Advertisement

ಸರಕಾರದಿಂದ ಗೂಂಡಾಗಿರಿಗೆ ಉತ್ತೇಜನ: ಖಾದರ್‌ ಆರೋಪ

12:33 AM May 18, 2022 | Team Udayavani |

ಮಂಗಳೂರು: ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಟ್ಟು ಸತ್ಪ್ರಜೆಗಳಾಗಿ ರೂಪಿಸಬೇಕಾಗಿರುವ ಶಾಲೆಗಳಲ್ಲಿ, ಶಾಸಕರ ಸಮ್ಮುಖದಲ್ಲೇ ರೈಫ‌ಲ್‌ ಟ್ರೈನಿಂಗ್‌, ಆಯುಧ ನೀಡಿರುವುದು ಸರಕಾರದ ತಾಲಿಬಾನ್‌ ಸಂಸ್ಕೃತಿಯನ್ನು ತೋರಿಸು
ತ್ತದೆ. ರಾಜ್ಯ ಸರಕಾರ ವಿವಿಧ ಸಂಘ ಸಂಸ್ಥೆಗಳಿಗೆ ಗೂಂಡಾಗಿರಿಯನ್ನು ಹೊರಗುತ್ತಿಗೆ ನೀಡಿರುವಂತೆ ತೋರುತ್ತದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು. ಟಿ. ಖಾದರ್‌ ಆರೋಪಿಸಿದ್ದಾರೆ.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಘಟನೆಯ ಕುರಿತಂತೆ ಗೃಹಸಚಿವರು ಮತ್ತು ಶಿಕ್ಷಣ ಸಚಿವರು ಜನರಿಗೆ ಉತ್ತರ ನೀಡಬೇಕು. ಈ ಶಸ್ತ್ರಾಸ್ತ್ರ ತರಬೇತಿಯನ್ನು ಆಯೋಜಿಸಿದ್ದು ಯಾರು, ಇದರ ಉದ್ದೇಶ ಏನು, ಅನುಮತಿ ಕೊಟ್ಟವರು ಯಾರು ಎನ್ನುವುದನ್ನು ಬಹಿರಂಗಪಡಿಸಬೇಕು. ಸರಕಾರ ಈ ಬಗ್ಗೆ ತನಿಖೆಗೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. ಶಾಸಕ ಹರೀಶ್‌ ಪೂಂಜಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್‌, ಬೆಳ್ತಂಗಡಿಯ ಜನರೇ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಮಳಲಿಯ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ದಾಖಲೆ ನೋಡಿ ನ್ಯಾಯ ಒದಗಿಸಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈಗಾಗಲೇ ಅವರಿಗೆ ಸಲ್ಲಿಸಲಾಗಿದೆ. ಹಳೇ ಮಸೀದಿ ಆಗಿರುವುದರಿಂದ ಅದರ ರಚನೆ ಅಂದಿನ ಕಾಲಕ್ಕೆ ತಕ್ಕಂತೆ ಇತ್ತು. ಇದು ಸ್ಥಳೀಯರಿಗೂ ಗೊತ್ತು. ಹೊರಗಿನಿಂದ ಬಂದವರು ಅದರ ಕುರಿತು ಸಂದೇಹ ವ್ಯಕ್ತಪಡಿಸುವುದು ಸರಿಯಲ್ಲ. ಆದ್ದರಿಂದ ಜಿಲ್ಲಾ ಧಿಕಾರಿ ಶೀಘ್ರ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಖಾದರ್‌ ಹೇಳಿದರು.

ಮುಖಂಡರಾದ ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ್‌, ಶಾಹುಲ್‌ ಹಮೀದ್‌ ಉಪಸ್ಥಿತರಿದ್ದರು.

ಖಾದರ್‌ ಹೇಳಿಕೆಗೆ ಸುನಿಲ್‌ ತಿರುಗೇಟು
ಪುತ್ತೂರು: ರಾಜ್ಯದಲ್ಲಿ ತಾಲಿಬಾನ್‌ ಸಂಸ್ಕೃತಿಯ ಸರಕಾರ ಇದೆ ಎಂಬ ವಿಪಕ್ಷ ಉಪನಾಯಕ ಯು. ಟಿ. ಖಾದರ್‌ ಹೇಳಿಕೆಗೆ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ತಿರುಗೇಟು ನೀಡಿದ್ದಾರೆ. ಪತ್ರಕರ್ತರ ಜತೆ ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳಿಗೆ ರೈಫ‌ಲ್‌ ತರಬೇತಿ ನೀಡುವಂತಹ ಸರಕಾರ ಇದೆ ಎಂಬ ಖಾದರ್‌ ಹೇಳಿಕೆಯನ್ನು ಖಂಡಿಸಿದರು. ತಾಲಿಬಾನ್‌ ಸಂಸ್ಕೃತಿಯ ಬಗ್ಗೆ ಮಾತನಾಡುವ ಖಾದರ್‌ ಜಿಲ್ಲೆಯ ಶಾಂತಿ ಕದಡಲು ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಜನತೆಗೆ ಗೊತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next