ಹೊಸದಿಲ್ಲಿ: ದೇಶದಲ್ಲಿ ಚರ್ಚೆಗೆ ಕಾರಣವಾಗಿರುವ ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ಜಾರಿಗೆ ತರಲು ಉತ್ತರಾಖಂಡ ರಾಜ್ಯವು ಮುಂದಾಗಿದೆ. ಈ ಮೂಲಕ ಈ ಸಂಹಿತೆ ಜಾರಿಗೆ ತರುವ ಮೊದಲ ರಾಜ್ಯ ಇದಾಗಲಿದೆ.
ನಿವೃತ್ತ ನ್ಯಾ.ರಂಜನಾ ದೇಸಾಯಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವರದಿ ಸಲ್ಲಿಸಲಿದೆ.
ದೀಪಾವಳಿಯ ಬಳಿಕ ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದ್ದು, ಅಲ್ಲಿ ಏಕರೂಪ ನಾಗರಿಕೆ ಸಂಹಿತೆ ಮಂಡಿಸಲಾಗುತ್ತದೆ ಮತ್ತು ಕಾನೂನು ರೂಪ ನೀಡಲಾಗುತ್ತದೆ ಎಂದು ವರದಿ ಹೇಳಿದೆ.
ಈ ವರ್ಷದ ಜೂನ್‌ನಲ್ಲಿ, ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡು ಸಮಿತಿಯ ಸದಸ್ಯರಾದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಉತ್ತರಾಖಂಡಕ್ಕೆ ಏಕರೂಪ ನಾಗರಿಕ ಸಂಹಿತೆಯ ಕರಡು ರಚನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ:Telugu Actor: ಟಾಲಿವುಡ್ ಸಿನಿರಂಗದ ಹಿರಿಯ ನಟ ಚಂದ್ರ ಮೋಹನ್ ನಿಧನ
ಉತ್ತರಾಖಂಡದ ಬಳಿಕ ಗುಜರಾತ್ ಕೂಡಾ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ. 2024ರ ಲೋಕಸಭಾ ಚುನಾವಣೆಯ ಮೊದಲು ಇದನ್ನು ಜಾರಿಗೆ ತರಲಿದೆ ಎನ್ನಲಾಗಿದೆ.