Advertisement

ಉಚ್ಚಿಲ ಅಪಘಾತ: ಗಾಯಾಳು ಬಾಲಕ ಸಾವು; ಲಾರಿ ಚಲಾಯಿಸುತ್ತಿದ್ದದ್ದು 16ರ ಬಾಲಕ!

07:44 PM Sep 15, 2022 | Team Udayavani |

ಪಡುಬಿದ್ರಿ: ಗೂಡ್ಸ್‌ ಲಾರಿಯೊಂದು ಢಿಕ್ಕಿಯಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ನಡೆದಿದ್ದ ಅಪಘಾತದಲ್ಲಿ ತೀವ್ರತರ ಗಾಯಗಳೊಂದಿಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ಬಾಲಕ ಸಮರ್ಥ್ ಪೋದ್ದಾರ್‌ (13) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Advertisement

ಇದೇ ಘಟನೆಯಲ್ಲಿ ಲಾರಿಯ ಚಕ್ರ ಮೈಮೇಲೆ ಹರಿದು ಹೋಗಿದ್ದರಿಂದ ಸ್ಥಳದಲ್ಲೇ ಸಮರ್ಥ್ ತಂದೆ ಪ್ರಭಾಕರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಕುತ್ಯಾರು ಗ್ರಾಮದಲ್ಲಿನ ಆನೆಗುಂದಿ ಸಂಸ್ಥಾನಕ್ಕೆ ಸೇರಿರುವ ಸೂರ್ಯ ಚೈತನ್ಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಸಮರ್ಥ, ರಜೆಯಲ್ಲಿ ಗಣೇಶ ಚೌತಿ ಹಬ್ಬಕ್ಕೆ ಊರಿಗೆ ತೆರಳಿದ್ದ. ತಂದೆಯೊಂದಿಗೆ ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು ಉಚ್ಚಿಲದಲ್ಲಿ ಇಳಿದಿದ್ದ ವೇಳೆ ಅಪರಿಚಿತ ವಾಹನ ಢಿಕ್ಕಿಯಾಗಿ ಪರಾರಿಯಾಗಿತ್ತು. ವಿದ್ಯಾರ್ಥಿ ಸಮರ್ಥ್ ಮೃತಪಟ್ಟ ಪ್ರಯುಕ್ತ ಶಾಲೆಗೆ ಗುರುವಾರ ರಜೆ ಘೋಷಿಸಲಾಗಿತ್ತು.

14 ಚಕ್ರದ ಲಾರಿ ಚಲಾಯಿಸುತ್ತಿದ್ದ ಬಾಲಕ:

ಈ ಘಟನೆಯಲ್ಲಿ ಪರಾರಿಯಾಗಿದ್ದ ಗೂಡ್ಸ್‌ 14 ಚಕ್ರದ ಲಾರಿಯನ್ನು ಪೊಲೀಸರು ಸಿಸಿ ಟಿವಿ ಫೂಟೇಜ್‌ಗಳನ್ನು ಆಧರಿಸಿ ಬೆಂಬತ್ತಿ ಹೋಗಿ ಲಾರಿಯ ಚಾಲಕ, ಆರೋಪಿ ಶೇಖರ್‌ನನ್ನು ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಲಾರಿಯನ್ನು 16 ವರ್ಷದ ಬಾಲಕ ರಾತ್ರಿಯಿಡೀ ಚಲಾಯಿಸಿಕೊಂಡು ಬಂದಿದ್ದ ಅಘಾತಕಾರಿ ಮಾಹಿತಿ ಹೊರಬಿದ್ದಿತ್ತು. ಆತ ಲಾರಿಯ ಕ್ಲೀನರ್‌ ಬಾಯ್‌ ಆಗಿದ್ದ. ಈ ಬಾಲಕನು ಲಾರಿಯನ್ನು ಚಲಾಯಿಸುವ ಗೀಳನ್ನು ಹೊಂದಿದ್ದು, ಯಾವುದೇ ಲಾರಿಯಾದರೂ ರಾತ್ರಿ ವೇಳೆ “ಮುಂಬಯಿ ಎಕ್ಸ್‌ಪ್ರಸ್‌ ವೇ’ನಂತಹ ಹೆದ್ದಾರಿಯಲ್ಲೂ ಸಹಿತ ಚಲಾಯಿಸಿಕೊಂಡು ಬರುತ್ತಿದ್ದ.

Advertisement

ನಿದ್ದೆ ಬರುವುದಾಗಿ ಹೇಳಿದ್ದ ಬಾಲಕ :

ಉಚ್ಚಿಲದಲ್ಲಿ ಘಟನೆ ನಡೆದಿದ್ದ 20 ನಿಮಿಷದ ಮೊದಲು ಬಾಲಕ ತನಗೆ ನಿದ್ದೆ ಬರುತ್ತಿರುವುದಾಗಿ ಚಾಲಕ ಶೇಖರ್‌ನಿಗೆ ತಿಳಿಸಿದ್ದ. ಆದರೆ ಮುಂದೆ ಚಹಾದಂಗಡಿ ಇದೆ. ಅಲ್ಲಿ ತಾನು ಲಾರಿ ಚಲಾಯಿಸುವುದಾಗಿ ಶೇಖರ್‌ ಹೇಳಿದ್ದರಿಂದ ಬಾಲಕನೇ ಲಾರಿಯನ್ನು ಉಚ್ಚಿಲದಿಂದ ಮುಂದಕ್ಕೂ ಚಲಾಯಿಸಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಿದ್ದೆ ಮಂಪರಿನಲ್ಲಿದ್ದ ಬಾಲಕ:

ಉಚ್ಚಿಲದಲ್ಲಿ ಅಪಘಾತವಾದ ಬಳಿಕ ಬಾಲಕನು ಡಿವೈಡರ್‌ ಮೇಲೆ ಲಾರಿಯನ್ನು ಹತ್ತಿಸಿ ಕಂಬಕ್ಕೆ ಢಿಕ್ಕಿ ಹೊಡೆದು ಸುಮಾರು ಒಂದೂವರೆ ಕಿ.ಮೀ. ಕ್ರಮಿಸಿದ ಬಳಿಕ ನಿಲ್ಲಿಸಿ ಚಾಲಕ ಶೇಖರ್‌ಗೆ ವಿಷಯವನ್ನು ತಿಳಿಸಿದ್ದ. ನಿದ್ದೆಯ ಮಂಪರಿನಲ್ಲಿದ್ದ ಬಾಲಕನಿಗೆ ತಾನು ರಸ್ತೆ ಬದಿಯಲ್ಲಿನ ಮಣ್ಣು ರಸ್ತೆಯಲ್ಲಿ ನಿಂತಿದ್ದ ತಂದೆ-ಮಗನಿಗೆ ಢಿಕ್ಕಿಯಾದ ಬಗ್ಗೆ ಅರಿವಿಗೇ ಬಂದಿರಲಿಲ್ಲ.

ಗಂಜಿಮಠದಿಂದ ಲಾರಿ ವಶಕ್ಕೆ:

ಪ್ಲಾಸ್ಟಿಕ್‌ ಉತ್ಪಾದನೆಯ ಕಚ್ಚಾ ವಸ್ತುವನ್ನು ಗುಜರಾತ್‌ನಿಂದ ಹೊತ್ತು ಬರುತ್ತಿದ್ದ ಈ ಲಾರಿಯನ್ನು ಪೊಲೀಸರು ಗಂಜಿಮಠ ಪರಿಸರದಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಶೇಖರ್‌ನನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕನನ್ನು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಲಾಗಿದ್ದು, ಆತನ ತಂದೆಯ ಆಗಮನದ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಚಾಲಕ ಶೇಖರ್‌ನ ಚಾಲನ ಪರವಾನಿಗೆಯನ್ನು ಹಾಗೂ ಗೂಡ್ಸ್‌ ಸಾಗಾಟದ ಏಜೆನ್ಸಿಯನ್ನೂ ರದ್ದುಗೊಳಿಸಲು ಪೊಲೀಸರು ಕ್ರಮ ಕೈಗೊಂಡಿರುವುದಾಗಿ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕಾಪು ಸಿಪಿಐ ಪೂವಯ್ಯ ತಿಳಿಸಿದ್ದಾರೆ.

ಹೆದ್ದಾರಿ ಪ್ರಾಧಿಕಾರ, ಕಂಪೆನಿಯನ್ನೇ ಹೊಣೆಯಾಗಿಸಿ :

ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ ಭಾಗ ಮತ್ತು ಪಡುಬಿದ್ರಿ ಕಾರ್ಕಳ ಜಂಕ್ಷನ್‌ ಪ್ರದೇಶವು ಹೆದ್ದಾರಿ ಅಪಘಾತಗಳಿಗೆ ಬಾಯ್ದೆರೆಕೊಂಡಿರುವ ಮೃತ್ಯುಕೂಪಗಳಾಗಿವೆ. ಇಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯ ಕೆಲಸಕಾರ್ಯಗಳೂ ಪೂರ್ತಿಯಾಗದೆ ಉಳಿದಿವೆ. ಇಲ್ಲಿ ಸಂಭವಿಸುವ ಯಾವುದೇ ಹೆದ್ದಾರಿ ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ನವಯುಗ ನಿರ್ಮಾಣ ಕಂಪೆನಿಯನ್ನೂ ಹೊಣೆಗಾರರನ್ನಾಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next