Advertisement

U19 Asia Cup: 13 ವರ್ಷದ ವೈಭವ್‌ ಸ್ಫೋಟಕ ಬ್ಯಾಟಿಂಗ್‌; ಫೈನಲ್‌ ಪ್ರವೇಶಿಸಿದ ಭಾರತ

07:35 PM Dec 06, 2024 | Team Udayavani |

ಶಾರ್ಜಾ:  19 ವರ್ಷದೊಳಗಿನ ಏಷ್ಯಾಕಪ್  (U-19 Asia Cup) ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ 13 ವರ್ಷದ ವೈಭವ್‌ ಸೂರ್ಯವಂಶಿ ಅಮೋಘ ಬ್ಯಾಟಿಂಗ್‌ ನೆರವಿನಿಂದ ಶ್ರೀಲಂಕಾ ತಂಡವನ್ನು ಮಣಿಸಿ ಭಾರತ ಫೈನಲ್ ಪ್ರವೇಶಿಸಿದೆ.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವನ್ನು ಭಾರತೀಯ ಬೌಲರ್​​ಗಳು ಸಂಘಟಿತ ದಾಳಿ ನಡೆಸಿ 46.2 ಓವರ್‌ ನಲ್ಲಿ 173 ರನ್​ಗಳಿಗೆ ನಿಯಂತ್ರಿಸಿ ಭಾರತ ತಂಡವು 174 ರನ್​ಗಳ ಗುರಿ ಪಡೆಯಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು ಕೇವಲ 21.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪುವುದರೊಂದಿಗೆ ಭಾರತ ತಂಡವು ಏಷ್ಯಾ ಕಪ್‌ನಲ್ಲಿ 8ನೇ ಬಾರಿ ಫೈನಲ್ ಪ್ರವೇಶಿಸಿದೆ.

ಭಾರತದ ದಾಳಿಗೆ ತತ್ತರಿಸಿದ ಲಂಕಾ ಪಡೆ
ಸೆಮಿಫೈನಲ್​ನಲ್ಲಿ ಭಾರತ ತಂಡದ ಬೌಲಿಂಗ್ ದಾಳಿಯನ್ನ ಎದುರಿಸಲು ಶ್ರೀಲಂಕಾ ಬೌಲರ್​ಗಳು ಪರದಾಡಿದರು. ಕೇವಲ 8 ರನ್​ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ನೂರು ರನ್​ಗಳ ಗಡಿ ದಾಟುವುದು ಅನುಮಾನ ಎನ್ನುವ ಸ್ಥಿತಿಯಲ್ಲಿದ್ದ ಲಂಕಾ ತಂಡಕ್ಕೆ ವಿಕೆಟ್ ಕೀಪರ್ ಶಾರುಜನ್ ಷಣ್ಮುಗನಾಥನ್ ಹಾಗೂ ಲಕ್ಷಿನ್ ಅಭಯ್​ ಸಿಂಘೆ 93 ರನ್​ಗಳ ಜೊತೆಯಾಟ ನಡೆಸಿ ತಂಡದ ಮೊತ್ತ  100ರ ಗಡಿ ದಾಟಿಸಿದರು.

ಅಭಯ್ 110 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ಗಳ ಸಹಿತ 69 ರನ್​ಗಳಿಸಿದರೆ, ಶಾರುಜನ್ 78 ಎಸೆತಗಳಲ್ಲಿ 42 ರನ್​ಗಳಿಸಿದರು. ಭಾರತದ ಚೇತನ್ ಶರ್ಮಾ 34ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಕಿರಣ್​ ಚೋರಮಾಲೆ 32ಕ್ಕೆ 2, ಆಯುಷ್ ಮಹಾತ್ರೆ 37ಕ್ಕೆ 2, ಕನ್ನಡಿಗ ಹಾರ್ದಿಕ್ ರಾಜ್ 1 ವಿಕೆಟ್ ಪಡೆದು ಲಂಕಾ ತಂಡವನ್ನ 46.2 ಓವರ್​ಗಳಲ್ಲಿ ಆಲೌಟ್ ಮಾಡಲು ನೆರವಾದರು.

Advertisement

ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿ ಮತ್ತೆ ಮಿಂಚಿದ ವೈಭವ್‌ ಸೂರ್ಯವಂಶಿ:
174 ರನ್‌ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಕಳೆದ ಪಂದ್ಯದಂತೆ ಅಬ್ಬರದ ಆರಂಭ ಪಡೆಯಿತು. ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಮೊದಲ ವಿಕೆಟ್​ಗೆ 91 ರನ್​ಗಳ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಕೇವಲ 24 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಒಟ್ಟಾರೆ 36 ಎಸೆತಗಳಲ್ಲಿ 6 ಬೌಂಡರಿ, 5 ಭರ್ಜರಿ ಸಿಕ್ಸರ್​ಗಳ ಸಹಿತ 67 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಆಯುಷ್ 28 ಎಸೆತಗಳಲ್ಲಿ 7 ಬೌಂಡರಿ ಸಹಿತ 34ರನ್​ಗಳಿಸಿ ಔಟಾದರೆ, ಆ್ಯಂಡ್ರ್ಯೂ ಸಿದ್ಧಾರ್ಥ್ 22 ರನ್​ಗಳಿಸಿದರು. ನಾಯಕ ಮೊಹಮ್ಮದ್ ಅಮಾನ್ ಅಜೇಯ 25, ಕನ್ನಡಿಗ ಕಾರ್ತಿಕೇಯ ಅಜೇಯ 11 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌:
ಶ್ರೀಲಂಕಾ- 173 ಆಲೌಟ್‌ (46.2 ಓವರ್‌)
ಭಾರತ- 175-3 (21.4 ಓವರ್‌)
ಪಂದ್ಯಶ್ರೇಷ್ಠ: ವೈಭವ್‌ ಸೂರ್ಯವಂಶಿ

ಪಾಕಿಸ್ತಾನ ಬಗ್ಗು ಬಡಿದ ಬಾಂಗ್ಲಾದೇಶ
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು  7 ವಿಕೆಟ್​ಗಳಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 37 ಓವರ್​ಗಳಲ್ಲಿ ಕೇವಲ 116 ರನ್​ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ರಿಯಾಜುಲ್ಲಾ 28, ಫರ್ಹಾನ್ ಯೂಸುಫ್ 32 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ಭಾರತ -ಬಾಂಗ್ಲಾದೇಶ  ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಸೆಣಸಾಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next