ನವದೆಹಲಿ: ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸಿ ಕಾರಿನೊಳಗೆ ಕೂರಲು ಬಲವಂತಪಡಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕ್ಯಾಬ್ ಅನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ಘಟನೆ ಶನಿವಾರ ರಾತ್ರಿ 9.45 ರ ಸುಮಾರಿಗೆ ದೆಹಲಿಯ ಮಂಗೋಲ್ಪುರಿ ಮೇಲ್ಸೇತುವೆ ಬಳಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸಿ ಕಾರಿನೊಳಗೆ ಬರುವಂತೆ ಬಲವಂತ ಮಾಡಿರುವುದು ಕಂಡುಬಂದಿದೆ.
ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರು ಗುರ್ಗಾಂವ್‌ನ ರತನ್ ವಿಹಾರ್ ಪ್ರದೇಶದಿಂದ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಸಿಬಂದಿಯ ತಂಡವನ್ನು ಸಹ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಹೊರ) ಹರೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ. ಇಬ್ಬರು ಪುರುಷರು ಮತ್ತು ಮಹಿಳೆಯೊಬ್ಬರು ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಮೂಲಕ ಕಾರನ್ನು ಬುಕ್ ಮಾಡಿದ್ದರು. ಮಾರ್ಗಮಧ್ಯೆ ಮೂವರಲ್ಲಿ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
” ಜಗಳದ ನಂತರ ಮಹಿಳೆ ಹೊರಗೆ ಹೋಗಲು ಬಯಸಿದ ನಂತರ ವ್ಯಕ್ತಿ ಆಕೆಯನ್ನು ಬಲವಂತವಾಗಿ ಕಾರಿನೊಳಗೆ ತಳ್ಳುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ’ ಎಂದು ಅಧಿಕಾರಿ ತಿಳಿಸಿದರು.
ಏತನ್ಮಧ್ಯೆ, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮಕ್ಕೆ ಒತ್ತಾಯಿಸಿ “ನಾನು ದೆಹಲಿ ಪೊಲೀಸರಿಗೆ ನೋಟಿಸ್ ನೀಡುತ್ತಿದ್ದೇನೆ. ಆಯೋಗವು ಈ ಜನರ ವಿರುದ್ಧ ಕಠಿಣ ಕ್ರಮವನ್ನು ಖಚಿತಪಡಿಸುತ್ತದೆ ಎಂದು ಮಲಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.