ದುಬೈ : ಯಎಇ ಜತೆಗಿನ ಭಾರತದ ನಿರ್ಣಾಯಕ ಫುಟ್ಬಾಲ್ ಪಂದ್ಯಕ್ಕೆ ಮೊದಲು ಯುಎಇ ವ್ಯಕ್ತಿಯೋರ್ವ ಭಾರತೀಯ ಬೆಂಬಲಿಗರನ್ನು ಪಂಜರವೊಂದರಲ್ಲಿ ಕೂಡಿ ಹಾಕಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಯುಎಇ ಅಧಿಕಾರಿಗಳು ಅನೇಕ ವ್ಯಕ್ತಿಗಳನ್ನು ಬಂಧಿಸಿರುವುದಾಗಿ ವರದಿಗಳು ತಿಳಿಸಿವೆ.
ಅಬುಧಾಬಿಯಲ್ಲಿ ನಡೆದಿರುವ ಎಎಫ್ಸಿ ಏಶ್ಯನ್ ಕಪ್ ನ ನಿರ್ಣಾಯಕ ಪಂದ್ಯದಲ್ಲಿ ಯುಎಇ ತಂಡ ಭಾರತ ತಂಡವನ್ನು 2-0 ಅಂತರದಲ್ಲಿ ಸೋಲಿಸಿದೆ.
ವಿಡಿಯೋದಲ್ಲಿ ಕಂಡು ಬರುವಂತೆ ಕೈಯಲ್ಲಿ ಕೋಲು ಹಿಡಿದು ಝಳಪಿಸುತ್ತಿದ್ದ ಯುಎಇ ವ್ಯಕ್ತಿಯು ಪಕ್ಷಿ-ಪಂಜರದಲ್ಲಿ ಕೂಡಿ ಹಾಕಲ್ಪಟ್ಟ ಅನೇಕ ಏಶ್ಯನ್ ಮೂಲದ ಕಾರ್ಮಿಕರನ್ನು “ನೀವೇಕೆ ಯುಎಇ ಮತ್ತು ಭಾರತ ತಂಡವನ್ನು ತಾರತಮ್ಯದಿಂದ ಬೆಂಬಲಿಸುತ್ತಿದ್ದೀರಿ’ ಎಂದು ಗದರಿಸುತ್ತಿರುವುದು ಕೇಳಿ ಬರುತ್ತದೆ. ಖಲೀಜ್ ಟೈಮ್ಸ್ ಈ ವಿಷಯವನ್ನು ವರದಿ ಮಾಡಿದೆ.
ಪಂಜರದಲ್ಲಿ ಕೂಡಿ ಹಾಕಲ್ಪಟ್ಟವರು ಭಾರತ ತಂಡವನ್ನು ಬೆಂಬಲಿಸುವವರೆಂದು ಗೊತ್ತಾದಾಗ ಆ ಯುಎಇ ವ್ಯಕ್ತಿಯು “ನೀವು ಯುಎಇಯಲ್ಲಿದ್ದುಕೊಂಡು ಬೇರೆ ತಂಡವನ್ನು ಬೆಂಬಲಿಸುವುದು ಸರಿಯಲ್ಲ; ನೀವು ಯುಎಇ ಯಲ್ಲಿರುವಾಗ ಯುಎಇ ತಂಡವನ್ನೇ ಬೆಂಬಲಿಸಬೇಕು’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಯುಎಇಯಲ್ಲಿ ವಿವಿಧ ಬಗೆಯ ಕಾನೂನುಗಳ ಉಲ್ಲಂಘನೆ ಮಾಡುವವರಿಗೆ ಕನಿಷ್ಠ ಆರು ತಿಂಗಳಿಂದ ಗರಿಷ್ಠ 10 ವರ್ಷಗಳ ಜೈಲು ಮತ್ತು 50,000 ದಿಂದ 20 ಲಕ್ಷ ಧಿರಮ್ ವರೆಗಿನ ದಂಡ (ಅಮೆರಿಕನ್ ಡಾಲರ್ 13,611 ರಿಂದ 5.44 ಲಕ್ಷ ವರೆಗೆ) ದಂಡ ವಿಧಿಸಲ್ಪಡುತ್ತದೆ.
ಹಾಗಿದ್ದರೂ ಈ ವಿಡಿಯೋ ಮಾಡಿದ ಮತ್ತು ಅದನ್ನು ಸಾಮಾಜಿಕ ಮಾಧ್ಯಮಕ್ಕೆ ಹಾಕಿ ವೈರಲ್ ಆಗುವಂತೆ ಮಾಡಿದ ವ್ಯಕ್ತಿಯು ಯೂಟ್ಯೂಬ್ ನಲ್ಲಿ ಇನ್ನೊಂದು ವಿಡಿಯೋ ಹಾಕಿ “ನಾನು ಕೇವಲ ಜೋಕ್ ರೂಪದ ಒಂದು ಸ್ಕಿಟ್ ಮಾಡಿದ್ದೆ. ವಿಡಿಯೋದಲ್ಲಿ ಕಂಡುಬಂದಿರುವ ಜನರೆಲ್ಲ ನನ್ನ ಕಾರ್ಮಿಕರು, ನಾನು ಅವರನ್ನು 22 ವರ್ಷಗಳಿಂದ ಬಲ್ಲೆ; ನಾನು ಅವರನ್ನು ಹೊಡೆದದ್ದೂ ಇಲ್ಲ ಬಡಿದದ್ದೂ ಇಲ್ಲ. ಕೇವಲ ತಮಾಷೆಗಾಗಿ ಮತ್ತು ಇದು ಸಹಿಷ್ಣುತೆಯ ವರ್ಷವಾಗಿರುವ ಕಾರಣಕ್ಕೆ ಆ ವಿಡಿಯೋ ಮಾಡಿದ್ದೆ’ ಎಂದು ಹೇಳಿದ್ದಾರೆ. ಹಾಗಿದ್ದರೂ ಆತನನ್ನು ಮತ್ತು ಇತರ ಕೆಲವರನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.