ಬೆಂಗಳೂರು: ಕಾರು ಕಳವು ಮಾಡಿ ಊರೂರು ಸುತ್ತಾಡಿದರು. ಪೊಲೀಸರು ಎದುರಾದಾಗ ಅದೃಷ್ಟದ ಜತೆಗೆ ಕಾರೂ ಕೈಕೊಟ್ಟಿತು. ಹೀಗಾಗಿ ಆರೋಪಿಗಳು ಪೊಲೀಸರ ಅತಿಥಿಗಳಾದರು…! ಇಂತಹದ್ದೊಂದು ಸಿನಿಮೀಯ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.
ದೇವರ ಜೀವನಹಳ್ಳಿ ಸಮೀಪದ ದುಬೈ ಲೇಔಟ್ ನಿವಾಸಿಗಳಾದ ಶಹನವಾಜ್ ಹಾಗೂ ಗೋವಿಂದಪುರದ ಅಬ್ಟಾಸ್ ಅಲಿ ಬಂಧಿತರು. ಆರೋಪಿಗಳಿಂದ ಉಬರ್ ಕ್ಯಾಬ್ ವಶಪಡಿಸಿಕೊಳ್ಳಲಾಗಿದೆ. ಮೂರು ದಿನಗಳ ಹಿಂದೆ ಉಬರ್ ಕ್ಯಾಬ್ ಕಳವು ಮಾಡಿದ ಆರೋಪಿಗಳು ಊರೂರು ಸುತ್ತಾಡಿ ಬಳಿಕ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ.
ಏನಿದು ಘಟನೆ?: ಜನವರಿ 6ರಂದು ರಾತ್ರಿ ಉಬರ್‌ಕಾರು ಚಾಲಕ ಶಿವಣ್ಣ ಎಂಬುವರು ಮಾನ್ಯತಾ ಟೆಕ್ ಪಾರ್ಕ್ ಬಳಿ ತಮ್ಮ ಕಾರು ನಿಲ್ಲಿಸಿ ರಸ್ತೆ ಬದಿ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿದ್ದರು. ಅದೇ ವೇಳೆ ಶಹನವಾಜ್ ಹಾಗೂ ಅಬ್ಟಾಸ್ ಅಲಿ ಅಲ್ಲಿಗೆ ಬಂದಿದ್ದು, ನಿಂತಿದ್ದ ಕಾರು ಗಮನಿಸಿದ್ದಾರೆ. ಚಾಲಕ ಕಾರಿನಲ್ಲೇ ಕೀ ಬಿಟ್ಟಿದ್ದನ್ನು ಗಮನಿಸಿದ ಅವರು ತಕ್ಷಣ ಕಾರು ಹತ್ತಿ ಅದನ್ನು ಚಲಾಯಿಸಿಕೊಂಡು ಹೊರಟಿದ್ದಾರೆ.
ಇದನ್ನು ಗಮನಿಸಿದ ಚಾಲಕ ಶಿವಣ್ಣ ಕಾರು ನಿಲ್ಲಿಸುವಂತೆ ಓಡಿ ಬಂದನಾದರೂ ಅಷ್ಟರಲ್ಲಿ ಅವರು ಅಲ್ಲಿಂದ ಪರಾರಿಯಾದರು. ಇದಾದ ಬಳಿಕ ಶಿವಣ್ಣ ಅವರು ತಮ್ಮ ಕಾರನ್ನು ಅಪರಿಚಿತರು ಕೊಂಡೊಯ್ದ ಬಗ್ಗೆ ಕೆ.ಜಿ.ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕಾರಿನಲ್ಲಿದ್ದ ಜಿಪಿಎಸ್ ವ್ಯವಸ್ಥೆ ಮೂಲಕ ಅದರ ಸಂಚಾರ ಮಾರ್ಗ ಪರಿಶೀಲಿಸುತ್ತಿದ್ದರು.
ಕಾರು ಕೋಲಾರ, ಮುಳಬಾಗಿಲು ಸುತ್ತಾಡಿಕೊಂಡು ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತಿರುವುದು ಜಿಪಿಎಸ್ ವ್ಯವಸ್ಥೆಯಿಂದ ಗೊತ್ತಾಯಿತು. ಅದರಂತೆ ಸಬ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ನೇತೃತ್ವದ ಆರು ಮಂದಿ ಪೊಲೀಸರ ತಂಡ, ನಾಗವಾರ ವರ್ತುಲ ರಸ್ತೆಗೆ ತೆರಳಿ ಕಾರಿಗಾಗಿ ಕಾಯುತ್ತಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಕಾರು ಪೊಲೀಸರು ನಿಂತಿದ್ದ ಪ್ರದೇಶಕ್ಕೆ ಆಗಮಿಸಿತು.
ಅದನ್ನು ಅಡ್ಡಹಾಕಲು ಪೊಲೀಸರು ಮುಂದಾದಾಗ ಸ್ವಲ್ಪ ದೂರದಲ್ಲೇ ವಾಹನ ನಿಲ್ಲಿಸಿದ ಆರೋಪಿಗಳು, ಪೊಲೀಸರು ಸಮೀಪಿಸುತ್ತಿದ್ದಂತೆ ಏಕಾಏಕಿ ಬಲಕ್ಕೆ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಕಾರು ಅಡ್ಡಗಟ್ಟಲು ಮುಂದಾದ ಕಾನ್‌ಸ್ಟೆàಬಲ್‌ಗಳಾದ ಸನಾವುಲ್ಲಾ, ಕರಿಯಪ್ಪ ಹಾಗೂ ಚಾಂದ್ ಪಾಷಾ ಅವರಿಗೆ ಗಾಯವಾಯಿತು.
ಕಾರನ್ನು ಆರೋಪಿಗಳು ಮತ್ತೆ ಮುಂದಕ್ಕೆ ಕೊಂಡೊಯ್ಯಲು ಯತ್ನಿಸಿದಾಗ ಅದು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ನಿಂತಿತು. ಆದರೂ ಪಟ್ಟು ಬಿಡದ ಆರೋಪಿಗಳು ಕಾರನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಕೊಂಡೊಯ್ಯಲು ಯತ್ನಿಸಿದರಾದರೂ ಕೆಟ್ಟಿದ್ದ ಕಾರು ಒಂದಿಂಚೂ ಅಲಗಾಡಲಿಲ್ಲ. ಅತ್ತ ಪೊಲೀಸರು ಸುತ್ತುವರಿದಿದ್ದರಿಂದ ಆರೋಪಿ ಗಳಿಗೆ ಓಡಿಹೋಗಲೂ ಸಾಧ್ಯವಾಗದೆ ಸಿಕ್ಕಿಬೀಳಬೇಕಾ ಯಿತು. ಇದೀಗ ಮಾಡಿದ ತಪ್ಪಿಗಾಗಿ ಆರೋಪಿ ಗಳಿಬ್ಬರು ಜೈಲುಕಂಬಿ ಎಣಿಸುವಂತಾಗಿದೆ.