ಪ್ಯಾರಿಸ್: ಭಾರತದಲ್ಲಿ ಹೆಚ್ಚಿನ ತಾಪಮಾನದಿಂದಾಗಿ ಗೋಧಿ ಬೆಳೆಗಳಿಗೆ ಹಾನಿಯಾಗಿದ್ದು, ದೇಶದಲ್ಲಿ ಗೋಧಿ ಪೂರೈಕೆಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗೋಧಿ ರಫ್ತಿಗೆ ಈಗಾಗಲೇ ನಿಷೇಧ ಹೇರಿದೆ.
ಈ ನಿಷೇಧದಿಂದಾಗಿ ಗೋಧಿಗಾಗಿ ಭಾರತವನ್ನು ಅವಲಂಬಿಸಿದ್ದ ಹಲವು ದೇಶಗಳ ಮೇಲೆ ಭಾರೀ ಹೊಡೆತ ಬಿದ್ದಿದೆ.
ಐರೋಪ್ಯ ಒಕ್ಕೂಟದಲ್ಲಿ ಗೋಧಿ ಬೆಲೆಯು ಗಗನಕ್ಕೇರಿದೆ. ಫ್ರಾನ್ಸ್‌ನಲ್ಲಿ ಇದು ಸಾರ್ವಕಾಲಿಕ ದಾಖಲೆ ಬರೆದಿದೆ. ಈಗಾಗಲೇ ಉಕ್ರೇನ್‌ನಿಂದ ಗೋಧಿ ಆಮದು ಇಲ್ಲದ ಹಿನ್ನೆಲೆ ಗೋಧಿ ಬೆಲೆ ಏರಿಕೆ ಮಾಡಿದ್ದ ಫ್ರಾನ್ಸ್‌ನಲ್ಲಿ ಸೋಮವಾರ ಗೋಧಿಯ ಬೆಲೆ ಟನ್‌ಗೆ 35,250 ರೂ. ತಲುಪಿದೆ.
ಭಾರತದಿಂದ ಗೋಧಿ ರಫ್ತನ್ನು ನಿರ್ಬಂಧಿಸಿದ ನಂತರ ದೇಸೀ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ಇಳಿಕೆ ಕಂಡಿದೆ. ಆದರೆ ಕೇಂದ್ರದ ಈ ನಿರ್ಧಾರ ರೈತ ವಿರೋಧಿ ಎಂದು ಪಂಜಾಬ್‌ನ ರೈತ ಸಂಘಟನೆಗಳು ದೂರಿವೆ.
Related Articles
ಭಾರತದ ಪರ ನಿಂತ ಚೀನ
ಗೋಧಿ ರಫ್ತು ನಿಷೇಧ ವಿಚಾರದಲ್ಲಿ ಅಚ್ಚರಿಯೆಂಬಂತೆ ಚೀನವು ಭಾರತದ ಪರ ನಿಂತಿದೆ. ರಫ್ತಿಗೆ ನಿಷೇಧ ಹೇರಿದ್ದಕ್ಕೆ ಜಿ7 ಶೃಂಗಸಭೆಯಲ್ಲಿ ಭಾರತದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಭಾರತವನ್ನು ಟೀಕಿಸಿರುವುದಕ್ಕೆ ಚೀನಕಿಡಿ ಕಾರಿದ್ದು, “ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ದೂಷಿಸುವುದರಿಂದ ಜಾಗತಿಕ ಆಹಾರ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಅದೇ ಜಿ7 ರಾಷ್ಟ್ರಗಳು ತಮ್ಮ ದೇಶಗಳಿಂದ ರಫ್ತು ಹೆಚ್ಚಿಸಿ ಆಹಾರ ಬಿಕ್ಕಟ್ಟನ್ನು ಏಕೆ ಪರಿಹರಿಸಬಾರದು?’ ಎಂದು ಪ್ರಶ್ನಿಸಿದೆ.