ್ದರು” ಎಂದು ರಾಜಸಮಂಡ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಬ್ಯಾರಿಕೇಡ್ ನಲ್ಲಿ ಕಾವಲು ಕಾಯುತ್ತಿದ್ದ ಪೊಲೀಸರು ಬೈಕ್ ನಿಲ್ಲಿಸಲು ಸೂಚನೆ ನೀಡಿದ್ದರು. ಆದರೆ ಇಬ್ಬರು ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಅಡ್ಡಗಟ್ಟಿ ಬಂಧಿಸಿದ್ದರು. ಈ ಎಲ್ಲಾ ದೃಶ್ಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಕೋ ಆರ್ಡಿನೇಟರ್ ನಿತಿನ್ ಅಗರ್ವಾಲ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ದಾಖಲಾಗಿದೆ.
ಕನ್ನಯ್ಯ ಲಾಲ್ ನ ಶಿರಚ್ಛೇದ ಮಾಡಿದ್ದ ಆರೋಪಿಗಳು ನಂತರ ಸೆಲ್ಫಿ ವಿಡಿಯೋ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕೊಲ್ಲುವುದಾಗಿ ಮಚ್ಚು ತೋರಿಸಿ ಎಚ್ಚರಿಕೆ ನೀಡಿದ್ದರು. ಟೈಲರ್ ಕನ್ನಯ್ಯ ಲಾಲ್ ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸಂತ್ರಸ್ತ ಕನ್ನಯ್ಯ ಕುಟುಂಬಕ್ಕೆ ರಾಜಸ್ಥಾನ ಸಿಎಂ 31 ಲಕ್ಷ ರೂಪಾಯಿ ಪರಿಹಾರ ಘೋಷಿಸಿ, ಇಬ್ಬರು ಮಕ್ಕಳಿಗೆ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ.