ರಾಜಸ್ಥಾನ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯಲಾಲ್ ಶಿರಚ್ಛೇದನ ಘಟನೆ ವಿರೋಧಿಸಿ ತೀವ್ರ ಆಕ್ರೋಶ ಮುಂದುವರಿದಿರುವ ನಡುವೆಯೇ, ಕನ್ನಯ್ಯ ಹಂತಕರು ನಗರದಲ್ಲಿನ ಮತ್ತೊಬ್ಬ ಉದ್ಯಮಿಯನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು ಎಂದು ಐಎಎನ್ ಎಸ್ ವರದಿ ಮಾಡಿದೆ.
ಇದನ್ನೂ ಓದಿ:ಬೆಟ್ಟಂಪಾಡಿ ; ಭಾರಿ ಮಳೆಗೆ ನಿಡ್ಪಳ್ಳಿ- ರೆಂಜ ಸಂಪರ್ಕ ಕಡಿತ, ತ್ರಿಶಂಕು ಸ್ಥಿತಿಯಲ್ಲಿ ಜನತೆ
ಐಎಎನ್ ಎಸ್ ವರದಿ ಪ್ರಕಾರ, ಕನ್ನಯ್ಯ ಲಾಲ್ ಶಿರಚ್ಛೇದ ಮಾಡಿದ ಇಬ್ಬರು ಹಂತಕರಿಗೆ ಪಾಕಿಸ್ತಾನದ ದಾವತ್ ಎ ಇಸ್ಲಾಮಿ ಎಂಬ ಸಂಘಟನೆ ಜತೆ ಸಂಪರ್ಕ ಇದ್ದು, ಇವರು ಐಸಿಸ್ ಸಂಘಟನೆಯಿಂದ ಪ್ರಭಾವಿತರಾಗಿದ್ದರು ಎಂದು ತಿಳಿಸಿದೆ.
ಉದ್ಯಮಿ ತಂದೆ ನೀಡಿರುವ ಮಾಹಿತಿಯಂತೆ, ಜೂನ್ 7ರಂದು ತನ್ನ ಪುತ್ರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದ್ದರು. ಜೂನ್ 9ರಿಂದ ಈತನ ಕಚೇರಿಗೆ ಹಲವಾರು ಮಂದಿ ಭೇಟಿ ನೀಡಿ ಹೋಗಿದ್ದರು. ಇದರಿಂದ ಅಪಾಯದ ವಾಸನೆ ತಿಳಿದ ಮಗ ನಗರ ಬಿಟ್ಟು ಹೊರಹೋಗಿದ್ದು, ಇದರಿಂದಾಗಿ ಮಗನ (ಉದ್ಯಮಿ) ಜೀವ ಉಳಿಯಿತು ಎಂದು ತಿಳಿಸಿದ್ದಾರೆ.
ಜೈಪುರದಲ್ಲಿ ಮಾರ್ಚ್ 30ರಂದು ಸರಣಿ ಸ್ಫೋಟ ನಡೆಸಲು ಉದ್ದೇಶಿಸಿದ್ದ ಸಂಚಿನಲ್ಲಿ ಬಂಧಿತ ಆರೋಪಿಗಳಿಬ್ಬರು ಶಾಮೀಲಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದು, ಅಂದು ಸುಮಾರು 12 ಕೆಜಿಯಷ್ಟು ಆರ್ ಡಿಎಕ್ಸ್ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸುವ ಮೂಲಕ ಸರಣಿ ಸ್ಫೋಟದ ಸಂಚನ್ನು ವಿಫಲಗೊಳಿಸಲಾಗಿತ್ತು.
ಆರೋಪಿ ಗೌಸ್ ಮಹಮ್ಮದ್ ಮತ್ತು ರಿಯಾಜ್ ನನ್ನು ಹೆಚ್ಚಿನ ತನಿಖೆಗಾಗಿ ದೆಹಲಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಅಲ್ಲದೇ ಹಂತಕರಿಬ್ಬರ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.