ಸಾಗರ: ಭಾರತವು ಹವಾಮಾನ ವಿವಿಧ ರೀತಿಯ ಸೂಕ್ಷ್ಮ ಮತ್ತು ಕೋಮಲ ಹೂವುಗಳ ಕೃಷಿಗೆ ಸೂಕ್ತವಾಗಿದೆ. ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಹೂವಿನ ಕೃಷಿಯನ್ನು ವಾಣಿಜ್ಯಿಕವಾಗಿ ಮಾಡಲಾಗುತ್ತಿರುವುದರಿಂದ ಭಾರತವು ಹೂವುಗಳ ದೊಡ್ಡ ರಫ್ತುದಾರ ದೇಶವಾಗಿದೆ. ಈ ಹಂತದಲ್ಲಿ ಕೃಷಿ ಪದವಿ ಪಡೆದವರು ಕೃಷಿಯನ್ನು ಉದ್ಯಮವಾಗಿಸಿ ನೌಕರಿಯನ್ನು ನೀಡುವಂತವರಾಗಬೇಕು ಎಂದು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 8ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಚ್‌ಎಚ್‌ಡಿ ಪದವಿ ಪ್ರಧಾನ ಮಾಡಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಪುಷ್ಪ ಕೃಷಿಯನ್ನು ಪಾಲಿಹೌಸ್ ತಂತ್ರಜ್ಞಾನದಲ್ಲಿ ಆಧುನಿಕವಾಗಿ ಮಾಡುವ ಅವಕಾಶ ಕೃಷಿ ಪದವೀಧರರಿಗಿದ್ದು, ಇದನ್ನು ಬೃಹತ್ ಉದ್ಯಮವಾಗಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಗಳು ಪ್ರಾಯೋಗಿಕ ಕೃಷಿ ಶಿಕ್ಷಣಕ್ಕೆ ನಿರಂತರವಾಗಿ ಒತ್ತು ನೀಡುತ್ತಿವೆ. ಇದರ ಜೊತೆಗೆ ಕೃಷಿ ಅಭಿವೃದ್ಧಿಯಲ್ಲಿ ರೈತರ ಸಾಂಪ್ರದಾಯಿಕ ಮತ್ತು ಅನುಭವ ಆಧಾರಿತ ಜ್ಞಾನವನ್ನು ಯೋಜಿತ ರೀತಿಯಲ್ಲಿ ಬಳಸಿದರೆ, ಕೃಷಿ ಕ್ಷೇತ್ರವು ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕೃಷಿಯಿಂದ ದೊಡ್ಡ ಪ್ರಮಾಣದಲ್ಲಿ ಜಿಡಿಪಿಗೆ ಸಹಕಾರ ಸಿಕ್ಕುತ್ತಿದೆ. ನಮ್ಮ ಕನಸಾದ ಆತ್ಮನಿರ್ಭರ ಭಾರತ್ ನನಸಾಗಲು ಯುವಕರು ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಪ್ರತಿಪಾದಿಸಿದರು.
ಭಾರತವು ತೋಟಗಾರಿಕೆ ಬೆಳೆಗಳ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. ದೇಶದ ಹಲವು ರಾಜ್ಯಗಳ ಆರ್ಥಿಕ ಅಭಿವೃದ್ಧಿ ಮತ್ತು ಕೃಷಿ ಜಿಡಿಪಿಯಲ್ಲಿ ತೋಟಗಾರಿಕೆ ಮಹತ್ವದ ಕೊಡುಗೆಯನ್ನು ಹೊಂದಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಇತ್ತೀಚಿನ ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಬಳಸುವುದು ಸಹ ಅಗತ್ಯವಾಗಿದೆ. ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಯ ದೃಷ್ಟಿಯಿಂದ ಪ್ರಪಂಚದಾದ್ಯಂತ ನಡೆಯುತ್ತಿರುವ ಕೃಷಿ ಪ್ರಯೋಗಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೃಷಿ ಸಚಿವ, ವಿವಿ ಸಹಕುಲಾಧಿಪತಿ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಶೇ. 70ರಷ್ಟು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಭಾರತದಲ್ಲಿ ಕೃಷಿಯನ್ನು ವಾಣಿಜ್ಯಿಕ ನೆಲೆಯಲ್ಲಿ ಪರಿವರ್ತಿಸಿಕೊಳ್ಳಬೇಕಾದ ಕಾಲದ ಬಂದಿದೆ. ಕೃಷಿ ಕಾಲೇಜಿನ ಸ್ಥಾಪನೆ ಎಸ್.ಬಂಗಾರಪ್ಪ ಕಾಲದಲ್ಲಾಗಿದ್ದರೆ ಕೃಷಿ ವಿವಿಯ ಘೋಷಣೆ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಾಯಿತು. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದ ಕಾಲದಲ್ಲಿ ಸಿದ್ದರಾಮಯ್ಯ ವಿವಿಗೆ ಬೇಕಾದ 250 ಕೋಟಿ ರೂ. ಒದಗಿಸಿದರು ಎಂದು ಸ್ಮರಿಸಿಕೊಂಡು, ವಿವಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ದೇಶದ ಆತ್ಮ ಗ್ರಾಮಗಳಲ್ಲಿದೆ ಎಂದು ಮಹಾತ್ಮಾಗಾಂಧಿ ಅವರ ಮಾತಿನ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಕೃಷಿಕರ ಒಳಿತನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಆದಾಯದ ಕೊರತೆಯ ಸವಾಲನ್ನು ಎದುರಿಸಲು ಸಿದ್ಧವಾಗಿ ಮದ್ಯ ನಿಷೇಧದ ನಿರ್ಧಾರ ಮಾಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆನಪಿಸಿಕೊಂಡರು.
ಘಟಿಕೋತ್ಸವ ಭಾಷಣ ಮಾಡಬೇಕಿದ್ದ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರು ಗೈರುಹಾಜರಾಗಿದ್ದರಿಂದ ಅವರ ಭಾಷಣದ ವಿಡಿಯೋವನ್ನು ಪ್ರದರ್ಶಿಸಾಲಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕುಲಪತಿ ಆರ್.ಸಿ. ಜಗದೀಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ವತಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.