ಬೆನೋನಿ: ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್ ಮತ್ತು ನಾಯಕಿ ಶಫಾಲಿ ವರ್ಮ ಅವರ ಭರ್ಜರಿ ಆಟದಿಂದಾಗಿ ಭಾರತ ತಂಡವು ಅಂಡರ್ -19 ಟಿ20 ವನಿತಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.
ಸೆಹ್ರಾವತ್ ಅವರ ಅಜೇಯ 92 ರನ್ ಮತ್ತು ಶಫಾಲಿ ಅವರ ಸ್ಫೋಟಕ ಆಟದಿಂದಾಗಿ ಭಾರತ ತಂಡವು 16.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 170 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ದಕ್ಷಿಣ ಆಫ್ರಿಕಾ ತಂಡವು 5 ವಿಕೆಟಿಗೆ 166 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಸೀನಿಯರ್ ತಂಡದ ಪರ ಈಗಾಗಲೇ 51 ಟಿ20 ಮತ್ತು 21 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿರುವ ಶಫಾಲಿ ವರ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೇವಲ 16 ಎಸೆತಗಳಿಂದ 45 ರನ್ ಸಿಡಿಸಿದ ಅವರು ಮೊದಲ ವಿಕೆಟಿಗೆ ಶ್ವೇತಾ ಅವರೊಂದಿಗೆ 77 ರನ್ ಪೇರಿಸಿದರು. 9 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದ ಅವರು ಬೌಲಿಂಗ್‌ನಲ್ಲಿಯೂ ಎರಡು ವಿಕೆಟ್ ಹಾರಿಸಿದ್ದರು.
ಉಪನಾಯಕಿ ಶ್ವೇತಾ ಸೆಹ್ರಾವತ್ ಆಬಳಿಕ ಇತರ ಆಟಗಾರ್ತಿಯರ ನೆರವು ಪಡೆದು ತಂಡಕ್ಕೆ ಜಯ ತಂದುಕೊಟ್ಟರು. 57 ಎಸೆತ ಎದುರಿಸಿದ ಅವರು 20 ಬೌಂಡರಿ ಬಾರಿಸಿ ರಂಜಿಸಿದರು.
Related Articles
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ವನಿತೆಯರು 5 ವಿಕೆಟಿಗೆ 166 (ಸಿಮೋನ್ ಲಾರೆನ್ಸ್ 61, ಮ್ಯಾಡಿಸನ್ ಲ್ಯಾಂಡ್ಸ್‌ಮನ್ 32, ಶಫಾಲಿ ವರ್ಮ 31ಕ್ಕೆ 2); ಭಾರತ ವನಿತೆಯರು 16.3 ಓವರ್‌ಗಳಲ್ಲಿ 3 ವಿಕೆಟಿಗೆ 170 (ಶ್ವೇತಾ ಸೆಹ್ರಾವತ್ 92 ಔಟಾಗದೆ, ಶಫಾಲಿ ವರ್ಮ 45).
ಬಾಂಗ್ಲಾ ಕೈಯಲ್ಲಿ ಆಸ್ಟ್ರೇಲಿಯಕ್ಕೆ ಆಘಾತ
ಈ ಮೊದಲು ನಡೆದ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯ ತಂಡವು “ಎ’ ವಿಭಾಗದಲ್ಲಿ ಬಾಂಗ್ಲಾದೇಶ ತಂಡದೆದುರು 7 ವಿಕೆಟ್‌ಗಳಿಂದ ಸೋಲನ್ನು ಕಂಡು ಆಘಾತಕ್ಕೆ ಒಳಗಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ತಂಡವು ಬಾಂಗ್ಲಾದ ಬಿಗು ಬೌಲಿಂಗ್ ದಾಳಿಯೆದುರು ರನ್ ಪೇರಿಸಲು ಒದ್ದಾಡಿ 5 ವಿಕೆಟಿಗೆ 130 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕುತ್ತರವಾಗಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಂಗ್ಲಾ ವನಿತೆಯರು ಕೇವಲ 3 ವಿಕೆಟ್ ಕಳೆದುಕೊಂಡು 18 ಓವರ್‌ಗಳಲ್ಲಿ 132 ರನ್ ಪೇರಿಸಿ ಜಯಭೇರಿ ಬಾರಿಸಿತು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 5 ವಿಕೆಟಿಗೆ 130 (ಕ್ಲೇರ್ ಮೂರೆ 52, ಎಲ್ಲಾ ಹೇವಾರ್ಡ್ 32, ಮರುಫಾ ಅಕ್ತೆರ್ 29ಕ್ಕೆ 2, ದಿಶಾ ಬಿಸ್ವಾಸ್ 25ಕ್ಕೆ 2); ಬಾಂಗ್ಲಾದೇಶ 18 ಓವರ್‌ಗಳಲ್ಲಿ 3 ವಿಕೆಟಿಗೆ 132 (ಅಫಿಯಾ ಪ್ರೊಟಾಶಾ 24, ದಿಲಾರಾ ಅಕ್ತೆರ್ 40, ಶೋರ್ನಾ ಅಕ್ತೆರ್ 23 ಔಟಾಗದೆ, ಐನ್ಸ್‌ವರ್ತ್ 9ಕ್ಕೆ 2).