ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಅದರ ಅಂಗ ಸಂಸ್ಥೆಗಳ ನಿಷೇಧ ಬೆನ್ನಲ್ಲೇ ನಿಷೇಧಿತ ಸಂಘಟನೆಗಳ ಪರ ಮತ್ತು ವಿರೋಧ ಅಹವಾಲುಗಳನ್ನು ಅಲಿಸಲು “ಕಾನೂನು ಬಾಹಿರ ಚಟುವಟಿಕೆಗಳ ತಡೆ ನಿಯಂತ್ರಣ ಕಾಯ್ದೆ (ಯುಎಪಿಎ) ನ್ಯಾಯಾಧಿಕರಣ’ ರಾಜ್ಯಕ್ಕೆ ಆಗಮಿಸಲಿದೆ.
ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್‌ನ ಮು| ನ್ಯಾ| ಗಳಾದ ದಿನೇಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ರಚಿಸಿರುವ ನ್ಯಾಯಾಧಿಕರಣ ಜ.28, 29 ಮತ್ತು 30ರಂದು ಬೆಂಗಳೂರಿನ ಬಾಲೂಬ್ರೂಹಿ ಅತಿಥಿ ಗೃಹದಲ್ಲಿ ಪಿಎಫ್ಐ ಸಂಘಟನೆಯ ಪರ ಮತ್ತು ವಿರೋಧದ ವಾದಗಳನ್ನು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದೆ. ಈ ವೇಳೆ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್, ಎನ್‌ಐಎ ಹಿರಿಯ ಅಧಿಕಾರಿಗಳು, ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಕೋರ್ಟ್ ಸಿಬಂದಿ ಸೇರಿ 20ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2022ರ ಸೆ.28ರಂದು ಪಿಎಫ್ಐ ಹಾಗೂ ಅದರ ಕೆಲ ಅಂಗ ಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧಿಸಿತ್ತು. ಅದನ್ನು ಪ್ರಶ್ನಿಸಿ ಕೆಲ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದಿಲ್ಲಿ ಕೋರ್ಟಿನ ಮುಖ್ಯನ್ಯಾಯ ಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಧೀಕರಣ ತೆರೆದು, ಸಂಘಟನೆ ನಿಷೇಧ ಕುರಿತ ಸಾಧಕ-ಬಾಧಕಗಳ ಮಾಹಿತಿ ಸಂಗ್ರಹ ಹಾಗೂ ವಿಚಾರಣೆ ನಡೆಸಲು ಸೂಚಿಸಿತ್ತು.
ಏನೆಲ್ಲ ವಿಚಾರಣೆ?: ಪಿಎಫ್ಐ ಕಾರ್ಯಕರ್ತರು 2016ರಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್, ಪ್ರವೀಣ್ ಪೂಜಾರಿ, 2017ರಲ್ಲಿ ಶರತ್, 2022ರಲ್ಲಿ ಪ್ರವೀಣ್ ನೆಟ್ಟಾರು ಸೇರಿ ಹಲವು ಹಿಂದೂ ಮುಖಂಡರನ್ನು ಹತ್ಯೆಗೈದಿದ್ದಾರೆ. ಜತೆಗೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಬಂಧನಕ್ಕೊಳ ಗಾಗಿದ್ದಾರೆ. ಹತ್ಯೆ ಪ್ರಕರಣಗಳ ತನಿಖೆ ನಡೆಸಿದ ಪೊಲೀಸ್ ಇನ್‌ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿಗಳಿಗೂ ನೋಟಿಸ್ ಕೊಟ್ಟು ನ್ಯಾಯಮೂರ್ತಿಗಳ ಎದುರು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಈ ಪ್ರಕರ ಣದ ಹೆಚ್ಚುವರಿ ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಕೂಡ ನ್ಯಾಯಾಧಿಕರಣದ ಎದುರು ಹಾಜರಾಗಲಿದ್ದಾರೆ.